ಬೆಂಗಳೂರಿನ 980 ಅನಧಿಕೃತ ಕಟ್ಟಡಗಳ ತೆರವಿಗೆ ಸಿದ್ಧತೆ !

Update: 2020-01-15 18:56 GMT

ಬೆಂಗಳೂರು, ಜ.15: ನಗರದಲ್ಲಿ 980 ಅನಧಿಕೃತ ಹಾಗೂ ಅನುಮತಿಯಿಲ್ಲದೆ ನಿರ್ಮಿಸಿರುವ ಕಟ್ಟಡಗಳನ್ನು ಗುರುತಿಸಿರುವ ಬಿಬಿಎಂಪಿ, ತೆರವುಗೊಳಿಸಲು ನೋಟಿಸ್ ನೀಡಿದ್ದು, ತೆರವು ಕಾರ್ಯಾಚರಣೆಗೆ ಸಿದ್ಧತೆ ಮಾಡಿಕೊಂಡಿದೆ.

ಬಿಬಿಎಂಪಿ ಅಧಿಕಾರಿಗಳು ನಡೆಸಿದ ಸಮೀಕ್ಷೆಯಲ್ಲಿ 980 ಅನಧಿಕೃತ ಕಟ್ಟಡಗಳನ್ನು ಗುರುತಿಸಲಾಗಿದೆ. ಕೆಲವು ಮನೆಗಳು ನಕ್ಷೆಯಲ್ಲಿ ಉಲ್ಲಂಘನೆ ಮಾಡಿದ್ದು ಕಂಡು ಬಂದಿದೆ. ದಕ್ಷಿಣ ವಲಯದಲ್ಲಿ 274, ಮಹದೇವಪುರ-176, ಯಲಹಂಕ-136, ಪೂರ್ವ ವಲಯ-108, ರಾಜರಾಜೇಶ್ವರಿ ನಗರ-108, ಬೊಮ್ಮನಹಳ್ಳಿ-92, ಪಶ್ಚಿಮ ವಲಯ-88 ಹಾಗೂ ದಾಸರಹಳ್ಳಿಯಲ್ಲಿ ಕಾನೂನುಬಾಹಿರವಾಗಿ ನಿರ್ಮಿಸಿರುವ ಮೂರು ಕಟ್ಟಡಗಳಿಗೆ ಪಾಲಿಕೆ ನೋಟಿಸ್ ನೀಡಿದೆ.

ನಗರದಲ್ಲಿ 1.20 ಲಕ್ಷ ಅನಧಿಕೃತ ಕಟ್ಟಡಗಳು ನಿರ್ಮಾಣಗೊಂಡಿರುವ ಬಗ್ಗೆ ಬಿಬಿಎಂಪಿ ಬಳಿ ಮಾಹಿತಿ ಇದೆ ಎನ್ನಲಾಗಿದೆ. ಆದರೆ, ತೆರವು ಮಾಡಲು ಅಧಿಕಾರವಿದ್ದರೂ, ಕಾರಣಾಂತರಗಳಿಂದ ಸಾಧ್ಯವಾಗುತ್ತಿಲ್ಲ. ನಗರದಲ್ಲಿರುವ 200 ಕ್ಕೂ ಅಧಿಕ ಕೆರೆಗಳು, ಕೆರೆ ಬಫರ್ ವಲಯ, ನೂರಾರು ಕಿ.ಮೀ. ಕಾಲುವೆಗಳ ಮೇಲೆ ಅನಧಿಕೃತವಾಗಿ ಕಟ್ಟಡಗಳು ನಿರ್ಮಾಣಗೊಂಡಿವೆ.

ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಮತ್ತು ಬಿಬಿಎಂಪಿ ಅಧಿಕಾರಿಗಳು ಇದನ್ನು ಗುರುತಿಸಿ ನೋಟಿಸ್ ನೀಡಿ, ತೆರವು ಮಾಡುವುದಕ್ಕೂ ಮೊದಲೇ ಮನೆ ಮಾಲಕರು ನ್ಯಾಯಾಲಯದಿಂದ ತಡೆಯಾಜ್ಞೆ ತರುತ್ತಿದ್ದಾರೆ. ಅಲ್ಲದೆ, ಕೆಲವು ಸ್ಥಳೀಯ ನಾಯಕರು ಪಾಲಿಕೆ ಕೈಗೆತ್ತಿಕೊಂಡ ಕಾರ್ಯಕ್ಕೆ ತಡೆಯನ್ನುಂಟು ಮಾಡುತ್ತಿದ್ದಾರೆ.

ಬಡವರ ಮನೆ ತೆರವು: ರಾಜಕಾಲುವೆ ಹಾಗೂ ಕೆರೆಗಳ ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿದವರಲ್ಲಿ ಬಡವರು ಮತ್ತು ಮಧ್ಯಮ ವರ್ಗದವರು ಮನೆ ಕಳೆದುಕೊಳ್ಳುತ್ತಿದ್ದಾರೆ. ಆದರೆ, ಶ್ರೀಮಂತರು ನಿರ್ಮಿಸಿರುವ ಅನಧಿಕೃತ ಕಟ್ಟಡಗಳ ತೆರವಿಗೆ ಪಾಲಿಕೆ ಹಿಂದೇಟು ಹಾಕುತ್ತಿದೆ. ರಾಜಕಾಲುವೆ ಮೇಲೆ ಅನಧಿಕೃತವಾಗಿ ನಿರ್ಮಾಣವಾಗಿದ್ದ 2,626 ಅನಧಿಕೃತ ಮನೆಗಳಲ್ಲಿ ಬಡವರು ಹಾಗೂ ಮಧ್ಯಮ ವರ್ಗದ 1,600 ಕಟ್ಟಡಗಳು ತೆರವುಗೊಳಿಸಲಾಗಿದೆ.

ಅನುಮತಿಯಿಲ್ಲದೆ ಮನೆ ನಿರ್ಮಾಣ: ನಗರ ಜಿಲ್ಲೆಯ ವಿವಿಧ ತಾಲೂಕುಗಳು ಬಿಬಿಎಂಪಿ ವ್ಯಾಪ್ತಿಗೆ ಒಳಪಡುವ ಮೊದಲ ಗ್ರಾಮ ಪಂಚಾಯಿತಿಯಿಂದ ಅನುಮತಿ ಪಡೆದು ಮನೆಗಳನ್ನು ನಿರ್ಮಿಸಿಕೊಳ್ಳುತ್ತಿದ್ದರು. ಈಗ ಬಿಬಿಎಂಪಿ ವಲಯಕ್ಕೆ ಸೇರಿದ್ದರೂ, ‘ಬಿ’ ಖಾತೆ ಹೊಂದಿರುವ ಅನೇಕ ಜಮೀನುಗಳಲ್ಲಿ ಮೂರು ಲಕ್ಷಕ್ಕೂ ಅಧಿಕ ಮನೆಗಳನ್ನು ಅನುಮತಿಯಿಲ್ಲದೆ ನಿರ್ಮಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News