ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿವಾದ ಪ್ರಸ್ತಾವಿಸುವ ಚೀನಾದ ಯತ್ನ ಮತ್ತೊಮ್ಮೆ ವಿಫಲ

Update: 2020-01-16 14:25 GMT

ವಾಷಿಂಗ್ಟನ್, ಜ.15: ವಿಶ್ವಸಂಸ್ಥೆಯ ಭದ್ರತಾ ಕೌನ್ಸಿಲ್‌ನ ಮುಚ್ಚಿದ ಕೊಠಡಿಯಲ್ಲಿ ಬುಧವಾರ ನಡೆದ ಸಮಾಲೋಚನಾ ಸಭೆಯಲ್ಲಿ ಪಾಕಿಸ್ತಾನದ ಪರವಾಗಿ ಕಾಶ್ಮೀರ ವಿವಾದವನ್ನು ಪ್ರಸ್ತಾವಿಸಲು ಚೀನಾ ಮತ್ತೊಮ್ಮೆ ಪ್ರಯತ್ನಿಸಿದೆ. ಇದಕ್ಕೆ ಫ್ರಾನ್ಸ್ ಸಹಿತ ಇತರ ಖಾಯಂ ಸದಸ್ಯ ರಾಷ್ಟ್ರಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಕಾಶ್ಮೀರ ವಿವಾದ ಭಾರತ ಹಾಗೂ ಪಾಕಿಸ್ತಾನದ ದ್ವಿಪಕ್ಷೀಯ ವಿಚಾರವಾಗಿದೆ ಎಂದಿವೆ.

ಕಳೆದ ವರ್ಷ ಆಗಸ್ಟ್‌ನಲ್ಲಿ ಕಾಶ್ಮೀರ ವಿಚಾರವನ್ನು ಅಂತರ್‌ರಾಷ್ಟ್ರೀಕರಣಗೊಳಿಸಲು ಯತ್ನಿಸಿದ್ದ ಚೀನಾ ಇದೀಗ ಎರಡನೇ ಬಾರಿ ಈ ಪ್ರಯತ್ನಕ್ಕೆ ಕೈಹಾಕಿ ವಿಫಲವಾಗಿದೆ.

ಕಾಶ್ಮೀರ ವಿಚಾರವನ್ನು ದ್ವಿಪಕ್ಷೀಯ ಮಾತುಕತೆಯಿಂದ ಬಗೆಹರಿಸಿಕೊಳ್ಳಬೇಕು. ನಾವು ಈ ವಿಚಾರವನ್ನು ಹಲವು ಬಾರಿ ಹೇಳಿದ್ದೇವೆ ಎಂದು ಫ್ರಾನ್ಸ್ ರಾಜತಾಂತ್ರಿಕ ಮೂಲಗಳು ವಿಶ್ವ ಸಂಸ್ಥೆಯ ಕೌನ್ಸಿಲ್ ಸಭೆ ಆರಂಭಕ್ಕೆ ಮೊದಲೇ ಭಾರತದ ಸುದ್ದಿಸಂಸ್ಥೆಗೆ ತಿಳಿಸಿದೆ.

ಕಾಶ್ಮೀರ ವಿಚಾರ ದ್ವಿಪಕ್ಷೀಯ ಮಾತುಕತೆಯಿಂದ ಬಗೆಹರಿಯಬೇಕು. ಈ ವಿಚಾರದ ಕುರಿತು ಭದ್ರತಾ ಕೌನ್ಸಿಲ್ ಸಭೆಯಲ್ಲಿ ಚರ್ಚಿಸುವ ಅಗತ್ಯವಿಲ್ಲ ಎಂದು ವಿಶ್ವಸಂಸ್ಥೆ ಹೇಳಿದೆ ಎಂದು ಮೂಲಗಳೂ ತಿಳಿಸಿವೆ. ರಶ್ಯ ಹಾಗೂ ಜರ್ಮನಿ ದೇಶಗಳು ಕೂಡ ವಿಶ್ವಸಂಸ್ಥೆಯ ಆಗ್ರಹಕ್ಕೆ ಧ್ವನಿಗೂಡಿಸಿವೆ.

ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದ ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಸಯ್ಯದ್ ಅಕ್ಬರುದ್ದೀನ್‌‘‘ಇಂತಹ ಫಲಿತಾಂಶವನ್ನು ನಾವು ನಿರೀಕ್ಷಿಸಿದ್ದೆವು’’ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News