ಸಸ್ಯಕಾಶಿಯಲ್ಲಿ ಸ್ಥಾಪನೆಯಾದ ಕನ್ಯಾಕುಮಾರಿ ವಿವೇಕಾನಂದರ ಸ್ಮಾರಕ ಮಾದರಿ

Update: 2020-01-17 14:25 GMT

ಬೆಂಗಳೂರು, ಜ.17: ನಗರದ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ 80x40 ಅಡಿ ಅಳತೆಯ ಕನ್ಯಾಕುಮಾರಿಯ ಸ್ವಾಮಿ ವಿವೇಕಾನಂದ ಸ್ಮಾರಕದ ಪುಷ್ಪ ಮಾದರಿ, ಚಿಕಾಗೋ ವಿವೇಕಾನಂದರ ಸ್ಮಾರಕದ ಪುಷ್ಪ ಮಾದರಿಯು ನೋಡುಗರ ಕಣ್ಣು ಸೆಳೆಯುತ್ತಿದ್ದು, ಇಲ್ಲಿನ ಗಾಜಿನಮನೆಯ ಪೂರ್ತಿ ವಿವೇಕವಾಣಿಯಿಂದ ಕಂಗೊಳಿಸುತ್ತಿದೆ.

ತೋಟಗಾರಿಕೆ ಇಲಾಖೆ ಹಾಗೂ ಮೈಸೂರು ಉದ್ಯಾನ ಕಲಾಸಂಘ ಗಣರಾಜೋತ್ಸವದ ಅಂಗವಾಗಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದರು. ಈ ವೇಳೆ ತೋಟಗಾರಿಕೆ ಸಚಿವ ವಿ.ಸೋಮಣ್ಣ, ಮೇಯರ್ ಗೌತಮ್ ಕುಮಾರ್, ಇಲಾಖೆ ನಿರ್ದೇಶಕ ವಿ.ವೆಂಕಟೇಶ್ ಸೇರಿದಂತೆ ಹಲವರಿದ್ದರು. ಶಿಲ್ಪಿ ಬಿ.ಪಿ.ಶಿವಕುಮಾರ ಸಿದ್ಧಪಡಿಸಿರುವ ವಿವೇಕಾನಂದರ 16 ಅಡಿ ಎತ್ತರದ ಆಕರ್ಷಕ ಪ್ರತಿಮೆ ಜನರ ಆಕರ್ಷಣೆಯಾಗುತ್ತಿದ್ದರೆ, ಪಕ್ಕದಲ್ಲಿಯೇ ಇರುವ 1970 ರಂದು ಕನ್ಯಾಕುಮಾರಿಯಲ್ಲಿ ಉದ್ಘಾಟನೆಗೊಂಡಿರುವ ವಿವೇಕಾನಂದ ಸ್ಮಾರಕವು ಮತ್ತಷ್ಟು ಅಂದವನ್ನು ಹೆಚ್ಚಿಸಿದ್ದು, ಗಾಜಿನ ಮನೆಯ ಹೃದಯಭಾಗದಲ್ಲಿ ಇದು ನಿರ್ಮಾಣ ಮಾಡಲಾಗಿದೆ. ಇನ್ನು 36 ಅಡಿ ಉದ್ದದ ಬಂಡೆಯ ಮಾದರಿಯ ಮೇಲೆ ದೇವಾಲಯದ ಮಾದರಿ ನಿರ್ಮಾಣ ಮಾಡಿದ್ದು, ಇದಕ್ಕೆ 75 ಸಾವಿರ ಕೆಂಪು, ಬಿಳಿ ಹಾಗೂ ಹಳದಿ, 75 ಸಾವಿರ ಬಂಗಾರ ಬಣ್ಣದ ಸೇವಂತಿಗೆ, 3 ಸಾವಿರ ವಿವಿಧ ಜಾತಿಯ ಎಲೆಗಳನ್ನು ಬಳಸಿ ನಿರ್ಮಿಸಿದ್ದು ಮತ್ತಷ್ಟು ಅಂದವನ್ನು ಹೆಚ್ಚಿಸಿದೆ.

ಕನ್ಯಾಕುಮಾರಿ ಸ್ಮಾರಕದ ಎಡಬದಿಯಲ್ಲಿ ವಿವೇಕಾನಂದರು ಚಿಕಾಗೋ ವಿಶ್ವಧರ್ಮ ಸಮ್ಮೇಳನದ ಭಾಷಣ ಮಾಡಿದ ಸಂದರ್ಭಕ್ಕೆ 127 ವರ್ಷಗಳು ಸಂದುತ್ತಿರುವ ಗಳಿಗೆಯಲ್ಲಿ ನಿರ್ಮಿಸಿರುವ ಚಿಕಾಗೋ ವಿವೇಕಾನಂದ ಸ್ಮಾರಕದ ಪುಷ್ಪ ಮಾದರಿ ಎಲ್ಲರನ್ನೂ ಆದರದಿಂದ ಬರಮಾಡಿಕೊಳ್ಳುತ್ತಿದೆ. ಅಲ್ಲಿ, ಆಂಗ್ಲದಲ್ಲಿ ವಿವೇಕಾನಂದ ಭಾಷಣ ಪ್ರಸಾರವಾಗುತ್ತಿದ್ದು, ನಿಜವಾಗಿಯೂ ವಿವೇಕಾನಂದರೇ ಆಗಮಿಸಿದಂತೆ ಭಾಸವಾಗುವಂತೆ ಕಲ್ಪಿಸಲಾಗಿದೆ.

ಗಾಜಿನ ಮನೆಯ ಕೇಂದ್ರ ಭಾಗದ ಬಲಬದಿಗೆ ಮಾದರಿ ವಿವೇಕಾನಂದರ ಸ್ಮತಿಯೊಂದಿಗೆ ಪ್ರದರ್ಶಿಸಲಾಗಿದೆ. ಬೆಂಗಳೂರಿನ ಮೆಜೆಸ್ಟಿಕ್ ಪ್ರದೇಶದ ಕಾಳಪ್ಪ ಛತ್ರದಲ್ಲಿದ್ದ ಕಲ್ಲು ಬೆಂಚಿನ ಮಾದರಿಯನ್ನು ಸ್ಥಾಪಿಸಲಾಗಿದೆ. ಇಲ್ಲಿ ವಿವೇಕಾನಂದರ ಕುಳಿತ ಮಾದರಿ ಇರಲಿದೆ. ಇದು 11 ಅಡಿ ಎತ್ತರವಿರಲಿದ್ದು, ಎರಡೂ ಬದಿಯಲ್ಲಿ ಅಷ್ಟೂ ಎತ್ತರದ ವರ್ಟಿಕಲ್ ಗಾರ್ಡನ್‌ನ 2 ಕಮಾನುಗಳನ್ನು ನಿರ್ಮಿಸಲಾಗಿದೆ.

ಇಲ್ಲಿ ಒಳಭಾಗದ ಎಲ್ಲ ಮೂಲೆಗಳಲ್ಲಿ ವಿವಿಧ ಆಕರ್ಷಕ ಬಣ್ಣದ ಹೂವುಗಳ ಪಿರಮಿಡ್ಡುಗಳು ರಚನೆಯಾಗಿವೆ. ಪ್ರತಿ ಪಿರಮಿಡ್ಡಿನ ತುದಿಯಲ್ಲಿ ಆಕರ್ಷಕ ಉಬ್ಬು ಶಿಲ್ಪವನ್ನು ಸಂಯೋಜನೆ ಮಾಡಲಾಗಿದೆ. ಪ್ರತಿ ಉಬ್ಬುಶಿಲ್ಪವು 3 ಅಡಿವ್ಯಾಸದ ವೃತ್ತಾಕಾರದಲ್ಲಿದ್ದು, ನಾನಾ ವರ್ಣಗಳಿಂದ ಕೂಡಿರುವುದು ಜನರನ್ನು ಸೆಳೆಯುತ್ತಿದೆ.

ಗಾಜಿನ ಮನೆಯ ಕನ್ಯಾಕುಮಾರಿ ಸ್ಮಾರಕದ ಪುಷ್ಪ ಮಾದರಿ ಹಿಂಭಾಗದಲ್ಲಿ ವಿವೇಕಾನಂದ, ರಾಮಕೃಷ್ಣ ಪರಮಹಂಸ, ಶಾರದಾದೇವಿ, ಮೂರು ಅಡಿ ಎತ್ತರದ ಆಸೀನ ಪ್ರತಿಮೆಗಳ ಪ್ರದರ್ಶನವಿದೆ. ಒಳಭಾಗದಲ್ಲಿ ವಿವೇಕಾನಂದರ ಅಪರೂಪದ ಚಿತ್ರಗಳನ್ನು ಮಾಹಿತಿಯೊಂದಿಗೆ ಪ್ರದರ್ಶಿಸಲಾಗಿದೆ. ಅಲ್ಲದೆ, ಸ್ಪೂರ್ತಿದಾಯಕ ಘೋಷಣೆಗಳು, ಸೂಕ್ತಿಗಳು, ಅಭಿಪ್ರಾಯ, ಕನ್ನಡ ಕವಿತೆಗಳು, ಅನುವಾದಗಳು ಸೇರಿ 100 ಫಲಕಗಳನ್ನು ಪ್ರದರ್ಶಿಸಲಾಗಿದೆ.

ವಿದೇಶಿ ಹೂಗಳ ವಿಶೇಷ ಪ್ರದರ್ಶನ, ಪುಷ್ಪಗಳಿಂದ ಅರಳಿದ ವಿವೇಕಾನಂದ ಹಾಗೂ ಪಾಯಿಸಿಟಿಯಾ ಹೂಗಳ ಆಕರ್ಷಕ ಲಂಬ ಜೋಡಣೆ, ಗಾಜಿನ ಮನೆಯಲ್ಲಿ ವೈವಿದ್ಯಮಯ ಪ್ರದರ್ಶನ, ವಾರ್ಷಿಕ ಹೂಗಳ ರಂಗು, ಬ್ಯಾಂಡ್‌ಗಳ ಹಿಮ್ಮೇಳ, ವಿವೇಕಾನಂದರ ಮಾಹಿತಿ ಪ್ರದರ್ಶನ, ಗಾಜಿನ ಮನೆ ಮುಂಭಾಗ ವಿವೇಕ ಗಾಯನ ಏರ್ಪಡಿಸಲಾಗಿತ್ತು. ಅಲ್ಲದೆ, ನೂರಾರು ಮಕ್ಕಳಿಂದ ವಿವೇಕಾನಂದರ ವೇಷದ ಮೂಲಕ ವಿವೇಕ ಸಂದೇಶ ರವಾನಿಸುವ ಪ್ರಯತ್ನ ಮಾಡಲಾಯಿತು.

ಆಯ್ದ ಪ್ರದೇಶಗಳಲ್ಲಿ ವಿಶೇಷತೆಗಳು: ಸ್ವಾಮಿ ವಿವೇಕಾನಂದರ ಚಿತ್ರ ಪ್ರದರ್ಶನ, ವಿವೇಕಾನಂದರ ಸಾಕ್ಷಚಿತ್ರ ಪ್ರದರ್ಶನ, ವಿವೇಕಾನಂದರ ಕುರಿತ ಪುಸ್ತಕ ಪ್ರದರ್ಶನ ಮತ್ತು ಮಾರಾಟ, ಫಲಭರಿತ ತರಕಾರಿಗಳ ಆಕರ್ಷಣೆ, ಸಸ್ಯ ಸಂತೆ, ವಿಶೇಷ ರಚನೆಯಾಕಾರದಲ್ಲಿ ಹೂಗಳ ಪ್ರದರ್ಶನ, ವಿವೇಕಾನಂದರ ನೀತಿಗಳ ಕುರಿತ ದೃಶ್ಯ ಪ್ರಾತ್ಯಕ್ಷಿತೆ, ಘೋಷಣೆಗಳು-ಸೂಕ್ತಿಗಳು, ಜಲಪಾತ ಸೇರಿದಂತೆ ಹಲವು ಆಕರ್ಷಣೆಗಳನ್ನು ಕಣ್ಣು ತುಂಬಿಕೊಳ್ಳಬಹುದು.

ಪ್ರವೇಶ ಶುಲ್ಕ

ರಜೆ ಹಾಗೂ ಸಾಮಾನ್ಯ ದಿನಗಳು ಸೇರಿದಂತೆ ಎಲ್ಲಾ ದಿನಗಳಲ್ಲೂ ವಯಸ್ಕರಿಗೆ 70 ರೂ. ಹಾಗೂ ಮಕ್ಕಳಿಗೆ 20 ರೂ. ನಿಗದಿ ಮಾಡಲಾಗಿದೆ. ಲಾಲ್‌ಬಾಗ್‌ನ ನಾಲ್ಕೂ ಪ್ರವೇಶ ದ್ವಾರಗಳಲ್ಲಿ ಟಿಕೆಟ್ ನೀಡಲಾಗುತ್ತಿದೆ.

ಉಚಿತ ಪ್ರವೇಶ

ಶಾಲಾ ಮಕ್ಕಳಿಗಾಗಿ ಜ.18, 20, 21, 22, 23 ಮತ್ತು 24 ರಂದು ಉಚಿತ ಪ್ರವೇಶ ಅವಕಾಶ ಕಲ್ಪಿಸಲಾಗಿದೆ. ಈ ದಿನಗಳಲ್ಲಿ ಬೆ.9 ರಿಂದ ಸಂತೆ 5 ಗಂಟೆವರೆಗೆ ಖಾಸಗಿ ಹಾಗೂ ಸರಕಾರಿ ಶಾಲಾ ಮಕ್ಕಳು ಭೇಟಿ ನೀಡಬಹುದಾಗಿದೆ.

ಪಾರ್ಕಿಂಗ್ ವ್ಯವಸ್ಥೆ

ಲಾಲ್‌ಬಾಗ್‌ನೊಳಗೆ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ. ಡಬ್ಬಲ್ ರೋಡ್ ಗೇಟ್‌ನಲ್ಲಿ ಕೇವಲ ಶಾಲಾ ಮಕ್ಕಳ ವಾಹನ, ವಿಕಲಚೇನರಿಗೆ ಮಾತ್ರ ಅವಕಾಶ ಕಲ್ಪಿಸಲಾಗುವುದು. ಉಳಿದಂತೆ ಶಾಂತಿನಗರ ಬಸ್ ನಿಲ್ದಾಣ, ಜೆ.ಸಿ. ರಸ್ತೆಯ ಮಯೂರ ರೆಸ್ಟೋರೆಂಟ್ ಬಳಿಯಿರುವ ಬಿಬಿಎಂಪಿ ಬಹುಮಹಡಿ ವಾಹನ ನಿಲ್ದಾಣದಲ್ಲಿ ವಾಹನಗಳನ್ನು ನಿಲ್ಲಿಸಬೇಕು. ಜತೆಗೆ ಅಲ್‌ ಅಮೀನ್ ಕಾಲೇಜಿನ ಮೈದಾನದಲ್ಲಿ ದ್ವಿಚಕ್ರ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.

ವಿವೇಕಾನಂದರ ಸ್ಮರಣಾರ್ಥ ಆಯೋಜಿಸಿರುವ ಫಲಪುಷ್ಪ ಪ್ರದರ್ಶನ ವಿಶೇಷವಾದುದಾಗಿದೆ. ವಿವೇಕಾನಂದರ ಕುರಿತು, ಅವರ ಜೀವನದ ಬಗ್ಗೆ ಅತ್ಯಂತ ಒಳ್ಳೆಯ ಮಾಹಿತಿಯನ್ನು ತೋಟಗಾರಿಕೆ ಇಲಾಖೆ ಪ್ರದರ್ಶಿಸಿದೆ. ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಇದನ್ನು ವೀಕ್ಷಿಸಲಿ.

-ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ

ಫಲಪುಷ್ಪ ಪ್ರದರ್ಶನದಲ್ಲಿ ಸ್ವಾಮಿ ವಿವೇಕಾನಂದರ ವ್ಯಕ್ತಿತ್ವ, ವಿಚಾರಧಾರೆಯನ್ನು ಕಟ್ಟಿಕೊಡಲಾಗಿದ್ದು, ಅಚ್ಚುಕಟ್ಟಾಗಿ ಆಯೋಜಿಸಿದ್ದಾರೆ. 16 ಅಡಿ ಎತ್ತರದ ಪ್ರತಿಮೆ ಆಕರ್ಷಣಿಯವಾಗಿದ್ದು, ಗಾಜಿನಮನೆಯಲ್ಲಿ ವಿವೇಕಾನಂದ ಸಂದೇಶಗಳ ಫಲಕಗಳು ರಾರಾಜಿಸುತ್ತಿರುವುದು ಖುಷಿ ತಂದಿತು.

-ಮನೋಹರ್, ನಿವೃತ್ತ ಪ್ರಾಧ್ಯಾಪಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News