ಸಮಾಜ ವಿಜ್ಞಾನದ ಬೆಳವಣಿಗೆಗೆ ಅಗತ್ಯ ನೀತಿ ಜಾರಿ: ಸಿಎಂ ಯಡಿಯೂರಪ್ಪ

Update: 2020-01-17 17:36 GMT

ಬೆಂಗಳೂರು, ಜ.17: ರಾಜ್ಯದಲ್ಲಿ ಸಮಾಜ ವಿಜ್ಞಾನದ ಬೆಳವಣಿಗೆಗೆ ಅಗತ್ಯವಾದ ನೀತಿಗಳನ್ನು ರೂಪಿಸಲು ಸರಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಶುಕ್ರವಾರ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ ಹಾಗೂ ಭಾರತೀಯ ಸಮಾಜ ವಿಜ್ಞಾನ ಸಂಘ ಜಂಟಿಯಾಗಿ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ 43ನೇ ಭಾರತೀಯ ಸಮಾಜ ವಿಜ್ಞಾನ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಸಮಾವೇಶದಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ನೀತಿಯಾಗಿ ಜಾರಿಗೆ ತರುವ ವ್ಯವಸ್ಥೆಯಾಗಬೇಕೆಂದರು. ಉತ್ತಮ ಬದುಕಿಗೆ ಸಮಾಜ ವಿಜ್ಞಾನದ ಸಂಶೋಧನೆ ಅಗತ್ಯ, ವಿಜ್ಞಾನ ಮತ್ತು ಸಮಾಜ ಜತೆ ಜತೆಯಾಗಿ ಮುನ್ನಡೆಯಬೇಕು. ಸಮಾಜ ವಿಜ್ಞಾನ ಆಡಳಿತ ನಡೆಸುವವರಿಗೆ ಮತ್ತು ನೀತಿ ನಿರೂಪಕರಿಗೆ, ಸರಕಾರೇತರ ಸಂಸ್ಥೆಗಳಿಗೆ ಮಹತ್ವದ ಮಾಹಿತಿಗಳನ್ನು ಒದಗಿಸುತ್ತದೆ ಎಂದು ಅವರು ಹೇಳಿದರು.

ಸಮಾಜ ವಿಜ್ಞಾನ ಮತ್ತು ವಿಜ್ಞಾನ ಎರಡು ಒಂದಕ್ಕೊಂದು ಬೆರೆಯಬೇಕು. ಇದರಿಂದ ಹೆಚ್ಚಿನ ಅರಿವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದ ಅವರು, ವಿಜ್ಞಾನಿಗಳು ಹಾಗೂ ಸಮಾಜ ವಿಜ್ಞಾನಿಗಳು ದೇಶ ಮತ್ತು ಸಮಾಜದ ಹಿತದೃಷ್ಟಿಯಿಂದ ಒಟ್ಟಿಗೆ ಕಾರ್ಯನಿರ್ವಹಿಸಬೇಕು ಎಂದು ಅವರು ಆಶಿಸಿದರು.

ವಿಜ್ಞಾನಿ ಪದ್ಮವಿಭೂಷಣ ಪ್ರೊ.ರೊದ್ದಾಂ ನರಸಿಂಹ ಮಾತನಾಡಿ, ಪ್ರಾಚೀನ ನಾಗರಿಕತೆ ಮೊದಲು ಬೆಳವಣಿಗೆ ಹೊಂದಿದ್ದು ಭಾರತ ಮತ್ತು ಚೀನಾದಲ್ಲಿ. ಆದರೆ, ಇಂದು ನಾವು ಆಧುನಿಕ ವಿಜ್ಞಾನ ರಂಗದಲ್ಲಿ ಹಿಂದೆ ಬಿದ್ದಿದ್ದೇವೆ. ಯುರೋಪ್ ಆಧುನಿಕ ವಿಜ್ಞಾನದಲ್ಲಿ ಮುಂಚೂಣಿಯಲ್ಲಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ನಾವು ಸಾಧಿಸಬೇಕಿರುವುದು ಸಾಕಷ್ಟಿದೆ ಎಂದರು.

ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಚೀನಾ ಅಮೆರಿಕಾದೊಂದಿಗೆ ಪೈಪೋಟಿಗೆ ಇಳಿದಿದ್ದರೆ, ಮೂರನೇ ಸ್ಥಾನದಲ್ಲಿ ಇರಬೇಕಿದ್ದ ನಾವು ಈ ಕ್ಷೇತ್ರದಲ್ಲಿ ಹಿಂದೆ ಬಿದ್ದಿದ್ದೇವೆ. ಭಾರತದಲ್ಲಿ ಪ್ರತಿಭೆಗೆ ಬರವಿಲ್ಲ. ಆದರೆ, ಪ್ರತಿಭೆಗೆ ತಕ್ಕ ಮನ್ನಣೆ ದೊರೆಯುತ್ತಿಲ್ಲ. ವಿದೇಶದಲ್ಲಿ ನೆಲೆಸಿರುವ ಭಾರತೀಯರು ಗಮನಾರ್ಹ ಸಾಧನೆ ತೋರುತ್ತಿದ್ದಾರೆ. ಅರ್ಥಶಾಸ್ತ್ರಜ್ಞ ಅಭಿಷೇಕ್ ಬ್ಯಾನರ್ಜಿ ಇದಕ್ಕೆ ಉದಾಹರಣೆ ಎಂದು ತಿಳಿಸಿದರು.

ಸಮಾರಂಭದಲ್ಲಿ ವಸತಿ ಸಚಿವ ಸೋಮಣ್ಣ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಪ್ರೊ.ರೊದ್ದಾಂ ನರಸಿಂಹ, ಪ್ರೊ.ಬಯ್ಸೊನಾಬ್ ಸಿ. ತ್ರಿಪಾಠಿ, ಕೇಂದ್ರ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಎಸ್. ಜಾಫೆಟ್ ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News