ಕೇರಳದಿಂದ ರಾಹುಲ್ ಗಾಂಧಿ ಆಯ್ಕೆ ದೊಡ್ಡ ದುರಂತ: ರಾಮಚಂದ್ರ ಗುಹಾ

Update: 2020-01-18 04:12 GMT

ಕೋಝಿಕ್ಕೋಡ್, ಜ.18: ಕಠಿಣ ಪರಿಶ್ರಮಿ ಮತ್ತು ಸ್ವಯಂ ರೂಪುಗೊಂಡ ನಾಯಕ, ಪ್ರಧಾನಿ ನರೇಂದ್ರ ಮೋದಿಯವರ ಎದುರು ಐದನೇ ಪೀಳಿಗೆಯ ಅಧಿಕಾರಸ್ಥ ರಾಹುಲ್‌ ಗಾಂಧಿಗೆ ಯಾವ ಅವಕಾಶವೂ ಇಲ್ಲ. ರಾಹುಲ್ ಅವರನ್ನು ಕೇರಳದಿಂದ ಸಂಸತ್ತಿಗೆ ಆಯ್ಕೆ ಮಾಡಿರುವುದು ದೊಡ್ಡ ದುರಂತ ಎಂದು ಇತಿಹಾಸಗಾರ ರಾಮಚಂದ್ರ ಗುಹಾ ಹೇಳಿದ್ದಾರೆ.

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ದೇಶದ ಶ್ರೇಷ್ಠ ಪಕ್ಷವಾಗಿದ್ದ ಕಾಂಗ್ರೆಸ್ ಇದೀಗ "ದಯನೀಯ ಸ್ಥಿತಿಯಲ್ಲಿರುವ ಕುಟುಂಬ ಸಂಸ್ಥೆ"ಯಾಗಿದೆ. ದೇಶದಲ್ಲಿ ಹಿಂದುತ್ವ ಮತ್ತು ಅತಿರೇಕದ ರಾಷ್ಟ್ರಪ್ರೇಮ ತಲೆ ಎತ್ತಲು ಇದೂ ಒಂದು ಕಾರಣ ಎಂದು ಗುಹಾ ವಿಶ್ಲೇಷಿಸಿದರು.

"ವೈಯಕ್ತಿಕವಾಗಿ ನನಗೆ ರಾಹುಲ್ ವಿರುದ್ಧ ಏನೂ ಇಲ್ಲ. ಆತ ಸಭ್ಯ ಹಾಗೂ ಸನ್ನಡತೆಯ ವ್ಯಕ್ತಿ. ಆದರೆ ಯುವ ಭಾರತ ಐದನೇ ಪೀಳಿಗೆಯ ರಾಜವಂಶಸ್ಥರನ್ನು ಇಷ್ಟಪಡುವುದಿಲ್ಲ. 2024ರಲ್ಲಿ ಕೂಡಾ ಅವರನ್ನು ಮರು ಆಯ್ಕೆ ಮಾಡುವ ಪ್ರಮಾದವನ್ನು ಮಲಯಾಳಿಗಳು ಮಾಡಿದರೆ, ಅದು ನರೇಂದ್ರ ಮೋದಿಯವರಿಗೆ ಪರೋಕ್ಷವಾಗಿ ನೆರವು ನೀಡಿದಂತೆ" ಎಂದು ಕೇರಳ ಸಾಹಿತ್ಯ ಉತ್ಸವದಲ್ಲಿ "ರಾಷ್ಟ್ರಪ್ರೇಮ ಮತ್ತು ಅತಿರೇಕದ ರಾಷ್ಟ್ರಪ್ರೇಮ" ಎಂಬ ವಿಷಯದ ಬಗ್ಗೆ ಮಾತನಾಡಿದ ಅವರು ಅಭಿಪ್ರಾಯಪಟ್ಟರು.

"ಕೇರಳಿಗರು ಭಾರತಕ್ಕಾಗಿ ಅದ್ಭುತ ಕೆಲಸಗಳನ್ನು ಮಾಡಿದ್ದೀರಿ. ಆದರೆ ನೀವು ಮಾಡಿದ ಪ್ರಮಾದವೆಂದರೆ ರಾಹುಲ್‌ ಗಾಂಧಿಯವರನ್ನು ಸಂಸತ್ತಿಗೆ ಆಯ್ಕೆ ಮಾಡಿದ್ದು" ಎಂದು ಹೇಳಿದರು.

"ನರೇಂದ್ರ ಮೋದಿಯವರಿಗೆ ಇರುವ ದೊಡ್ಡ ಅನುಕೂಲವೆಂದರೆ ಅವರು ರಾಹುಲ್‌ ಗಾಂಧಿ ಅಲ್ಲದಿರುವುದು. ಅವರು ಸ್ವಯಂ ರೂಪಿತ ವ್ಯಕ್ತಿ. 15 ವರ್ಷಗಳ ಕಾಲ ರಾಜ್ಯವೊಂದನ್ನು ಮುನ್ನಡೆಸಿದ್ದಾರೆ. ಆಡಳಿತದ ಅನುಭವ ಇದೆ. ನಂಬಲಸಾಧ್ಯ ಕಠಿಣ ಪರಿಶ್ರಮಿ. ಅವರೆಂದೂ ಯುರೋಪ್‌ನಲ್ಲಿ ವಿಹಾರಕ್ಕೆ ತೆರಳಿಲ್ಲ. ಈ ಎಲ್ಲವನ್ನೂ ಗಂಭೀರವಾಗಿ ಹೇಳುತ್ತಿದ್ದೇನೆ" ಎಂದು ವಿವರಿಸಿದರು.

ರಾಹುಲ್ ಗಾಂಧಿಯವರು ಮೋದಿಗಿಂತ ಹೆಚ್ಚು ಬುದ್ಧಿವಂತರಾದರೂ, ಕಠಿಣ ಪರಿಶ್ರಮ ಮಾಡಿದರೂ, ಯೂರೋಪ್‌ಗೆ ವಿಹಾರಕ್ಕೆ ತೆರಳದಿದ್ದರೂ ಐದನೇ ತಲೆಮಾರಿನ ರಾಜವಂಶಸ್ಥ ಎನ್ನುವುದು ಅವರಿಗೆ ಇರುವ ಅವಗುಣ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News