ಗುಡಿಯಾ ಅತ್ಯಾಚಾರ ಪ್ರಕರಣ: ಇಬ್ಬರನ್ನು ತಪ್ಪಿತಸ್ಥರೆಂದು ಘೋಷಿಸಿದ ನ್ಯಾಯಾಲಯ

Update: 2020-01-18 14:16 GMT

ಹೊಸದಿಲ್ಲಿ,ಜ.18: ಆರು ವರ್ಷಗಳ ಹಿಂದೆ ದಿಲ್ಲಿಯಲ್ಲಿ ಐದರ ಹರೆಯದ ಬಾಲಕಿಯೋರ್ವಳನ್ನು ಅಪಹರಿಸಿ ಅತ್ಯಾಚಾರವೆಸಗಿದ್ದಕ್ಕಾಗಿ ಇಬ್ಬರನ್ನು ತಪ್ಪಿತಸ್ಥರೆಂದು ಇಲ್ಲಿಯ ನ್ಯಾಯಾಲಯವು ಶನಿವಾರ ಘೋಷಿಸಿದ್ದು, ಜ.30ರಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ.

‘ನಮ್ಮ ಸಮಾಜದಲ್ಲಿ ಕೆಲವು ಸಂದರ್ಭಗಳಲ್ಲಿ ಅಪ್ರಾಪ್ತ ವಯಸ್ಕ ಬಾಲಕಿಯರನ್ನು ದೇವಿ ಎಂದು ಆರಾಧಿಸಲಾಗುತ್ತದೆ. ಆದರೆ ಈ ಪ್ರಕರಣದಲ್ಲಿ ಸಂತ್ರಸ್ತ ಬಾಲಕಿಯು ಅಧಃಪತನಕ್ಕೊಳಗಾಗಿದ್ದಾಳೆ ಮತ್ತು ಘೋರ ಕ್ರೌರ್ಯವನ್ನು ಅನುಭವಿಸಿದ್ದಾಳೆ ಎಂದು ನ್ಯಾಯಾಲಯವು ಹೇಳಿದೆ.

ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಯ ನಾಲ್ಕು ತಿಂಗಳ ಬಳಿಕ 2013ರಲ್ಲಿ ಸಂಭವಿಸಿದ್ದ ಈ ಘಟನೆಯು ಆಘಾತಕಾರಿ ವಿವರಗಳೊಂದಿಗೆ ಪತ್ರಿಕೆಗಳಲ್ಲಿ ಪ್ರಮುಖ ಸುದ್ದಿಯಾಗಿತ್ತು. ಮಾಧ್ಯಮಗಳು ‘ಗುಡಿಯಾ’ ಎಂದು ಹೆಸರಿಸಿದ್ದ ಪೂರ್ವ ದಿಲ್ಲಿಯ ಬಾಲಕಿಯು ಮನೆಯಿಂದ ನಾಪತ್ತೆಯಾಗಿದ್ದು,ಹೆತ್ತವರ ದೂರಿಗೆ ಕಿವಿಗೊಡದ ಪೊಲೀಸರು ಮಗಳನ್ನು ಖುದ್ದಾಗಿ ಹುಡುಕಿಕೊಳ್ಳುವಂತೆ ತಿಳಿಸಿದ್ದರು. ಎರಡು ದಿನಗಳ ಬಳಿಕ ಬಾಲಕಿಯು ಮನೆಯ ಬೇಸ್‌ಮೆಂಟ್‌ನಲ್ಲಿ ಪತ್ತೆಯಾಗಿದ್ದಳು. ಆಕೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದ ಆರೋಪಿಗಳು ಗುಪ್ತಾಂಗಗಳಲ್ಲಿ ಮೋಂಬತ್ತಿಗಳು ಮತ್ತು ಬಾಟ್ಲಿಗಳನ್ನು ಸೇರಿಸಿ ಚಿತ್ರಹಿಂಸೆ ನೀಡಿದ್ದರು.

ದಿಲ್ಲಿ ಪೊಲೀಸರು ಒಂದೇ ವಾರದಲ್ಲಿ ಆರೋಪಿಗಳಾದ ಮನೋಜ ಕುಮಾರ ಮತ್ತು ಪ್ರದೀಪ ಎನ್ನುವವರನ್ನು ಬಂಧಿಸಿದ್ದರಾದರೂ,ಪ್ರಕರಣವು ತೀರ ವಿಳಂಬಗತಿಯಲ್ಲಿ ಮುಂದುವರಿದಿತ್ತು.

ಎರಡು ವರ್ಷಗಳಲ್ಲಿ ವಿಚಾರಣೆ ಪೂರ್ಣಗೊಳ್ಳಬೇಕಿತ್ತಾದರೂ ಕೊನೆಗೂ ನ್ಯಾಯ ದೊರಕಿದ ತೃಪ್ತಿಯಿದೆ ಎಂದು ಬಾಲಕಿಯ ತಂದೆ ಸುದ್ದಿಗಾರರಿಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News