ಅಮಿತ್ ಶಾ ಬಂದಿದ್ದಾರೆ, ಸ್ವಲ್ಪ ಸಮಯ ಇರಿ, ಶಬ್ದ ಮಾಡಬೇಡಿ...!

Update: 2020-01-18 14:16 GMT

ಬೆಂಗಳೂರು, ಜ.18: ಕೇಂದ್ರ ಗೃಹ ಸಚಿವ ಅಮಿತ್ ಶಾ ಸಾಹೇಬರು, ಅರಮನೆ ಮೈದಾನದಲ್ಲಿ ಇದ್ದಾರೆ. ನೀವು ಇಲ್ಲೇ ನಿಲ್ಲಿ. ಎಡ-ಬಲ ತಿರುವು ಮಾರ್ಗ ಬಂದ್ ಆಗಿದೆ. ಸ್ವಲ್ಪ ಸಮಯ ಇರಿ, ಶಬ್ದ ಮಾಡಬೇಡಿ. ಅಲ್ಲಿ ಇಲ್ಲಿ ಏಕೆ ಅಲುಗಾಡುತ್ತೀರಿ...ಹೀಗೆ, ಹತ್ತಾರು ಮಾತುಗಳನ್ನಾಡುವ ಮೂಲಕ ಗಂಟೆಗಟ್ಟಲೆ ಕಾದ ವಾಹನ ಸವಾರರಿಗೆ ಸಂಚಾರ ಪೊಲೀಸರು ಸಮಾಜಾಯಿಷಿ ನೀಡಿದ ಪರಿ ಇದು.

ಶನಿವಾರ ನಗರಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ನಗರದಲ್ಲಿ ಸಂಚರಿಸಿದ ಹಿನ್ನೆಲೆ ಅವರಿಗೆ ದಾರಿ ಸುಗಮಗೊಳಿಸುವುದಕ್ಕೆ ಬಳ್ಳಾರಿ ರಸ್ತೆ, ಅರಮನೆ ಮೈದಾನ, ವಿಧಾನಸೌಧ ಸುತ್ತಮುತ್ತಲ ರಸ್ತೆಗಳಲ್ಲಿ ಖಾಸಗಿ ವಾಹನಗಳ ಸಂಚಾರ ಬಂದ್ ಮಾಡಲಾಗಿತ್ತು. ಇದರ ಪರಿಣಾಮ ಹೆಬ್ಬಾಳ ಮುಖ್ಯ ಮಾರ್ಗ, ಜಯಮಹಲ್ ರಸ್ತೆ, ನಂದಿದುರ್ಗ ರಸ್ತೆ, ಕ್ವೀನ್ಸ್ ರಸ್ತೆ, ಮಿಲರ್ಸ್‌ ರಸ್ತೆಯುದ್ದಕ್ಕೂ ವಾಹನಗಳು ಸಾಲು ಸಾಲಾಗಿ ನಿಂತಿದ್ದ ದೃಶ್ಯ ಕಂಡಿತು.

ಬೆಂಗಳೂರಿನ ಅರಮನೆ ಮೈದಾನದಲ್ಲಿನ ಕಾರ್ಯಕ್ರಮದ ನಂತರ ಹುಬ್ಬಳ್ಳಿಯಲ್ಲಿನ ಸಮಾವೇಶದಲ್ಲಿ ಪಾಲ್ಗೊಳ್ಳಬೇಕೆಂದು ಅಮಿತ್ ಶಾ ಅವರ ಕಾರ್ಯಕ್ರಮಗಳ ಪಟ್ಟಿ ನಿಗದಿಯಾಗಿತ್ತು. ಆದರೆ, ಏಕಾಏಕಿ ಬದಲಾವಣೆಯಾಗಿ, ನಗರದ ಜಯನಗರ ಮತ್ತು ವಿದ್ಯಾಪೀಠ ಕಡೆಗಳಿಗೆ ಅವರು ತೆರಳಿದರು. ಅಮಿತ್ ಶಾ ಅವರಿದ್ದ ವಾಹನ ಹಾಗೂ ಬೆಂಗಾವಲು ವಾಹನಗಳು ಸೇರಿ ಸುಮಾರು 40ಕ್ಕೂ ಹೆಚ್ಚು ವಾಹನಗಳು ರಸ್ತೆ ದಾಟಿ ಹೋಗುವವರೆಗೂ ಖಾಸಗಿ ವಾಹನಗಳ ಓಡಾಟ ಸ್ಥಗಿತಗೊಂಡಿತ್ತು. ಇದರಿಂದ ಆ ಭಾಗಗಳಲ್ಲಿ ವಾಹನಗಳು ಗಂಟೆಗಟ್ಟಲೆ ಸಾಲುಗಟ್ಟಿ ನಿಲ್ಲಬೇಕಾಯಿತು.

ನಿಂತ ಆಂಬುಲೆನ್ಸ್
ಬಳ್ಳಾರಿ ರಸ್ತೆಯಲ್ಲಿ ರೋಗಿಯನ್ನು ಸಾಗಿಸುತ್ತಿದ್ದ ಆಂಬುಲೆನ್ಸ್ ಸಹ ದಟ್ಟಣೆಯಲ್ಲಿ ಸಿಲುಕಿಕೊಂಡಿತ್ತು. ಅದೇ ರೀತಿ, ಶಾಲೆ ಮುಗಿಸಿ ಮನೆಗೆ ಹೊರಟಿದ್ದ ಮಕ್ಕಳು ಹಾಗೂ ಶಿಕ್ಷಕರು ರಸ್ತೆಯಲ್ಲೇ ಕಾಯುವಂತಾಯಿತು.

ಏಕಾಏಕಿ ಬ್ಯಾರಿಕೇಡ್!
ಶನಿವಾರ ಮಧ್ಯಾಹ್ನ ನಗರ ಪ್ರಮುಖ ರಸ್ತೆಗಳಿಗೆ ಸಂಚಾರ ಪೊಲೀಸರು ಏಕಾಏಕಿ ಬ್ಯಾರಿಕೇಡ್‌ಗಳನ್ನು ಅಡ್ಡ ಹಾಕಿದರು. ಈ ಬಗ್ಗೆ ಸಂಚಾರ ಪೊಲೀಸರು ಮೊದಲೇ ಮಾಹಿತಿ ನೀಡಿರಲಿಲ್ಲ. ಇದರಿಂದಾಗಿ ಜನರು ಶಪಿಸುತ್ತಿದ್ದುದು ಸಾಮಾನ್ಯವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News