ಸಿಎಎ ಪ್ರತಿಭಟನೆಯಲ್ಲಿನ ಬುದ್ಧಿಜೀವಿಗಳು ಪರಾವಲಂಬಿಗಳು : ಬಿಜಿಪಿ ನಾಯಕ ಘೋಷ್

Update: 2020-01-18 14:36 GMT

ಕೋಲ್ಕತಾ,ಜ.18: ಇನ್ನೊಂದು ಅವಧಿಗೆ ಪ.ಬಂಗಾಳ ಬಿಜೆಪಿ ಘಟಕದ ಅಧ್ಯಕ್ಷರಾಗಿ ಮರುನೇಮಕಗೊಂಡಿರುವ ದಿಲೀಪ್ ಘೋಷ್ ಅವರು ಸಿಎಎ ವಿರುದ್ಧ ರ್ಯಾಲಿಗಳನ್ನು ನಡೆಸುತ್ತಿರುವ ಪ್ರತಿಭಟನಾಕಾರರ ವಿರುದ್ಧ ತನ್ನ ದಾಳಿಯನ್ನು ಮುಂದುವರಿಸಿದ್ದು,ಅವರನ್ನು ಕ್ರಿಮಿಗಳು,ದೆವ್ವಗಳು ಮತ್ತು ಪರಾವಲಂಬಿಗಳು ಎಂದು ಟೀಕಿಸಿದ್ದಾರೆ.

ಬುದ್ಧಿಜೀವಿಗಳು ಎಂದು ಕರೆಯಲಾಗುವ ಕೆಲವು ಕ್ರಿಮಿಗಳು ಕೋಲ್ಕತಾದ ಬೀದಿಗಳಿಗೆ ಇಳಿದಿವೆ. ನಮ್ಮ ಪೂರ್ವಜರು ಬಾಂಗ್ಲಾದೇಶದಲ್ಲಿ ಚಿತ್ರಹಿಂಸೆ ಅನುಭವಿಸುತ್ತಿದ್ದಾಗ ಇನ್ನೊಬ್ಬರ ದುಡ್ಡಿನಲ್ಲಿ ಬದುಕುವ,ಮೋಜು ಮಾಡುವ ಈ ಪರಾವಲಂಬಿ ಬುದ್ಧಿಜೀವಿಗಳು ಎಲ್ಲಿದ್ದರು ಎಂದು ಶುಕ್ರವಾರ ಇಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಘೋಷ್ ಪ್ರಶ್ನಿಸಿದರು.

‘ ಈ ದೆವ್ವಗಳು ನಮ್ಮದೇ ಅನ್ನವನ್ನು ತಿಂದು ನಮ್ಮನ್ನೇ ವಿರೋಧಿಸುತ್ತಿವೆ’ ಎಂದು ರಂಗಭೂಮಿಯ ಗಣ್ಯರು ಕೋಲ್ಕತಾದಲ್ಲಿ ನಡೆಸಿದ್ದ ಪ್ರತಿಭಟನಾ ಜಾಥಾವನ್ನು ಪ್ರಸ್ತಾಪಿಸಿ ಹೇಳಿದ ಅವರು,ಸಿಎಎ ಅನ್ನು ವಿರೋಧಿಸುತ್ತಿರುವವರಿಗೆ ತಮ್ಮ ಹೆತ್ತವರು ಯಾರು ಎನ್ನುವುದು ಗೊತ್ತಿಲ್ಲ. ಇದೇ ಕಾರಣದಿಂದ ಹೆತ್ತವರ ಜನನ ಪ್ರಮಾಣ ಪತ್ರವನ್ನು ತೋರಿಸಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ ಎಂದು ಟೀಕಿಸಿದರು.

 ಘೋಷ್ ಹೇಳಿಕೆಗೆ ದಿಗ್ಭ್ರಮೆ ವ್ಯಕ್ತಪಡಿಸಿದ ಖ್ಯಾತ ರಂಗಕರ್ಮಿ ದುಲಾಲ ಮುಖರ್ಜಿ ಅವರು, ಬಂಗಾಳದಲ್ಲಿ ಬಂಗಾಳಿಯೋರ್ವ ಇಷ್ಟು ಕೆಳಮಟ್ಟದ ಮಾತುಗಳನ್ನಾಡುತ್ತಾನೆ ಎನ್ನುವುದು ನಮಗೆ ಆಘಾತವನ್ನುಂಟು ಮಾಡಿದೆ. ಬಂಗಾಳಿಗಳು ಹೋರಾಡಿ ಗೆಲುವನ್ನು ಪಡೆದಿದ್ದಾರೆ ಮತ್ತು ಹೋರಾಟಗಳನ್ನು ಹೇಗೆ ನಡೆಸಬೇಕು ಎನ್ನುವುದನ್ನು ತೋರಿಸಿದ್ದಾರೆ ಎಂದರು.

ಘೋಷ್ ಈ ಹಿಂದೆಯೂ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದು,ಅವು ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಂದಿಗೆ ಜಟಾಪಟಿಗೆ ಕಾರಣವಾಗಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News