ನಿಮ್ಮಿಂದ 'ಯುಗಪುರುಷ' ಸರ್ಟಿಫಿಕೇಟ್ ಪಡೆಯುವ ಮೂರ್ಖಪುರುಷ ನಾನಲ್ಲ: ಈಶ್ವರಪ್ಪ ವಿರುದ್ಧ ಎಚ್ಡಿಕೆ ವಾಗ್ದಾಳಿ

Update: 2020-01-18 14:41 GMT

ಬೆಂಗಳೂರು, ಜ. 18: ‘ಮನೆಯಲ್ಲಿ ನೋಟು ಎಣಿಸುವ ಯಂತ್ರ ಇಟ್ಟುಕೊಂಡವನು ನಾನಲ್ಲ. ನಿಮ್ಮ ಮೇಲೆ ಅತ್ಯಾಚಾರ ನಡೆದರೆ ಸರಕಾರ ಏನು ಮಾಡೋಕಾಗುತ್ತೆ ಎಂದು ವರದಿಗಾರ್ತಿಗೆ ಪೆಕರನಂತೆ ಪ್ರಶ್ನಿಸಿದವನು ನಾನಲ್ಲ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪಗೆ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಶನಿವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಉಪಮುಖ್ಯಮಂತ್ರಿ ಹುದ್ದೆ ಯಾರಿಗೆ ಇಷ್ಟವಿಲ್ಲ? ವಯಸ್ಸಿಗೆ ಬಂದವರಿಗೆಲ್ಲರಿಗೂ ನಟಿ ಐಶ್ವರ್ಯ ರೈ ಬೇಕೆಂದು ಬಯಸುತ್ತಾರೆ. ಇರುವುದು ಒಬ್ಬಳೇ ಐಶ್ವರ್ಯ ರೈ ತಾನೇ? ಎಂದು ಡಿಸಿಎಂ ಹುದ್ದೆಯ ಬಗ್ಗೆ ಕೀಳು ಅಭಿರುಚಿ ಮಾತನಾಡಿದವನು ನಾನಲ್ಲ’ ಎಂದು ವಾಗ್ದಾಳಿ ನಡೆಸಿದ್ದಾರೆ.

‘ನನ್ನ ಕ್ಷೇತ್ರದಲ್ಲಿ 55 ರಿಂದ 60 ಸಾವಿರ ಮುಸ್ಲಿಮರ ವೋಟ್‌ಗಳಿವೆ. ಇದೂವರೆಗೂ ಒಬ್ಬ ಮುಸ್ಲಿಮನಿಗೂ ನಮಸ್ಕಾರ ಹೊಡೆದು ವೋಟ್ ಕೇಳಿಲ್ಲ. ಆದರೂ, 47 ಸಾವಿರ ಮತಗಳ ಅಂತರದಿಂದ ಗೆದ್ದಿದ್ದೇನೆ. 'ರಾಷ್ಟ್ರಭಕ್ತ ಮುಸ್ಲಿಮ್ ಬಿಜೆಪಿಗೆ ವೋಟ್ ಹಾಕ್ತಾನೆ, ಪಾಕಿಸ್ತಾನ ಪರ ಇರೋ ಮುಸ್ಲಿಮ್ ಬಿಜೆಪಿಗೆ ವೋಟ್ ಹಾಕಲು ಹಿಂದೆ-ಮುಂದೆ ನೋಡ್ತಾರೆ' ಎಂದವನು ನಾನಲ್ಲ’ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.

‘ಕುಂದಗೋಳ ವಿಧಾನಸಭೆ ಉಪಚುನಾವಣೆ ಪ್ರಚಾರದ ಸಂದರ್ಭದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ, ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವಾಗಿತ್ತು, ಈ ಬಗ್ಗೆ ಸಿದ್ದರಾಮಯ್ಯ ನಾನು ಏನು ಮಾಡಬೇಕು ಎಂದಿದ್ದರು. ಒಂದು ವೇಳೆ ಸಿದ್ದರಾಮಯ್ಯ ಅವರ ಮೊಮ್ಮಗಳ ಮೇಲೆ ಅತ್ಯಾಚಾರ ನಡೆದರೆ ಏನು ಮಾಡುತ್ತಾರೆ ಎಂಬ ಕೀಳು ಮಟ್ಟದ ಹೇಳಿಕೆ ನೀಡಿದವನು ನಾನಲ್ಲ’ ಎಂದು ಕುಟುಕಿದ್ದಾರೆ.

‘ಎಂತೆಂತಹ ಅದ್ಭುತವಾದ ಅಣಿಮುತ್ತುಗಳನ್ನು ಉದುರಿಸಿದ ತಮ್ಮಿಂದ ಯುಗಪುರುಷ ಎಂಬ ಸರ್ಟಿಫಿಕೇಟ್ ಪಡೆಯುವ ಮೂರ್ಖಪುರುಷ ನಾನಲ್ಲ. ದಿಢೀರ್ ನಿದ್ದೆಯಿಂದ ಎದ್ದಂತೆ ಹಳೆಯ ಹೇಳಿಕೆಗೆ ಟ್ವೀಟ್ ಮಾಡುವವನು ನಾನಲ್ಲ’ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಅಂದು ತಿನ್ನಲು ಗತಿ ಇಲ್ಲದವರು ಮಾತ್ರ ಸೈನ್ಯಕ್ಕೆ ಸೇರುತ್ತಾರೆ ಎಂದು ಹೇಳಿದ ಈ ಯುಗಪುರುಷ, ಪುಲ್ವಾಮ ದಾಳಿಗೆ ಭಾರತೀಯ ಸೈನ್ಯ ಪ್ರತ್ಯುತ್ತರ ನೀಡಿದಾಗ ಸಂಭ್ರಮಾಚರಣೆ ಮಾಡಬೇಡಿ ಒಂದು ಕೋಮಿಗೆ ಬೇಜಾರಾಗುತ್ತದೆ ಎಂದೂ ತಮ್ಮ ಅಣಿಮುತ್ತುಗಳನ್ನು ಉದುರಿಸಿ ಅತ್ತಿದ್ದರು, ಇಂತಹ ಯುಗಪುರುಷನನ್ನು ಪಡೆದ ಕರ್ನಾಟಕವೇ ಧನ್ಯ’
-ಕೆ.ಎಸ್.ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News