ಶ್ಲೋಕಗಳ ಉಚ್ಛಾರಣೆಯಿಂದ ಹೃದಯ ಸ್ವಚ್ಛ: ಬೆಂಗಳೂರಿನಲ್ಲಿ ಸಚಿವ ಅಮಿತ್ ಶಾ

Update: 2020-01-18 16:31 GMT

ಬೆಂಗಳೂರು, ಜ. 18: ‘ಶಂಕರಾಚಾರ್ಯ ಪ್ರಶ್ನೋತ್ತರ ರತ್ನ ಮಾಲಿಕಾ ಅಭ್ಯಾಸದಿಂದ ಜೀವನ ಬದಲಾಗುತ್ತದೆ. ಅಲ್ಲದೆ, ಈ ಶ್ಲೋಕಗಳ ಉಚ್ಛಾರಣೆಯಿಂದ ಹೃದಯ ಸ್ವಚ್ಛವಾಗುತ್ತದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದಿಲ್ಲಿ ತಿಳಿಸಿದ್ದಾರೆ.

ಶನಿವಾರ ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ವಿವೇಕ ದೀಪಿನಿ ಮಹಾ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಂದೇ ಸ್ಥಳದಲ್ಲಿ ಒಂದೇ ಸ್ವರದಲ್ಲಿ ಇಷ್ಟೊಂದು ಮಕ್ಕಳು ಶ್ಲೋಕ ಉಚ್ಛಾರಣೆ ಮಾಡುವುದನ್ನು ಕೇಳಿದರೆ ಮನಸ್ಸು ತುಂಬಿ ಬರುತ್ತದೆ ಎಂದರು.

ಶ್ಲೋಕಗಳ ಒಳಾರ್ಥ ತಿಳಿಯಬೇಕು. ಅದರಿಂದ ನಾವು ಎಂದೂ ಕೆಟ್ಟ ಹಾದಿ ತುಳಿಯುವುದಿಲ್ಲ. ಜೀವನದ ಉದ್ದೇಶ ಸಾರ್ಥಕವಾಗುತ್ತದೆ. ಲೋಕಕಲ್ಯಾಣ ಸಾಧ್ಯ. ಅದಕ್ಕಾಗಿಯೇ ಪ್ರಧಾನಿ ಮೋದಿ ಇದನ್ನು 23 ಭಾಷೆಗಳಿಗೆ ಭಾಷಾಂತರಿಸಿ ರಾಷ್ಟ್ರದ ಮೂಲೆ ಮೂಲೆಗಳಿಗೆ ವಿತರಿಸುವ ಕೆಲಸ ಮಾಡಿದ್ದಾರೆ. ನಾನೂ ಇದರ ಗುಜರಾತಿ ಅನುವಾದ ಓದುತ್ತಿದ್ದೇನೆ ಎಂದರು.

ಸಂಸ್ಕೃತಿ ಹಿರಿಮೆ: ಕೆಟ್ಟ ಸಂಸ್ಕೃತಿ ಮೈಗೂಡಿಸಿಕೊಂಡವರು ರಾಷ್ಟ್ರವನ್ನಾಳುತ್ತಿದ್ದರು. ಆದರೆ, ಬಹಳ ವರ್ಷಗಳ ನಂತರ ನಮಗೆ ಸಂಸ್ಕೃತಿ ಎತ್ತಿಹಿಡಿಯುವ ಪ್ರಧಾನಿ ಸಿಕ್ಕಿದ್ದಾರೆ ಎಂದ ಅವರು, ಇದೀಗ ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರಕಾರವಿದೆ. ಮೋದಿ ನಮ್ಮ ದೇಶದ ಸಂಸ್ಕೃತಿ ಪರಂಪರೆಯನ್ನು ವಿಶ್ವಕ್ಕೆ ತಿಳಿಸುವ ಸಂದೇಶವಾಹಕರಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.

ಬೋಧನೆ: ಮನಸ್ಸಿಗೆ ಹಿತ ಮತ್ತು ಬುದ್ಧಿಗೆ ತೀಕ್ಷ್ಣತೆ ನೀಡುವ ವಿವೇಕ ದೀಪಿನಿ ಶಾಲೆಗಳಲ್ಲಿ ಬೋಧಿಸಲು ಅನುಮತಿ ನೀಡಿದೆ ಎಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಇಂದಿಲ್ಲಿ ತಿಳಿಸಿದರು.

ವೇದ ಪಠಣೆ: ವಿವೇಕದೀಪಿನಿ ಮಹಾಸಮರ್ಪಣೆ ಕಾರ್ಯಕ್ರಮದಲ್ಲಿ 200 ಶಾಲೆಗಳಿಂದ ಬಂದಿರುವ ಸಾವಿರಾರು ಮಕ್ಕಳಿಂದ ಏಕಕಾಲದಲ್ಲಿ ಶಂಕರಾಚಾರ್ಯ ವಿರಚಿತ ಶ್ಲೋಕಗಳ ಪಠಣ ನಡೆಯಿತು. ಡಿಸಿಎಂ ಡಾ.ಅಶ್ವಥ್ ನಾರಾಯಣ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಜರಿದ್ದರು.

ಶ್ರೀಗಳ ಬೃಂದಾವನಕ್ಕೆ ನಮನ: ನಗರದ ವಿದ್ಯಾಪೀಠದಲ್ಲಿರುವ ಉಡುಪಿ ಪೇಜಾವರ ಮಠದ ವಿಶೇಶ್ವರ ತೀರ್ಥ ಶ್ರೀಗಳ ಬೃಂದಾವನಕ್ಕೆ ಭೇಟಿ ನೀಡಿದ ಅಮಿತ್ ಶಾ ಅವರು ನಮನ ಸಲ್ಲಿಸಿದರು.

ಆ ಬಳಿಕ ಬೆಂಗಳೂರು ದಕ್ಷಿಣ ಕೇತ್ರದ ಸಂಸದ ತೇಜಸ್ವಿ ಸೂರ್ಯರ ನೂತನ ಕಚೇರಿಯನ್ನು ಉದ್ಘಾಟಿಸಿದರು. ಈ ವೇಳೆ ಅವರೊಂದಿಗೆ ಸಿಎಂ ಯಡಿಯೂರಪ್ಪ, ಸಂಸದ ತೇಜಸ್ವಿ ಸೂರ್ಯ ಮತ್ತು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಸೇರಿದಂತೆ ಇನ್ನಿತರ ಮುಖಂಡರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News