ಪಕ್ಷ ಬದ್ಧ ಇತಿಹಾಸಕಾರರು ವಿಜೃಂಭಿಸುತ್ತಿದ್ದಾರೆ: ಪ್ರೊ.ಬರಗೂರು ರಾಮಚಂದ್ರಪ್ಪ

Update: 2020-01-18 16:50 GMT

ಬೆಂಗಳೂರು, ಜ.18: ಇಂದು ಪಕ್ಷ ಬದ್ಧವಾದ ಇತಿಹಾಸಕಾರರ ವಿಜೃಂಭಿಸುತ್ತಿದ್ದು, ನಿಜವಾದ ಇತಿಹಾಸಕಾರರಿಗೆ ಶಾಶ್ವತ ರಜೆ ನೀಡಿದ್ದಾರೆ ಎಂದು ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.

ಶನಿವಾರ ನಗರದ ಗಾಂಧೀ ಭವನದಲ್ಲಿ ಸಪ್ನ ಬುಕ್ ಹೌಸ್ ವತಿಯಿಂದ ಆಯೋಜಿಸಿದ್ದ ಡಾ.ಸಿ.ಚಂದ್ರಪ್ಪ ಅವರ ‘ಡಾ.ಬಿ.ಆರ್.ಅಂಬೇಡ್ಕರ್ ಮಹಾ ಮಾನವನ ಮಹಾಯಾನ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಆಧುನಿಕ ಕಾಲಘಟ್ಟದಲ್ಲಿ ಕಾಂಗ್ರೆಸ್, ಬಿಜೆಪಿ ಪಕ್ಷಗಳಿಗೆ ಬದ್ಧವಾಗಿರುವ ಇತಿಹಾಸಕಾರರು ಹುಟ್ಟಿಕೊಂಡಿದ್ದಾರೆ. ಇದರ ನಡುವೆ ನೈಜ ಇತಿಹಾಸ ಮಾತನಾಡುವ, ಬರೆಯುವವರನ್ನು ಮೂಲೆಗುಂಪು ಮಾಡಿದ್ದಾರೆ. ಚರಿತ್ರೆಯ ಚಾರಿತ್ರಹರಣ ಮಾಡುವ ಕಾಲದಲ್ಲಿದ್ದು, ಚರಿತ್ರಕಾರರನ್ನು ಅನುಮಾನದಿಂದ ನೋಡುತ್ತಿದ್ದಾರೆ ಎಂದರು.

ದೇಶದಲ್ಲಿ ಯಾರೂ ಮಾತನಾಡದಂತೆ ತಡೆಯುವ ಕಾಲವಿದಾಗಿದ್ದು, ಎಲ್ಲರೂ ಅಬ್ಬರಿಸುವ ಕಾಲವಾಗಿದೆ. ನಾನು ಎಂಬುದನ್ನು ಬಿಟ್ಟು, ನಾವು ಎಂಬುದನ್ನು ಬೆಳೆಸಿಕೊಳ್ಳಬೇಕಿದೆ. ಆದರೆ, ಅಧಿಕಾರದಲ್ಲಿರುವವರು ಹೆಚ್ಚಾಗಿ ನಾನು ಎಂಬ ಅಹಂ ಅನ್ನು ಬೆಳೆಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ಅಂಬೇಡ್ಕರ್ ಬಗ್ಗೆ ಏನಾದರೂ ಬರೆಯುವುದು ಎಂದರೆ ನೈಜ ಮಾನವನ ಇತಿಹಾಸ ಬರೆದಂತೆ. ಅವರು ನಮ್ಮ ದೇಶದ ಸಾಮಾಜಿಕ, ಆರ್ಥಿಕ ಇತಿಹಾಸವನ್ನು ಹೇಳಿದ್ದಾರೆ. ಅಲ್ಲದೆ, ಅವರ ಅಪಾರವಾದ ಚರ್ಚೆ, ಭಾಷಣಗಳನ್ನು ಸಂಕಲಿಸಿ ಪುಸ್ತಕ ಬರೆದಿರುವುದು ದೊಡ್ಡ ಸಾಧನೆ. ಇದು ಮುಂದಿನ ಪೀಳಿಗೆಯ ಸಂಶೋಧಕರಿಗೆ ಆಕರ ಗ್ರಂಥವಾಗಲೂಬಹುದು ಎಂದು ನುಡಿದರು.

ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ ಮಾತನಾಡಿ, ಬಹುಮುಖದ ಚಿಂತಕರಾಗಿದ್ದ ಅಂಬೇಡ್ಕರ್, ಸ್ವಾತಂತ್ರ ಚಳವಳಿಯಲ್ಲಿಯೂ ತೊಡಗಿಸಿಕೊಂಡಿದ್ದರು. ಎಲ್ಲ ವರ್ಗದ ಚಿಂತಕರಾಗಿದ್ದ ಅವರು, ಅನ್ಯಾಯದ ವಿರುದ್ಧ ಎದುರು ನಿಂತು ಪ್ರಶ್ನಿಸುತ್ತಿದ್ದರು. ಅಂದಿನ ಸ್ವಾತಂತ್ರ ಸಂಗ್ರಾಮದಲ್ಲಿ ಎಲ್ಲರೂ ಬ್ರಿಟಿಷರ ವಿರುದ್ಧ ಧ್ವನಿ ಎತ್ತಿದರೆ, ಅಂಬೇಡ್ಕರ್ ಇಲ್ಲಿನ ಅಸ್ಪಶ್ಯತೆಯ ವಿರುದ್ಧ ಧ್ವನಿ ಎತ್ತಿದ್ದಾರೆ ಎಂದರು.

ಪ್ರಜಾಪ್ರಭುತ್ವದಲ್ಲಿ ಅಪಾರ ನಂಬಿಕೆಯಿದ್ದ ಅಂಬೇಡ್ಕರ್‌ಗೆ, ಕಮ್ಯುನಿಸ್ಟ್‌ರಲ್ಲಿನ ಸಮಾನತೆ ಆಶಯದ ಕುರಿತು ಒಲವಿತ್ತು. ಭೂಮಿ, ಕೈಗಾರಿಕೆಗಳ ರಾಷ್ಟ್ರೀಕರಣವಾಗಬೇಕು ಎಂದಿದ್ದ ಅವರು, ಮಾರ್ಕ್ಸ್‌ವಾದದಿಂದ ಪ್ರಭಾವಿತರಾಗಿದ್ದರು. ಅಲ್ಲದೆ, ಹಿಂದೂ ಧರ್ಮದ ಬಗೆಗೆ ಅವರು ಮಾಡಿದಷ್ಟು ಟೀಕೆ, ವಿಮರ್ಶೆಯನ್ನು ಬೇರೆ ಯಾರೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

ಮನುಷ್ಯ ಮನುಷ್ಯರ ನಡುವೆ ನಿಜವಾದ ಸಂಬಂಧವಿದ್ದರೆ ಅದು ಮಾನವೀಯ ಧರ್ಮ ಎಂದಿದ್ದರು. ಸಕ್ರಿಯ ರಾಜಕಾರಣಿಯಾಗಿ ಅನೇಕ ಕೆಲಸಗಳನ್ನು ಮಾಡಿದ್ದಾರೆ. ಹಲವು ರಾಜಕೀಯ ಪಕ್ಷಗಳನ್ನು ಕಟ್ಟಿದ್ದಾರೆ. ಅಲ್ಲದೆ, ಕಾರ್ಮಿಕ ಚಳವಳಿಯೊಂದಿಗೆ ತೊಡಗಿಸಿಕೊಂಡಿದ್ದರು. ಮಹಿಳೆಯರ ಹಕ್ಕುಗಳಿಗಾಗಿ, ಅವರ ಹೋರಾಟ ನಿರಂತರವಾಗಿದ್ದು, ಅವರನ್ನು ಎಲ್ಲ ಮಹಿಳೆಯರು ನೆನೆಯಬೇಕಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ, ಲೇಖಕ ಡಾ.ಸಿ.ಚಂದ್ರಪ್ಪ ಉಪಸ್ಥಿತರಿದ್ದರು.

ಅಂಬೇಡ್ಕರ್ ಸಂವಿಧಾನ ಶಿಲ್ಪಿ, ಭಾರತಕ್ಕೆ ಸೀಮಿತವಾದ ವ್ಯಕ್ತಿಯಷ್ಟೇ ಅಲ್ಲ. ಅವರು ವಿಶ್ವಮಾನವ. ಅವರ ಜೀವನದಲ್ಲಿ ನಡೆದು ಬಂದ ಹಾದಿ, ಅವಮಾನ, ನೋವು, ನಲಿವು, ಸಂಕಷ್ಟ ಸೇರಿದಂತೆ ಹಲವಾರು ಸಂಗತಿಗಳನ್ನು ಚಂದ್ರಪ್ಪ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಇಂದು ಸಂವಿಧಾನದ ಅರಿವು ಇಲ್ಲದವರೆಲ್ಲರೂ ಏನೇನೋ ಮಾತನಾಡುತ್ತಿದ್ದಾರೆ. ಓದದೇ, ತಿಳಿಯದೇ ಬೊಗಳೆ ಬಿಡುವವರಿಗೆ ಬುದ್ಧಿ ಕಲಿಸಬೇಕಿದೆ.

-ವಿ.ಗೋಪಾಲಗೌಡ, ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News