ಬಿಬಿಎಂಪಿಯ 12 ಸ್ಥಾಯಿ ಸಮಿತಿಗೆ ಅವಿರೋಧ ಆಯ್ಕೆ

Update: 2020-01-18 16:54 GMT

ಬೆಂಗಳೂರು, ಜ.18: ಸತತ ಮೂರು ಬಾರಿ ಮುಂದೂಡಿಕೆಯಾಗಿದ್ದ ಬಿಬಿಎಂಪಿಯ 12 ಸ್ಥಾಯಿ ಸಮಿತಿಯ ಸದಸ್ಯ ಚುನಾವಣೆ ಕೊನೆಗೂ ಶನಿವಾರ ನಡೆದಿದ್ದು, ಕೆಲ ಅಸಮಾಧಾನದ ನಡುವೆಯೂ ಎಲ್ಲ ಸ್ಥಾಯಿ ಸಮಿತಿಗಳಿಗೆ ಅವಿರೋಧವಾಗಿ ಸದಸ್ಯರನ್ನು ಆಯ್ಕೆ ಮಾಡಲಾಗಿದೆ.

ಈ ಹಿಂದೆ ಅ.1, ಡಿ.4 ಹಾಗೂ ಡಿ.30ಕ್ಕೆ ಸ್ಥಾಯಿ ಸಮಿತಿ ಚುನಾವಣೆ ಘೋಷಣೆ ಮಾಡಲಾಗಿತ್ತು. ಆದರೆ, ಸ್ಥಾಯಿ ಸಮಿತಿಯ ಸದಸ್ಯಸ್ಥಾನಕ್ಕೆ ಪಾಲಿಕೆಯ ಯಾವುದೇ ಸದಸ್ಯರು ನಾಮಪತ್ರ ಸಲ್ಲಿಕೆ ಮಾಡದ ಹಿನ್ನೆಲೆಯಲ್ಲಿ ಪ್ರಾದೇಶಿಕ ಆಯುಕ್ತರು ಚುನಾವಣೆಯನ್ನು ಅನಿವಾರ್ಯವಾಗಿ ಮುಂದೂಡಿದ್ದರು. ಮತ್ತೆ ಜ.18 ರಂದು ಚುನಾವಣೆ ನಡೆಸುವುದಕ್ಕೆ ಅದಿಸೂಚನೆ ಹೊರಡಿಸಿದ್ದರು. ಅದರಂತೆ ಶನಿವಾರ ಚುನಾವಣೆ ನಡೆಸಲಾಯಿತು. 12 ಸ್ಥಾಯಿ ಸಮಿತಿಗಳಿಗೂ ಅವಿರೋಧವಾಗಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.

ಬಿಬಿಎಂಪಿಯ ಕೆಂಪೇಗೌಡ ಪೌರಸಭಾಂಗಣದಲ್ಲಿ ಶನಿವಾರ ಬೆಳಗ್ಗೆ 8 ಗಂಟೆಯಿಂದ 9:30ರ ವರೆಗೆ 12 ಸ್ಥಾಯಿ ಸಮಿತಿ ಸದಸ್ಯ ಸ್ಥಾನಕ್ಕೆ ನಾಮಪತ್ರ ಸ್ವೀಕರಿಸಲಾಯಿತು. 10 ಗಂಟೆಯಿಂದ 12.30 ವರೆಗೆ ನಾಮಪತ್ರ ಪರಿಶೀಲನೆ ನಡೆಸಲಾಯಿತು. ಅವಿರೋಧ ಆಯ್ಕೆಗೆ ಪ್ರತಿ ಸ್ಥಾಯಿ ಸಮಿತಿಗೆ 11 ಮಂದಿ ಸದಸ್ಯರು ಇರಬೇಕು. ಆದರೆ, ಪಾಲಿಕೆಯ 12 ಸ್ಥಾಯಿ ಸಮಿತಿ ಪೈಕಿ ಆರು ಸ್ಥಾಯಿ ಸಮಿತಿಗಳಿಗೆ ತಲಾ 11 ನಾಮಪತ್ರ ಸಲ್ಲಿಕೆಯಾಗಿದ್ದವು. ಉಳಿದ ಏಳು ಸ್ಥಾಯಿ ಸಮಿತಿ 11ಕ್ಕಿಂತ ಹೆಚ್ಚು ನಾಮಪತ್ರ ಸಲ್ಲಿಕೆಯಾಗಿದ್ದವು. ಹೀಗಾಗಿ, ಅಡಳಿತಾರೂಢ ಬಿಜೆಪಿ ಪಕ್ಷದ ಮುಖಂಡರು 11ಕ್ಕಿಂತ ಹೆಚ್ಚಿನ ನಾಮಪತ್ರಗಳನ್ನು ಸದಸ್ಯರಿಂದ ವಾಪಾಸ್ ತೆಗೆಸುವುದಕ್ಕೆ ಹರಸಾಹಸ ಪಟ್ಟರು. ಹೀಗಾಗಿ, 11:30ಕ್ಕೆ ಆರಂಭಗೊಳ್ಳಬೇಕಾದ ಸ್ಥಾಯಿ ಸಮಿತಿ ಚುನಾವಣೆ ಪ್ರಕ್ರಿಯೆ ಒಂದು ಗಂಟೆ ತಡವಾಗಿ ಮಧ್ಯಾಹ್ನ 12:40ಕ್ಕೆ ಆರಂಭವಾಯಿತು.

ಪ್ರಾದೇಶಿಕ ಆಯುಕ್ತ ವಿ.ಎನ್. ಪ್ರಸಾದ್, ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್‌ಕುಮಾರ್ ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿ ಶಿವಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಕೆಂಪೇಗೌಡ ಪೌರಸಭಾಂಗಣದಲ್ಲಿ ಮಧ್ಯಾಹ್ನ 12:40ಕ್ಕೆ ಚುನಾವಣೆ ಆರಂಭವಾಯಿತು. ಅಗತ್ಯಕ್ಕಿಂತ (11 ನಾಮಪತ್ರಕ್ಕಿಂತ) ಹೆಚ್ಚಿನ ನಾಮಪತ್ರ ಸಲ್ಲಿಕೆಯಾದ ನಾಮಪತ್ರ ವಾಪಾಸ್ ಪಡೆಯುವುದಕ್ಕೆ ಅವಕಾಶ ನೀಡಿದರು. ಈ ವೇಳೆ ಮುಖಂಡರು ಮನವೊಲಿಸಿ ಸದಸ್ಯರಿಂದ ನಾಮಪತ್ರ ವಾಪಾಸ್ ಪಡೆಯುವಲ್ಲಿ ಯಶಸ್ವಿಯಾದ ಹಿನ್ನೆಲೆಯಲ್ಲಿ 12ಕ್ಕೆ 12 ಸ್ಥಾಯಿ ಸಮಿತಿಗಳಿಗೆ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಲೆಕ್ಕಪತ್ರ ಸ್ಥಾಯಿ ಸಮಿತಿಗೆ 10 ಮಂದಿ ಸದಸ್ಯರು: 

ನಿಯಮ ಪ್ರಕಾರ ಒಂದು ಸ್ಥಾಯಿ ಸಮಿತಿಗೆ 11 ಮಂದಿ ಸದಸ್ಯರು ಇರಬೇಕು. ಆದರೆ, ಲೆಕ್ಕಪತ್ರ ಸ್ಥಾಯಿ ಸಮಿತಿಗೆ ಶನಿವಾರ ಒಟ್ಟು 12 ಮಂದಿ ಸದಸ್ಯರು ನಾಮಪತ್ರ ಸಲ್ಲಿಕೆ ಮಾಡಿದ್ದರು. ನಾಮಪತ್ರ ವಾಪಾಸ್ ಪಡೆಯುವ ವೇಳೆ ಓಕಳೀಪುರ ವಾರ್ಡ್‌ನ ಶಿವಪ್ರಕಾಶ್ ಹಾಗೂ ಸಿಂಗಸಂದ್ರ ವಾರ್ಡ್‌ನ ಶಾಂತಬಾಬು ನಾಮಪತ್ರ ವಾಪಾಸ್ ಪಡೆದುಕೊಂಡ ಹಿನ್ನೆಲೆಯಲ್ಲಿ ಕೇವಲ 10 ಸದಸ್ಯರು ಮಾತ್ರ ಸಮಿತಿಯಲ್ಲಿ ಉಳಿದುಕೊಂಡರು. ಈ ವೇಳೆ ಬಿಜೆಪಿ ಸದಸ್ಯರು ಸಮಿತಿಯಲ್ಲಿ ಖಾಲಿ ಉಳಿದಿರುವ ಒಂದು ಸ್ಥಾನಕ್ಕೆ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡುವಂತೆ ಪ್ರಾದೇಶಿಕ ಆಯುಕ್ತರಲ್ಲಿ ಮನವಿ ಮಾಡಿದರು. ಆದರೆ, ಪ್ರಾದೇಶಿಕ ಆಯುಕ್ತರು ಅವಕಾಶ ನೀಡಲಿಲ್ಲ.

ಅಂಕಿ ಸಂಖ್ಯೆ: ಬಿಬಿಎಂಪಿ ಕೌನ್ಸಿಲ್ ಸದಸ್ಯರ ಸಂಖ್ಯೆ- 259, ಹಾಜರಾತಿ ಸಂಖ್ಯೆ- 178, 12 ಸ್ಥಾಯಿ ಸಮಿತಿಗೆ- 131 ಸದಸ್ಯರು ಆಯ್ಕೆ, 132 ಸದಸ್ಯ ಸ್ಥಾನಕ್ಕೆ 142 ನಾಮಪತ್ರ ಸಲ್ಲಿಕೆ, 11 ನಾಮಪತ್ರ ವಾಪಾಸ್, ಲೆಕ್ಕಪತ್ರ ಸ್ಥಾಯಿ ಸಮಿತಿಗೆ ಕೇವಲ 10 ಮಂದಿ ಸದಸ್ಯರು.

ಕಣ್ಣೀರಿಟ್ಟ ಬಿಜೆಪಿ ಸದಸ್ಯೆ

ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ನೀಡುವುದಾಗಿ ಭರವಸೆ ನೀಡಿದ್ದ ಬಿಜೆಪಿ ನಾಯಕರು ಕೊನೆಗೂ ತಮಗೆ ಕೈಕೊಟ್ಟಿದ್ದಾರೆ ಎಂದು ಜಯನಗರ ವಾರ್ಡ್‌ನ ಬಿಜೆಪಿ ಸದಸ್ಯೆ ಮಹಾಲಕ್ಷ್ಮೀ ಅವರು ಬಿಬಿಎಂಪಿ ಆವರಣದಲ್ಲಿ ಕಣ್ಣೀರಿಟ್ಟಿದ್ದಾರೆ. ಕಳೆದ ಬಾರಿ ಉಪಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಕೊನೆಯ ಕ್ಷಣದಲ್ಲಿ ಮೋಹನ್ ರಾಜ್ ಅವರನ್ನು ಉಪಮೇಯರ್ ಆಗಿ ಆಯ್ಕೆ ಮಾಡಲಾಗಿತ್ತು. ಆಗ ತಮಗೆ ಪ್ರಮುಖ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ನೀಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಈಗ ಸ್ಥಾನ ಕೈತಪ್ಪಿ, ಮುಖಂಡರ ಮಾತು ಸುಳ್ಳಾಗಿದೆ ಎಂದು ಕಣ್ಣೀರಿಟ್ಟರು.

ಸಂಭವನೀಯ ಪಟ್ಟಿ

ಮಂಜುಳಾ ನಾರಾಯಣಸ್ವಾಮಿ(ಲಗ್ಗೆರೆ), ದೇವದಾಸ್(ಬಿಟಿಎಂ ಲೇಔಟ್), ಮಮತಾ ವಾಸುದೇವ್(ಜೆ.ಪಿ.ನಗರ), ರಮೇಶ್(ಸುಂಕೇನಹಳ್ಳಿ), ಲಕ್ಷ್ಮೀ ನಾರಾಯಣ(ದೊಮ್ಮಲೂರು), ಮಮತಾ ಸರವಣ(ಹಲಸೂರು), ನಾಗರತ್ನ ರಾಮಮೂರ್ತಿ(ಪಟ್ಟಾಭಿರಾಮ ನಗರ), ಸರಳ ಮಹೇಶ್(ಆಡುಗೋಡಿ), ನೇತ್ರಾ ಪಲ್ಲವಿ(ಅಟ್ಟೂರು), ನರಸಿಂಹ ನಾಯಕ್(ಬಾಗಲಗುಂಟೆ), ರಾಜೇಂದ್ರ ಕುಮಾರ್(ನಂದಿನಿ ಲೇಔಟ್), ಪ್ರತಿಮಾ(ಕಾಮಾಕ್ಷಿ ಪಾಳ್ಯ), ಆರ್.ಮಹಾಲಕ್ಷ್ಮೀ(ಹೊಸಹಳ್ಳಿ), ಗುರುಮೂರ್ತಿ(ಹೆಚ್‌ಎಸ್‌ಆರ್ ಲೇಔಟ್), ಎಲ್.ಶ್ರೀನಿವಾಸ್(ಕುಮಾರಸ್ವಾಮಿ ಲೇಔಟ್).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News