ಕಲಾವಿದರಿಗೆ ನೆರವಾಗಲು ಕಾನೂನು ಚೌಕಟ್ಟು ಮೀರಿದರೆ ತಪ್ಪಿಲ್ಲ: ಎಲ್.ಬಿ.ಶೇಖ್ ಮಾಸ್ತರ್

Update: 2020-01-18 18:45 GMT

ಬೆಂಗಳೂರು, ಜ.18: ವೃತ್ತಿರಂಗಭೂಮಿ, ಹವ್ಯಾಸರಂಗಭೂಮಿ ಸೇರಿದಂತೆ ಎಲ್ಲ ರೀತಿಯ ಕಲಾವಿದರ ಅನುಕೂಲಕ್ಕಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾನೂನಿನ ಚೌಕಟ್ಟನ್ನು ಮೀರಿ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತಾಗಲಿ ಎಂದು ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷ ಎಲ್.ಬಿ.ಶೇಖ್ ಮಾಸ್ತರ್ ಆಶಿಸಿದರು.

ಶನಿವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ಕಾಡುಗಳ್ಳ ವೀರಪ್ಪನ್‌ಗೆ ಕೋಟಿಗಟ್ಟಲೆ ಹಣ ಕೊಡಲು ಸಾಧ್ಯವಾಗಿರುವಾಗ, ನಮ್ಮ ಕಲಾವಿದರ ಬದುಕಿಗೆ ಅಗತ್ಯವಾದ ಸೌಲಭ್ಯಗಳನ್ನು ಕಲ್ಪಿಸುವುದಕ್ಕೆ ಹೆಚ್ಚಿನ ಅನುದಾನ ಬಿಡುಗಡೆಗೆ ಸರಕಾರ ಬದ್ಧತೆ ತೋರಿಸಬೇಕೆಂದು ತಿಳಿಸಿದರು.

ಕಲಾವಿದರ ಮಾಸಾಶನ ಕೇವಲ ಎರಡು ಸಾವಿರ ರೂ. ಮಾತ್ರವಿದೆ. ಇದನ್ನು ರಾಜ್ಯ ಸರಕಾರ ಕೂಡಲೇ ಹೆಚ್ಚಿಸುವುದಕ್ಕೆ ಆದ್ಯತೆ ತೋರಿಸಲಿ. ಹಾಗೆಯೇ ವೃತ್ತಿರಂಗ ಭೂಮಿ ಕಲಾವಿದರಿಗೆ ಶಾಸ್ತ್ರೋಕ್ತವಾಗಿ ವೃತ್ತಿ ತರಬೇತಿ ನೀಡಲು ಅನುಕೂಲವಾಗುವಂತೆ ತರಬೇತಿ ಶಾಲೆಯೊಂದನ್ನು ಸ್ಥಾಪಿಸುವುದಕ್ಕೆ ಸೂಕ್ತ ಕ್ರಮ ಕೈಗೊಳ್ಳಲಿ ಎಂದು ಅವರು ಒತ್ತಾಯಿಸಿದರು.

ಯಾವ ಕಲಾವಿದ ಶ್ರದ್ಧೆಯಿಂದ ನಿರಂತರವಾಗಿ ಕೆಲಸ ಮಾಡುತ್ತಾನೆಯೋ, ಆತನನ್ನು ರಂಗಭೂಮಿ ಯಾವತ್ತಿಗೂ ಕೈಬಿಡುವುದಿಲ್ಲ ಎಂಬುದಕ್ಕೆ ನಾನೇ ಉದಾಹರಣೆಯಾಗಿದ್ದೇನೆ. ಹಾರ್ಮೋನಿಯಂ ಮಾಸ್ಟರ್‌ರಾಗಿ ಹಳ್ಳಿಗಳಲ್ಲಿ ನಾಟಕಗಳನ್ನು ಹೇಳಿಕೊಡುತ್ತಿದ್ದ ನಾನು ಕುಮಾರೇಶ್ವರ ನಾಟಕ ಕಂಪೆನಿಯ ಮಾಲಕನಾಗಿದ್ದೇನೆಂದು ಅವರು ತಿಳಿಸಿದರು.

ಮುಂದೊಂದು ದಿನ ವೃತ್ತಿರಂಗಭೂಮಿ ಇಲ್ಲವಾಗುವಂತಹ ಸಂದರ್ಭ ಬಂದರೆ, ಅದಕ್ಕೆ ಕಲಾವಿದರ ಕೊರತೆ ಕಾರಣವಾಗುತ್ತದೆಯೇ ವಿನಃ ಪ್ರೇಕ್ಷಕರಿಂದಲ್ಲ ಎಂಬುದನ್ನು ನಾವು ಮನಗಾಣಬೇಕಾಗಿದೆ. ಉತ್ತಮ ನಾಟಕವೊಂದನ್ನು ರಾಜ್ಯದ ಯಾವುದೇ ಮೂಲೆಯಲ್ಲಿ, ಎಂತಹದ್ದೇ ಸಂದರ್ಭದಲ್ಲಿ ಪ್ರದರ್ಶನ ಮಾಡಿದರು ಜನತೆ ಬಂದು ನಾಟಕ ನೋಡುತ್ತಾರೆ. ಆದರೆ, ಕಲಾವಿದರ ಕೊರತೆಯಿಂದ ವೃತ್ತಿರಂಗಭೂಮಿ ಅಳಿವಿನ ಅಂಚಿಗೆ ಹೋಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ವೃತ್ತಿರಂಗಭೂಮಿ, ಹವ್ಯಾಸರಂಗಭೂಮಿ, ಗ್ರಾಮೀಣರಂಗಭೂಮಿಯೆಂಬ ತಾರತಮ್ಯ ಬೇಕಿಲ್ಲ. ನಾಟಕ ಅಕಾಡೆಮಿ ಅಧ್ಯಕ್ಷನಾಗಿದ್ದ ವೇಳೆ ವೃತ್ತಿ ಹಾಗೂ ಹವ್ಯಾಸಿ ರಂಗಭೂಮಿಯೆಂದು ನೋಡದೆ, ಎಲ್ಲವನ್ನು ಸಮಾನವಾಗಿ ಪರಿಗಣಿಸಿದ್ದೆ. ಈ ಎರಡು ವಿಭಾಗಗಳಿಗೆ ಸಮಾನ ಅನುದಾನವನ್ನು ಒದಗಿಸಿಕೊಟ್ಟಿದ್ದೆ ಎಂದು ಅವರು ತಿಳಿಸಿದರು.

ವೃತ್ತಿರಂಗಭೂಮಿ ನಾಟಕ ಕಂಪೆನಿಯೊಂದರ ಮಾಲಕನಾಗಿ ಸಂತಸ ಅನುಭವಿಸಿದಕ್ಕಿಂತ ಅಪಮಾನ, ಹೀಯಾಳಿಕೆ, ಬೈಗುಳ, ನೋವುಗಳನ್ನು ಅನುಭವಿಸಿದ್ದೆ ಹೆಚ್ಚು. ಒಮ್ಮೆ ಸಾಲ ಕೊಟ್ಟವರು ನನ್ನ ಆರ್ಮೋನಿಯಂನ್ನು ಎತ್ತಿಕೊಂಡು ಹೋಗುತ್ತಿದ್ದರು. ಆ ಸಂದರ್ಭದಲ್ಲಿ ಹಿರಿಯ ಕಲಾವಿದೆಯೊಬ್ಬಳು ತನ್ನ ತಾಳಿಯನ್ನು ಒತ್ತೆಯಿಟ್ಟು ಆರ್ಮೋನಿಯಂ ಬಿಡಿಸಿಕೊಟ್ಟಳು. ಇಂತಹ ಪ್ರಸಂಗಗಳನ್ನು ನನ್ನ ಬದುಕಿನಲ್ಲಿ ನೂರಾರು ಸಿಗುತ್ತವೆ. ಆದರೂ ಪ್ರೇಕ್ಷಕರ ಚಪ್ಪಾಳೆ, ಅವರು ನೀಡುವ ಹಣ, ಬೆಂಬಲ ಇವತ್ತೂ ವೃತ್ತಿ ರಂಗಭೂಮಿ ಇರುವಂತೆ ಮಾಡಿದೆ.

-ಎಲ್.ಬಿ.ಶೇಖ್ ಮಾಸ್ತರ್, ಮಾಜಿ ಅಧ್ಯಕ್ಷ, ನಾಟಕ ಅಕಾಡೆಮಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News