ಸಿಎಎ ಅನುಷ್ಠಾನವನ್ನು ಯಾವುದೇ ರಾಜ್ಯ ನಿರಾಕರಿಸುವುದು ಅಸಂವಿಧಾನಿಕ: ಕಪಿಲ್ ಸಿಬಲ್

Update: 2020-01-19 06:12 GMT

ಕೋಝಿಕ್ಕೋಡ್ , ಜ.19: ಈಗಾಗಲೇ ಸಂಸತ್ತಿನಲ್ಲಿ  ಅಂಗೀಕರಿಸಲಾದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯನ್ನು ಯಾವುದೇ ರಾಜ್ಯಕ್ಕೂ  ಅನುಷ್ಠಾನಗೊಳಿಸದೆ ಬೇರೆ ದಾರಿ ಇಲ್ಲ. ಯಾಕೆಂದರೆ ಸಿಎಎ ಅನುಷ್ಠಾನವನ್ನು ನಿರಾಕರಿಸುವುದು ಅಸಂವಿಧಾನಿಕ ಎಂದು ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಶನಿವಾರ ಹೇಳಿದ್ದಾರೆ.

"ನೀವು ಸಿಎಎನ್ನು ವಿರೋಧಿಸಬಹುದು, ನೀವು ವಿಧಾನಸಭೆಯಲ್ಲಿ ನಿರ್ಣಯವನ್ನು ಅಂಗೀಕರಿಸಬಹುದು ಮತ್ತು ಅದನ್ನು ಹಿಂತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರವನ್ನು ಕೇಳಬಹುದು. ಆದರೆ ಅಂಗೀಕರಿಸಲಾದ ಸಿಎಎನ್ನು ಯಾವುದೇ ರಾಜ್ಯವು ನಾನು ಅದನ್ನು ಕಾರ್ಯಗತಗೊಳಿಸುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ.  ಹಾಗೆ ಮಾಡುವುದು ಅಸಂವಿಧಾನಿಕವಾಗಿದೆ. " ಎಂದು ಮಾಜಿ ಕಾನೂನು ಮತ್ತು ನ್ಯಾಯ ಸಚಿವ ಕಪಿಲ್ ಸಿಬಲ್  ಹೇಳಿದರು.

"ನಾವು  ಅದನ್ನು ಕಾರ್ಯಗತಗೊಳಿಸುವುದಿಲ್ಲ ಎಂದು ಹೇಳುವುದು ಸಾಂವಿಧಾನಿಕವಾಗಿ  ಸಮಸ್ಯೆಯಾಗಲಿದೆ ಮತ್ತು ಹೆಚ್ಚಿನ ತೊಂದರೆಗಳನ್ನು ಸೃಷ್ಟಿಸುತ್ತದೆ" ಎಂದು ಕೇರಳ ಸಾಹಿತ್ಯ ಉತ್ಸವದ (ಕೆಎಲ್‌ಎಫ್) ಮೂರನೇ ದಿನದಂದು ಮಾಜಿ ಕಾನೂನು ಮತ್ತು ನ್ಯಾಯ ಸಚಿವರು ಹೇಳಿದರು.

ಈ ವಾರದ ಆರಂಭದಲ್ಲಿ ಕೇರಳ ಸರ್ಕಾರ ಸಿಎಎ ವಿರುದ್ಧ ಸುಪ್ರೀಂ ಕೋರ್ಟ್‌ನ ಮೊರೆ ಹೋಗಿದ್ದು, ಇದನ್ನು "ಸಂವಿಧಾನದಲ್ಲಿ ಪ್ರತಿಪಾದಿಸಿರುವ ಸಮಾನತೆ, ಸ್ವಾತಂತ್ರ್ಯ ಮತ್ತು ಜಾತ್ಯತೀತತೆಯ ತತ್ವಗಳ ಉಲ್ಲಂಘನೆ" ಎಂದು ಘೋಷಿಸಲು ಕೋರಿದೆ.

ಈ ಕಾಯ್ದೆಯನ್ನು ಪ್ರಶ್ನಿಸಿದ ಮತ್ತು  ವಿಧಾನಸಭೆಯಲ್ಲಿ  ಕಾನೂನಿನ ವಿರುದ್ಧ ನಿರ್ಣಯವನ್ನು ಅಂಗೀಕರಿಸಿದ ಮೊದಲನೆಯ ರಾಜ್ಯ ಕೇರಳವಾಗಿದೆ.   ಕೇರಳ, ರಾಜಸ್ಥಾನ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ ಮತ್ತು ಮಹಾರಾಷ್ಟ್ರ ಸೇರಿದಂತೆ ಹಲವು  ರಾಜ್ಯ ಸರ್ಕಾರಗಳು ಸಿಎಎ ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ಬಗ್ಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿವೆ.

ಹಿರಿಯ ವಕೀಲ-ರಾಜಕಾರಣಿ "ಅವರು ಅದನ್ನು ಕಾರ್ಯಗತಗೊಳಿಸುವುದಿಲ್ಲ" ಎಂದು ಹೇಳಿದಾಗ ರಾಜ್ಯಗಳ ಅರ್ಥವೇನು ಮತ್ತು ಅವರು  ಏನು  ಮಾಡಲು ಬಯಸುತ್ತಾರೆ ಎಂದು  ಪ್ರಶ್ನಿಸಿದರು.

ಕಪಿಲ್ ಸಿಬಲ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಹಿರಿಯ ಮುಖಂಡ ಸಲ್ಮಾನ್ ಖುರ್ಷಿದ್, " ಸಂಸತ್ತು ಅಂಗೀಕರಿಸಿದ ಕಾನೂನನ್ನು ನಾನು ಅನುಸರಿಸುವುದಿಲ್ಲ ಎಂದು   ಸಂವಿಧಾನಾತ್ಮಕವಾಗಿ, ರಾಜ್ಯ ಸರ್ಕಾರವು ಹೇಳುವುದು ಕಷ್ಟವಾಗುತ್ತದೆ. ಸುಪ್ರೀಂ ಕೋರ್ಟ್  ಹಸ್ತಕ್ಷೇಪ ಮಾಡದಿದ್ದರೆ ಅದು ಕಾನೂನು ಆಗಿ  ಪುಸ್ತಕದಲ್ಲಿ ಉಳಿಯುತ್ತದೆ.  ಏನಾದರೂ ಕಾನೂನು ಪುಸ್ತಕದಲ್ಲಿದ್ದರೆ, ನೀವು ಅದನ್ನು ಪಾಲಿಸಬೇಕು, ಇಲ್ಲದಿದ್ದರೆ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದರು.

 ಸುಪ್ರೀಂ ಕೋರ್ಟ್‌ ಏನು ಹೇಳುತ್ತದೆ ಎಂದು  ಕಾಂಗ್ರೆಸ್ ಕಾಯುತ್ತಿದೆ  ಎಂದು ಅವರು  ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News