6 ವರ್ಷಗಳಲ್ಲಿ ಮುಸ್ಲಿಮರು ಸೇರಿ 2,838 ಪಾಕಿಸ್ತಾನದ ನಿರಾಶ್ರಿತರಿಗೆ ಪೌರತ್ವ: ನಿರ್ಮಲಾ ಸೀತಾರಾಮನ್

Update: 2020-01-19 15:09 GMT

ಚೆನ್ನೈ,ಜ.19: ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ)ಯ ವಿರುದ್ಧ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ನಡುವೆಯೇ ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು,ಕಳೆದ ಆರು ವರ್ಷಗಳಲ್ಲಿ 2,838 ಪಾಕಿಸ್ತಾನಿಗಳು ಮತ್ತು 172 ಬಾಂಗ್ಲಾದೇಶಿಗಳಿಗೆ ಭಾರತೀಯ ಪೌರತ್ವ ನೀಡಲಾಗಿದೆ ಎಂದು ರವಿವಾರ ಇಲ್ಲಿ ತಿಳಿಸಿದರು.

ಕಳೆದ ಆರು ವರ್ಷಗಳಲ್ಲಿ ಮುಸ್ಲಿಮರು ಸೇರಿದಂತೆ 2,838 ಪಾಕಿಸ್ತಾನಿ ನಿರಾಶ್ರಿತರು,914 ಅಫ್ಘಾನಿಸ್ತಾನಿ ನಿರಾಶ್ರಿತರು ಮತ್ತು 172 ಬಾಂಗ್ಲಾದೇಶಿ ನಿರಾಶ್ರಿತರಿಗೆ ಭಾರತೀಯ ಪೌರತ್ವವನ್ನು ನೀಡಲಾಗಿದೆ. 1964ರಿಂದ 2008ರವರೆಗೆ ನಾಲ್ಕು ಲಕ್ಷಕ್ಕೂ ಅಧಿಕ ಶ್ರೀಲಂಕಾ ತಮಿಳರಿಗೆ ಭಾರತೀಯ ಪೌರತ್ವವನ್ನು ಮಂಜೂರು ಮಾಡಲಾಗಿದೆ ಎಂದು ಸಿಎಎ ಕುರಿತು ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಅವರು ಹೇಳಿದರು.

2014ರವರೆಗೆ ಪಾಕಿಸ್ತಾನ,ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನಗಳ 566ಕ್ಕೂ ಹೆಚ್ಚಿನ ಮುಸ್ಲಿಮರಿಗೆ ಭಾರತೀಯ ಪೌರತ್ವವನ್ನು ನೀಡಲಾಗಿದೆ. 2016-18ರ ಅವಧಿಯಲ್ಲಿ ನರೇಂದ್ರ ಮೋದಿ ಸರಕಾರವು ಸುಮಾರು 1,595 ಪಾಕಿಸ್ತಾನಿ ವಲಸಿಗರು ಮತ್ತು 391 ಅಫ್ಘಾನಿಸ್ತಾನಿ ಮುಸ್ಲಿಮರಿಗೆ ಭಾರತೀಯ ಪೌರತ್ವವನ್ನು ನೀಡಿದೆ ಎಂದ ಸೀತಾರಾಮನ್,2016ರಲ್ಲಿ ಪಾಕಿಸ್ತಾನದ ಅದ್ನಾನ್ ಸಮಿ ಮತ್ತು ಬಾಂಗ್ಲಾದೇಶದ ತಸ್ಲಿಮಾ ನಸ್ರೀನ್ ಅವರಿಗೆ ಭಾರತೀಯ ಪೌರತ್ವ ನೀಡಿರುವುದು ಇದಕ್ಕೆ ಉದಾಹರಣೆಗಳಾಗಿವೆ ಎಂದರು.

ಪೂರ್ವ ಪಾಕಿಸ್ತಾನದಿಂದ ಭಾರತಕ್ಕೆ ಬಂದಿದ್ದ ಜನರು ದೇಶಾದ್ಯಂತ ವಿವಿಧ ಶಿಬಿರಗಳಲ್ಲಿ ನೆಲೆಸಿದ್ದಾರೆ. 50-60 ವರ್ಷಗಳಾದರೂ ಅವರು ಈಗಲೂ ಅಲ್ಲಿಯೇ ಇದ್ದಾರೆ. ಈ ಶಿಬಿರಗಳಿಗೆ ನೀವು ಭೇಟಿ ನೀಡಿದರೆ ನಿಮ್ಮ ಹೃದಯ ಮರುಗುತ್ತದೆ. ಶ್ರೀಲಂಕಾ ತಮಿಳರದ್ದೂ ಇದೇ ಕಥೆ,ಅವರ ವಾಸವೂ ಶಿಬಿರಗಳಲ್ಲಿ ಮುಂದುವರಿದಿದೆ. ಅವರು ಮೂಲಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದರು.

ಸಿಎಎ ಯಾರದೇ ಪೌರತ್ವವನ್ನು ಕಿತ್ತುಕೊಳ್ಳುವುದಿಲ್ಲ ಎಂದು ಒತ್ತಿ ಹೇಳಿದ ಸೀತಾರಾಮನ್,ಸಿಎಎ ಜನರಿಗೆ ಉತ್ತಮ ಬದುಕನ್ನು ಒದಗಿಸುವ ಒಂದು ಪ್ರಯತ್ನವಾಗಿದೆ. ಎನ್‌ಪಿಆರ್ ಅನ್ನು ಪ್ರತಿ 10 ವರ್ಷಗಳಿಗೊಮ್ಮೆ ಪರಿಷ್ಕರಿಸಲಾಗುತ್ತದೆ ಮತ್ತು ಇದು ಎನ್‌ಆರ್‌ಸಿಯೊಂದಿಗೆ ಗುರುತಿಸಿಕೊಮಡಿಲ್ಲ. ಕೆಲವರು ಸುಳ್ಳು ಆರೋಪಗಳನ್ನು ಮಾಡುತ್ತ ಜನರಲ್ಲಿ ಅನಗತ್ಯ ಆತಂಕವನ್ನು ಸೃಷ್ಟಿಸುತ್ತಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News