ಸಿಎಎ ಬಗ್ಗೆ ಚರ್ಚೆಗೆ ಅಮಿತ್ ಶಾ ಸವಾಲು: 'ಬಹಿರಂಗ ಚರ್ಚೆಗೆ ಸಿದ್ಧ' ಎಂದ ವಿ.ಎಸ್.ಉಗ್ರಪ್ಪ

Update: 2020-01-19 12:06 GMT

ಬೆಂಗಳೂರು, ಜ.19: ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಸಂಶಯವಿದ್ದರೆ ಬಹಿರಂಗ ಚರ್ಚೆಗೆ ಬನ್ನಿಯೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ಪಂಥಾಹ್ವಾನವನ್ನು ಕಾಂಗ್ರೆಸ್ ಸ್ವೀಕರಿಸಿದ್ದು, ವಿಧಾನಸೌಧದ ಮೆಟ್ಟಿಲುಗಳ ಮೇಲೆ ಪ್ರಧಾನಿ ಮೋದಿ, ಅಮಿತ್ ಶಾ ಇಲ್ಲವೇ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸೇರಿದಂತೆ ಯಾರೇ ಬಂದರೂ ಅವರೊಂದಿಗೆ ಬಹಿರಂಗವಾಗಿಯೇ ಚರ್ಚೆ ನಡೆಸಲು ಸಿದ್ಧರಿದ್ದೇವೆಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಪ್ರತಿ ಸವಾಲು ಹಾಕಿದ್ದಾರೆ.

ರವಿವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರಿಗೆ ತಾಕತ್ತು, ಧೈರ್ಯದ್ದರೆ ಪೌರತ್ವ ತಿದ್ದು ಪಡಿ ಕಾಯ್ದೆ ಅಷ್ಟೇ ಅಲ್ಲದೆ, ದೇಶದ ಕುಸಿಯುತ್ತಿರುವ ಆರ್ಥಿಕತೆ, ನಿರುದ್ಯೋಗ, ಭ್ರಷ್ಟಾಚಾರದ ಕುರಿತು ಚರ್ಚಿಸಲಿ. ಹಾಗೂ ದೇಶದ ಅಭಿವೃದ್ದಿ, ಸಾಮರಸ್ಯ, ಸಮಗ್ರತೆ, ತ್ಯಾಗ ಬಲಿದಾನದಲ್ಲಿ ಕಾಂಗ್ರೆಸ್‌ನ ಕೊಡುಗೆ ಮತ್ತು ಬಿಜೆಪಿ ಕೊಡುಗೆಗಳ ಬಗ್ಗೆಯೂ ಚರ್ಚೆಸೋಣವೆಂದರು.

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರು ಸಿಎಎ ಬಗ್ಗೆ ಸುಳ್ಳಿ ಸರಮಾಲೆಯನ್ನೇ ಎಣಿಯುತ್ತಿದ್ದಾರೆ. ಇವರಿಗೆ ಅಷ್ಟು ವಿಶ್ವಾಸವಿದ್ದರೆ ಸಂಸತನ್ನು ವಿಸರ್ಜಿಸಿ ಸಿಎಎ ಬಗ್ಗೆ ಜನಾದೇಶ ಪಡೆದು ಗೆದ್ದು ಬರಲಿ. ಇವಿಎಂ ಬದಲಿಗೆ ಮತಪತ್ರಗಳ ಮೂಲಕ ಚುನಾವಣೆ ಎದುರಿಸಿ ಜಯಗಳಿಸಿದರೆ, ಅವರ ವಿರುದ್ಧ ಯಾವುದೇ ಟೀಕೆ ಮಾಡುವುದಿಲ್ಲ. ಬದಲಿಗೆ, ಅವರು ಹೇಳಿದ ಕೆಲಸವನ್ನು ಮಾಡಿಕೊಂಡು ಇರುತ್ತೇನೆಂದು ಅವರು ಹೇಳಿದರು.

 ರಾಜ್ಯಕ್ಕೆ ಭೇಟಿ ನೀಡಿದ್ದ ಅಮಿತ್ ಶಾ, ಕಳಸಾ ಬಂಡೂರಿ ನೀರು ಹಂಚಿಕೆ ಕುರಿತು ಚರ್ಚಿಸಬಹುದು, ನೆರೆಸಂತ್ರಸ್ತರಿಗೆ ಪರಿಹಾರ ಹಣದ ಬಗ್ಗೆ ಭರವಸೆ ನೀಡಬಹುದು, ಗ್ರಾಮೀಣಾಭಿವೃದ್ದಿಗೆ 2850 ಕೋಟಿ ರೂ. ಸೇರದಂತೆ ರಾಜ್ಯದ ಜಲ್ವಂತ ಸಮಸ್ಯೆಗಳ ಕುರಿತು ಪ್ರಸ್ತಾಪಿಸಬಹುದೆಂದು ನಾಡಿನ ಜನತೆ ಊಹಿಸಿದ್ದರು. ಆದರೆ, ಅವರು ವಿದ್ಯಾರ್ಥಿಗಳ ಮುಂದೆ ಸುಳ್ಳುಗಳ ಗೋಪುರ ಕಟ್ಟಿ ಹೋಗಿದ್ದಾರೆಂದು ಅವರು ಲೇವಡಿ ಮಾಡಿದರು.

ದೇಶಕ್ಕಾಗಿ ಮಹಾತ್ಮ ಗಾಂಧೀಜಿ, ಇಂದಿರಾ ಗಾಂಧಿ, ರಾಜೀವ್‌ ಗಾಂಧಿ ತಮ್ಮ ಪ್ರಾಣವನ್ನೇ ಅರ್ಪಿಸಿದ್ದಾರೆ. ಅಂತಹ ಪಕ್ಷವೊಂದರ ನಾಯಕ ರಾಹುಲ್‌ ಗಾಂಧಿ ಬಗ್ಗೆ ವಿಚಾರವಾದಿ ರಾಮಚಂದ್ರ ಗುಹಾ ಲಘುವಾಗಿ ಮಾತನಾಡಿರುವುದು ಬೇಸರ ತರಿಸಿದೆ. ನರೇಂದ್ರ ಮೋದಿ ರೀತಿಯಲ್ಲಿ ಸುಳ್ಳು ಹೇಳುವುದಕ್ಕೆ, ಕೋಟ್ಯಂತರ ರೂ.ಬೆಲೆಬಾಳುವ ಡ್ರೆಸ್ ಹಾಕುವುದಕ್ಕೆ, ವಿದೇಶಗಳಲ್ಲಿ ಕಾಲ ಹರಣ ಮಾಡುವುದಕ್ಕೆ ರಾಹುಲ್‌ ಗಾಂಧಿಗೆ ಸಾಧ್ಯವಾಗದಿರಬಹುದು. ಆದರೆ, ದೇಶಕ್ಕೆ ಮೋದಿಯಿಂದ ತಲೆದೂರಿರುವ ಆತಂಕ ಹಾಗೂ ಸಮಸ್ಯೆಗಳ ನಿವಾರಣೆಗೆ ಅವಿರತವಾಗಿ ಶ್ರಮಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.

ಅಮಿತ್ ಶಾ ಸುಳ್ಳು ಹೇಳುವುದರಲ್ಲಿ ನಿಸ್ಸೀಮ: ಸಚಿವ ಅಮಿತ್ ಶಾ ಸಿಎಎ ವಿರುದ್ಧ ಮಾತನಾಡುವವರು ದಲಿತ ವಿರೋಧಿಗಳು ಎಂದು ಹೇಳುವ ಮೂಲಕ ದಲಿತರನ್ನು ಓಟ್ ಬ್ಯಾಂಕ್ ಆಗಿಸುವ ಪ್ರಯತ್ನವನ್ನು ನಡೆಸಿದ್ದಾರೆ. ಆದರೆ, ಸಂಸತ್‌ನಲ್ಲಿ ಸಿಎಎ ಕುರಿತು ಮಾತನಾಡುವಾಗ ದಲಿತರ ಬಗ್ಗೆ ಪ್ರಸ್ತಾಪವನ್ನೇ ಮಾಡಿಲ್ಲ. ಈಗ ಸಿಎಎ ಕುರಿತು ದಲಿತರು, ವಿಚಾರವಾದಿಗಳು ಸಿಎಎ ವಿರುದ್ಧ ಬೀದಿಗಿಳಿಯುತ್ತಿದ್ದಂತೆ ದಲಿತರ ಬಗ್ಗೆ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಎಸ್ಸಿಪಿ-ಟಿಎಸ್ಪಿ ಯೋಜನೆಯಡಿ ದಲಿತರಿಗೆ ಜನಸಂಖ್ಯೆಗೆ ಅನುಗುಣವಾಗಿ ಸುಮಾರು 35ಸಾವಿರ ಕೋಟಿ ರೂ.ಗೂ ಹೆಚ್ಚು ಹಣ ಪ್ರತಿವರ್ಷ ಬಿಡುಗಡೆ ಮಾಡಲಾಗಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಇಡೀ ದೇಶದ ದಲಿತ ಸಮುದಾಯಕ್ಕೆ ನೀಡಿರುವ ಅನುದಾನ 50ಸಾವಿರ ಕೋಟಿ ರೂ.ವನ್ನು ಮೀರಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶದಲ್ಲಿ ಪ್ರತಿನಿತ್ಯ ದಲಿತರ ಮೇಲೆ ಹಲ್ಲೆ, ಅತ್ಯಾಚಾರಗಳ ಪ್ರಕರಣಗಳು ಹೆಚ್ಚುತ್ತಲೇ ಇದೆ. ಅದರಲ್ಲೂ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಈ ಬಗ್ಗೆ ಎಂದೂ ಬಾಯಿಬಿಡದ ಬಿಜೆಪಿ ನಾಯಕರು, ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ದಲಿತರ ಹೆಸರಿನಲ್ಲಿ ಸುಳ್ಳುಗಳನ್ನು ಹೇಳುತ್ತಾರೆ.

ವಿ.ಎಸ್.ಉಗ್ರಪ್ಪ, ಮಾಜಿ ಸಂಸದ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News