'ಅಪ್ಪನ ಜತೆಗೆ ಭಾರತದಲ್ಲಿಯೆ ಇರುತ್ತೇನೆ': ಮಗುವಿನ ಆಸೆಗೆ ಅಸ್ತು ಎಂದ ಹೈಕೋರ್ಟ್

Update: 2020-01-19 14:52 GMT

ಬೆಂಗಳೂರು, ಜ.19: ನಾನು ತಾಯಿಯ ಜೊತೆಗೆ ಕೆನಡಾಕ್ಕೆ ಹೋಗುವುದಿಲ್ಲ. ಎರಡನೆ ತಾಯಿ, ಅಪ್ಪನ ಜತೆ ಭಾರತದಲ್ಲಿಯೇ ಇರುತ್ತೇನೆ ಎಂದು ಕೆನಡಾ ಪೌರತ್ವ ಪಡೆದ 10 ವರ್ಷದ ಹೆಣ್ಣು ಮಗುವಿನ ಆಸೆಗೆ ಹೈಕೋರ್ಟ್ ಅಸ್ತು ಎಂದಿದೆ. ಪತಿ-ಪತ್ನಿ ಮಧ್ಯದ ಕಲಹಕ್ಕೆ ಸಂಬಂಧಿಸಿದಂತೆ, ಮಗು ತಾಯಿಯ ಬಳಿ ಇರಬೇಕು ಎಂಬ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠ ರದ್ದುಗೊಳಿಸಿದೆ.

ಈ ಕುರಿತು 41 ವರ್ಷದ ತಂದೆ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿದ ನ್ಯಾಯಪೀಠ, ಸಂರಕ್ಷಕರು ಮತ್ತು ಪೋಷಕರು ಉಸ್ತುವಾರಿ ಕಾಯ್ದೆ-1890ರ ಕಲಂ 12ರ ಅನುಸಾರ ಮಗುವನ್ನು ತಾಯಿಯ ವಶಕ್ಕೆ ಒಪ್ಪಿಸಬೇಕು ಎಂದು ಕೌಟುಂಬಿಕ ನ್ಯಾಯಾಲಯ 2018ರ ಅಕ್ಟೋಬರ್ 30ರಂದು ನೀಡಿರುವ ಆದೇಶ ಸೂಕ್ತವಾಗಿಲ್ಲ. ಹಿಂದೂ ಅಲ್ಪಸಂಖ್ಯಾತ ಕಾಯ್ದೆ 1956ರ ಅನುಸಾರ ಅಪ್ರಾಪ್ತ ಹಿಂದೂ ಬಾಲಕ ಬಾಲಕಿಯರಿಗೆ ಸ್ವಾಭಾವಿಕವಾಗಿಯೇ ತಂದೆಯೇ ಮೊದಲ ಸಂರಕ್ಷಣಾ ಅಧಿಕಾರ ಹೊಂದಿರುತ್ತಾನೆ ಎಂದು ಹೇಳಿದೆ.

ಮಗುವಿನ ಪಾಸ್ಪೋರ್ಟ್ ಮತ್ತು ಪಿಒಐ ಕಾರ್ಡ್(ಪರ್ಸನ್ ಆಫ್ ಇಂಡಿಯನ್) ಅನ್ನು ಕೂಡಲೇ ತಂದೆಗೆ ನೀಡಬೇಕು. ಒಂದು ವೇಳೆ ತಾಯಿಯು ಮಗಳ ಭೇಟಿಗೆ ಅವಕಾಶ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರೆ ಅದಕ್ಕೆ ತಂದೆ ವಿರೋಧ ಮಾಡಬಾರದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಬಾಲಕಿ ಈ ಮೊದಲೇ ಕೌಟುಂಬಿಕ ನ್ಯಾಯಾಲಯದಲ್ಲಿ, ತಾನು ತಂದೆಯ ಜೊತೆ ಇರುವುದಾಗಿ ಹೇಳಿದ್ದನ್ನು ಕಡೆಗಣಿಸಲಾಗಿದೆ. ಇದು ತಪ್ಪು. ಮಗು ಮಾನಸಿಕವಾಗಿ ಸರಿಯಾಗಿ ಯೋಚಿಸಬಲ್ಲ ಬುದ್ಧಿವಂತೆ, ತಂದೆತಾಯಿಗಳ ಸ್ವಭಾವ, ವ್ಯತ್ಯಾಸವನ್ನು ಚೆನ್ನಾಗಿ ಅರಿಯಬಲ್ಲವಳಿದ್ದಾಳೆ. ತನ್ನನ್ನು ಯಾರು ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂಬುದೂ ಆಕೆಗೆ ಗೊತ್ತಿದೆ ಎಂದು ನ್ಯಾಯಪೀಠ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News