​ಮುಂಬೈ ಮಹಾನಗರದಲ್ಲಿ ಇನ್ನು ಅಶ್ವಾರೋಹಿ ಪೊಲೀಸ್ ಗಸ್ತು

Update: 2020-01-20 03:52 GMT
Image Source : TWITTER

ಮುಂಬೈ: ವಾಹನದಟ್ಟಣೆ ಮತ್ತು ಗುಂಪು ನಿಯಂತ್ರಣಕ್ಕಾಗಿ ಮುಂಬೈ ಮಹಾನಗರದಲ್ಲಿ 88 ವರ್ಷಗಳ ಬಳಿಕ ಪೊಲೀಸರು ಕುದುರೆ ಸವಾರಿ ಮೂಲಕ ಗಸ್ತು ತಿರುಗಲು ಆರಂಭಿಸಲಿದ್ದಾರೆ.

ಶಿವಾಜಿ ಪಾರ್ಕ್‌ನಲ್ಲಿ ನಡೆಯುವ ಈ ವರ್ಷದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಿದ ಬಳಿಕ ಕುದುರೆಗಳನ್ನು ಗಸ್ತು ಕಾರ್ಯಕ್ಕೆ ನಿಯೋಜಿಸಲಾಗುವುದು ಎಂದು ಗೃಹ ಸಚಿವ ಅನಿಲ್ ದೇಶಮುಖ್ ತಿಳಿಸಿದ್ದಾರೆ.

ವಾಹನದಟ್ಟಣೆ ಅಧಿಕವಾದ ಹಿನ್ನೆಲೆಯಲ್ಲಿ 1932ರಲ್ಲಿ ಈ ಅಶ್ವಾರೋಹಿತ ಪೊಲೀಸ್ ಪಡೆಯನ್ನು ಎಲ್ಲ ಮಹಾನಗರಗಳಲ್ಲಿ ರದ್ದು ಮಾಡಲಾಗಿತ್ತು. 

"ಇಂದು ಪೊಲೀಸರು ಅತ್ಯಾಧುನಿಕ ಜೀಪು ಮತ್ತು ಮೋಟರ್ ಸೈಕಲ್‌ಗಳನ್ನು ಹೊಂದಿದ್ದಾರೆ. ಆದಾಗ್ಯೂ ಅಶ್ವಾರೋಹಿ ಪೊಲೀಸ್ ಪಡೆ, ಜನನಿಬಿಡ ಪ್ರದೇಶಗಳಲ್ಲಿ ಅಪರಾಧ ಕೃತ್ಯಗಳನ್ನು ತಡೆಯಲು ನೆರವಾಗಲಿದೆ" ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಉತ್ಸವ ಮತ್ತು ಜಾಥಾ ನಡೆಯುವ ವೇಳೆ ಜನದಟ್ಟಣೆ ನಿಯಂತ್ರಿಸಲು, ಕಡಲ ಕಿನಾರೆಯಂಥ ಜನನಿಬಿಡ ಪ್ರದೇಶಗಳಲ್ಲಿ ಎತ್ತರದಿಂದ ಕಣ್ಗಾವಲು ಇಡಲು ಇದು ಸಹಕಾರಿ. ಕುದುರೆಯ ಮೇಲೆ ಗಸ್ತು ತಿರುಗುವ ಒಬ್ಬ ಪೊಲೀಸ್ ಪೇದೆ ನೆಲದ ಮೇಲೆ ಕಾರ್ಯ ನಿರ್ವಹಿಸುವ 30 ಪೇದೆಗಳಿಗೆ ಸಮ ಎಂದು ಅವರು ವಿವರಿಸಿದರು.

ಇಂಥ ಘಟಕಗಳನ್ನು ಪುಣೆ, ನಾಗ್ಪುರ ಮತ್ತು ಇತರ ನಗರಗಳಲ್ಲಿ ಕೂಡಾ ಆರಂಭಿಸಲಾಗುವುದು. ಮುಂದಿನ ಆರು ತಿಂಗಳಲ್ಲಿ ಒಬ್ಬ ಸಬ್ ಇನ್‌ಸ್ಪೆಕ್ಟರ್, ಒಬ್ಬ ಎಎಸ್‌ಐ, ನಾಲ್ವರು ಹವಾಲ್ದಾರ್ ಹಾಗೂ 32 ಪೇದೆಗಳಿರುವ ಘಟಕಗಳು ಕಾರ್ಯಾರಂಭ ಮಾಡಲಿವೆ. ಈಗಾಗಲೇ 13 ಕುದುರೆಗಳನ್ನು ಖರೀದಿಸಲಾಗಿದ್ದು, ಮುಂದಿನ ಆರು ತಿಂಗಳಲ್ಲಿ ಉಳಿದ ಕುದುರೆಗಳನ್ನು ಖರೀದಿಸಲಾಗುತ್ತದೆ. ಕುದುರೆ ಲಾಯವನ್ನು ಮರೋಲ್‌ನಲ್ಲಿ 2.5 ಎಕರೆ ಪ್ರದೇಶದಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News