​ಎನ್‌ಪಿಆರ್, ಎನ್‌ಆರ್‌ಸಿ ವಿರುದ್ಧ ಸಿಪಿಎಂ ಮನೆ ಮನೆ ಅಭಿಯಾನ: ಸೀತಾರಾಮ ಯಚೂರಿ

Update: 2020-01-20 04:02 GMT

ತಿರುವನಂತಪುರ: ನ್ಯಾಷನಲ್ ಪಾಪ್ಯುಲೇಶನ್ ರಿಜಿಸ್ಟರ್ (ಎನ್‌ಪಿಆರ್) ಮತ್ತು ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್ (ಎನ್‌ಆರ್‌ಸಿ) ವಿರುದ್ಧ ಸಿಪಿಎಂ ದೇಶಾದ್ಯಂತ ಮನೆ ಮನೆ ಅಭಿಯಾನ ನಡೆಸಲಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯಚೂರಿ ತಿಳಿಸಿದ್ದಾರೆ.

ಪಕ್ಷದ ಕೇಂದ್ರ ಸಮಿತಿ ಸಭೆಯ ನಿರ್ಣಯಗಳನ್ನು ಸುದ್ದಿಗೋಷ್ಠಿಯಲ್ಲಿ ವಿವರಿಸಿದ ಅವರು, ಸರ್ಕಾರದ ಜನಗಣತಿ ವೇಳೆ ಜನಗಣತಿ ಕುರಿತ ಪ್ರಶ್ನೆಗಳಿಗಷ್ಟೇ ಉತ್ತರಿಸಬೇಕು ಹಾಗೂ ಎನ್‌ಪಿಆರ್ ಸಂಬಂಧಿ ಪ್ರಶ್ನೆಗಳಿಗೆ ಉತ್ತರಿಸದಂತೆ ಸಿಪಿಎಂ ಮನವಿ ಮಾಡಲಿದೆ ಎಂದು ಹೇಳಿದರು.

ಎನ್‌ಪಿಆರ್ ಮತ್ತು ಎನ್‌ಆರ್‌ಸಿ, ಬುಡಕಟ್ಟು ಜನಾಂಗದವರು, ದಲಿತರು, ನಿರ್ಗತಿಕರು ಮತ್ತು ಮುಸ್ಲಿಮರು ಸೇರಿದಂತೆ ಲಕ್ಷಾಂತರ ಬಡಜನತೆ ಮೇಲೆ ಪರಿಣಾಮ ಬೀರಲಿದೆ. ಎನ್‌ಆರ್‌ಸಿಯಲ್ಲಿ ತಮ್ಮ ಹೆಸರು ದಾಖಲಿಸಲು ಅಗತ್ಯವಾದ ದಾಖಲೆಗಳನ್ನು ಇವರು ಒದಗಿಸುವುದು ಕಷ್ಟಸಾಧ್ಯ ಎಂದರು. ಮಾರ್ಚ್ 23ರವರೆಗೆ ಮನೆಮನೆ ಅಭಿಯಾನ ನಡೆಸುವುದಾಗಿ ವಿವರ ನೀಡಿದರು.

ಎನ್‌ಆರ್‌ಸಿ ಕೇಂದ್ರ ಸರ್ಕಾರದ ಮುಸ್ಲಿಂ ವಿರೋಧಿ ಕಾರ್ಯಸೂಚಿಯ ಅಂಗ ಎಂದು ಯಚೂರಿ ಆಪಾದಿಸಿದರು. ಎಲ್ಲೆಡೆ ಬಂಧನ ಕೇಂದ್ರಗಳನ್ನು ನಿರ್ಮಿಸುವಂತೆ ರಾಜ್ಯ ಸರ್ಕಾರಗಳಿಗೆ ನೀಡಿದ ಆದೇಶವನ್ನು ವಾಪಾಸು ಪಡೆಯಬೇಕು ಎಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News