ದೇಶದಲ್ಲಿ ಶೇ.1ರಷ್ಟಿರುವ ಅತಿ ಶ್ರೀಮಂತರ ಹಣ ಕೇಂದ್ರ ಬಜೆಟ್ ಮೊತ್ತಕ್ಕಿಂತಲೂ ಅಧಿಕ!

Update: 2020-01-20 16:53 GMT

ದಾವೋಸ್,ಜ.20: ಭಾರತದ ಜನಸಂಖ್ಯೆಯ ಶೇ.1ರಷ್ಟಿರುವ ಅತ್ಯಂತ ಶ್ರೀಮಂತರು ಶೇ.70ರಷ್ಟಿರುವ ಕೆಳಸ್ತರದ 95.3 ಕೋಟಿ ಜನರ ಸಂಪತ್ತಿನ ನಾಲ್ಕು ಪಟ್ಟು ಸಂಪತ್ತನ್ನು ಹೊಂದಿದ್ದಾರೆ ಮತ್ತು ಎಲ್ಲ ಭಾರತೀಯ ಶತಕೋಟ್ಯಾಧಿಪತಿಗಳ ಒಟ್ಟು ಸಂಪತ್ತು ದೇಶದ ವಾರ್ಷಿಕ ಬಜೆಟ್‌ಗಿಂತ ಹೆಚ್ಚಿದೆ ಎಂದು ಮಾನವ ಹಕ್ಕುಗಳಿಗಾಗಿ ಶ್ರಮಿಸುತ್ತಿರುವ ಸರಕಾರೇತರ ಸಂಸ್ಥೆ ಆಕ್ಸ್‌ಫಾಮ್ ತನ್ನ ಅಧ್ಯಯನ ವರದಿ ‘ಟೈಮ್ ಟು ಕೇರ್’ನಲ್ಲಿ ಹೇಳಿದೆ.

 ಸೋಮವಾರ ಇಲ್ಲಿ ವಿಶ್ವ ಆರ್ಥಿಕ ವೇದಿಕೆ (ಡಬ್ಲುಇಎಫ್)ಯ 50ನೇ ವಾರ್ಷಿಕ ಸಭೆಯ ಮುನ್ನ ವರದಿಯನ್ನು ಬಿಡುಗಡೆಗೊಳಿಸಿದ ಆಕ್ಸ್‌ಫಾಮ್, ವಿಶ್ವದಲ್ಲಿಯ 2,153 ಶತಕೋಟ್ಯಾಧಿಪತಿಗಳು ವಿಶ್ವದ ಜನಸಂಖ್ಯೆಯ ಶೇ.60ರಷ್ಟಿರುವ 4.6 ಶತಕೋಟಿ ಜನರಿಗಿಂತ ಹೆಚ್ಚಿನ ಸಂಪತ್ತನ್ನು ಹೊಂದಿದ್ದಾರೆ ಎಂದು ತಿಳಿಸಿದೆ.

ಜಾಗತಿಕ ಅಸಮಾನತೆಯು ಅಗಾಧವಾಗಿದ್ದು ಆಘಾತಕಾರಿಯಾಗಿದೆ. ಶತಕೋಟ್ಯಾಧಿಪತಿಗಳ ಒಟ್ಟು ಸಂಪತ್ತು ಕಳೆದ ವರ್ಷ

ಕಡಿಮೆಯಾಗಿದ್ದರೂ ಕಳೆದೊಂದು ದಶಕದಲ್ಲಿ ಅಂತಹವರ ಸಂಖ್ಯೆ ಇಮ್ಮಡಿಗೊಂಡಿದೆ. ಅಸಮಾನತೆಯನ್ನು ನಿವಾರಿಸಲು ನೀತಿಗಳನ್ನು ರೂಪಿಸದಿದ್ದರೆ ಶ್ರೀಮಂತರು ಮತ್ತು ಬಡವರ ನಡುವಿನ ಅಂತರವನ್ನು ತಗ್ಗಿಸಲು ಸಾಧ್ಯವಿಲ್ಲ. ಅಸಮಾನತೆಯನ್ನು ಹೋಗಲಾಡಿಸುವ ನೀತಿಗಳಿಗೆ ಕೆಲವೇ ಸರಕಾರಗಳು ಬದ್ಧವಾಗಿವೆ ಎಂದು ಆಕ್ಸ್‌ಫಾಮ್ ಇಂಡಿಯಾ ಸಿಇಒ ಅಮಿತಾಭ್ ಬೆಹರ್ ಹೇಳಿದರು.

ಇಂದಿನಿಂದ ಆರಂಭಗೊಂಡಿರುವ ಡಬ್ಲ್ಯುಇಎಫ್‌ನ ಐದು ದಿನಗಳ ಶೃಂಗಸಭೆಯಲ್ಲಿ ಆದಾಯ ಮತ್ತು ಲಿಂಗ ಅಸಮಾನತೆ ವಿಷಯಗಳು ಪ್ರಮುಖವಾಗಿ ಚರ್ಚಿಸಲ್ಪಡುವ ನಿರೀಕ್ಷೆಯಿದೆ. ಜಾಗತಿಕ ಆರ್ಥಿಕ ಹಿಂಜರಿತವು 2019ರಲ್ಲಿ ಇನ್ನಷ್ಟು ತೀವ್ರಗೊಳ್ಳಲಿದೆ ಎಂದು ಡಬ್ಲ್ಯುಇಎಫ್‌ನ ವಾರ್ಷಿಕ ಜಾಗತಿಕ ಅಪಾಯಗಳ ವರದಿಯು ಸಹ ಎಚ್ಚರಿಕೆ ನೀಡಿದೆ.

ಕಳೆದ ಮೂರು ದಶಕಗಳಲ್ಲಿ ಜಾಗತಿಕ ಅಸಮಾನತೆಯು ಕಡಿಮೆಯಾಗಿದೆಯಾದರೂ ಹಲವಾರು ರಾಷ್ಟ್ರಗಳಲ್ಲಿ, ವಿಶೇಷವಾಗಿ ಮುಂದುವರಿದಿರುವ ಆರ್ಥಿಕತೆಗಳಲ್ಲಿ ಆಂತರಿಕ ಆದಾಯ ಅಸಮಾನತೆಯು ಹೆಚ್ಚಾಗಿದೆ ಮತ್ತು ಕೆಲವು ದೇಶಗಳಲ್ಲಿ ಐತಿಹಾಸಿಕ ಎತ್ತರವನ್ನು ತಲುಪಿದೆ ಎಂದು ಕಳೆದ ವಾರ ಬಿಡುಗಡೆಗೊಂಡ ಡಬ್ಲ್ಯುಇಎಫ್ ವರದಿಯು ಹೇಳಿದೆ.

ಲಿಂಗ ಅಸಮಾನತೆಯನ್ನು ಪೋಷಿಸುತ್ತಿರುವ ದೇಶಗಳು ಜನಸಾಮಾನ್ಯರು ಮತ್ತು ನಿರ್ದಿಷ್ಟವಾಗಿ ಬಡ ಮಹಿಳೆಯರು ಮತ್ತು ಹುಡುಗಿಯರ ಶ್ರಮದ ವೆಚ್ಚದಲ್ಲಿ ಶ್ರೀಮಂತರು ಸಂಪತ್ತನ್ನು ಕ್ರೋಢೀಕರಿಸಲು ಅವಕಾಶ ನೀಡುವ ಮೂಲಕ ಅಸಮಾನತೆ ಬಿಕ್ಕಟ್ಟನ್ನು ಇನ್ನಷ್ಟು ಹೆಚ್ಚಿಸುತ್ತಿವೆ ಎಂದು ಆಕ್ಸ್‌ಫಾಮ್ ವರದಿ ಹೇಳಿದೆ.

ಭಾರತಕ್ಕೆ ಸಂಬಂಧಿಸಿದಂತೆ ಆಕ್ಸ್‌ಫಾಮ್,63 ಭಾರತೀಯ ಶತಕೋಟ್ಯಾಧಿಪತಿಗಳ ಒಟ್ಟು ಸಂಪತ್ತು 2018-19ನೇ ಸಾಲಿನ ಕೇಂದ್ರ ಬಜೆಟ್(24,42,200 ಕೋ.ರೂ)ಗಿಂತ ಹೆಚ್ಚಿದೆ ಎಂದಿದೆ.

ನಮ್ಮ ವಿಫಲ ಆರ್ಥಿಕತೆಗಳು ಜನಸಾಮಾನ್ಯರು ಮತ್ತು ಮಹಿಳೆಯರನ್ನು ಬಲಿಯಾಗಿಸಿ ಶತಕೋಟ್ಯಾಧಿಪತಿಗಳು ಮತ್ತು ಬೃಹತ್ ಉದ್ಯಮಗಳ ಜೇಬುಗಳನ್ನು ಗಟ್ಟಿಗೊಳಿಸುತ್ತಿವೆ. ಶತಕೋಟ್ಯಾಧಿಪತಿಗಳು ಇರಬೇಕೇ ಎಂದು ಜನರು ಕೇಳಲಾರಂಭಿಸಿದರೆ ಅಚ್ಚರಿಯೇನಿಲ್ಲ ಎಂದು ಬೆಹರ್ ತಿಳಿಸಿದರು.

ತಂತ್ರಜ್ಞಾನ ಕಂಪನಿಯೊಂದರ ಹಿರಿಯ ಸಿಇಒ ಒಂದು ವರ್ಷದಲ್ಲಿ ಗಳಿಸುವ ಆದಾಯವನ್ನು ಸಂಪಾದಿಸಲು ಓರ್ವ ಮನೆಗೆಲಸದಾಕೆಗೆ 22,277 ವರ್ಷಗಳೇ ಬೇಕಾಗುತ್ತವೆ ಎಂದಿರುವ ವರದಿಯು,ಪ್ರತಿ ಸೆಕೆಂಡ್‌ಗೆ 106 ರೂ.ಗಳ ಆದಾಯದ ಅಂದಾಜಿನೊಂದಿಗೆ ಇಂತಹ ಸಿಇಒ ಓರ್ವ ಮನೆಗೆಲಸದಾಕೆಯ ಒಂದು ವರ್ಷದ ಆದಾಯಕ್ಕಿಂತ ಹೆಚ್ಚಿನ ಗಳಿಕೆಯನ್ನು ಕೇವಲ 10 ನಿಮಿಷಗಳಲ್ಲಿ ಸಂಪಾದಿಸುತ್ತಾನೆ ಎಂದಿದೆ.

 ಭಾರತದಲ್ಲಿ ಯಾವುದೇ ಆರ್ಥಿಕ ಪ್ರತಿಫಲವಿಲ್ಲದೆ ಮಹಿಳೆಯರು ಮತ್ತು ಹುಡುಗಿಯರು ಪ್ರತಿದಿನ 3.26 ಶತಕೋಟಿ ಗಂಟೆಗಳ ಕಾಲ ಗೃಹಕೃತ್ಯಗಳಲ್ಲಿ ತೊಡಗಿಕೊಂಡಿರುತ್ತಾರೆ ಮತ್ತು ತನ್ಮೂಲಕ ಪ್ರತಿ ವರ್ಷ ಭಾರತೀಯ ಆರ್ಥಿಕತೆಗೆ 19 ಲ.ಕೋ.ರೂ.ಗಳ ಕೊಡುಗೆಯನ್ನು ಸಲ್ಲಿಸುತ್ತಿದ್ದಾರೆ. ಇದು 2019ರಲ್ಲಿ ಭಾರತದ ಸಂಪೂರ್ಣ ಶಿಕ್ಷಣ ಬಜೆಟ್ (93,000 ಕೋ.ರೂ.)ಗಿಂತ 20 ಪಟ್ಟಿನಷ್ಟಿದೆ ಎಂದಿರುವ ವರದಿಯು,ಇಂದಿನ ಆರ್ಥಿಕ ವ್ಯವಸ್ಥೆಯಲ್ಲಿ ಕನಿಷ್ಠ ಲಾಭ ಪಡೆಯುತ್ತಿರುವವರು ಎಂದರೆ ಮಹಿಳೆಯರು ಮತ್ತು ಹುಡುಗಿಯರು. ಅವರು ಗೃಹಕೃತ್ಯಗಳಲ್ಲಿ,ಮಕ್ಕಳು ಮತ್ತು ಹಿರಿಯರ ಆರೈಕೆಯಲ್ಲಿ ಕೋಟ್ಯಂತರ ಗಂಟೆಗಳನ್ನು ವ್ಯಯಿಸುತ್ತಾರೆ. ಯಾವುದೇ ಆರ್ಥಿಕ ಪ್ರತಿಫಲವಿಲ್ಲದೆ ಅವರು ನಿರ್ವಹಿಸುತ್ತಿರುವ ಇಂತಹ ಕೆಲಸ ನಮ್ಮ ಆರ್ಥಿಕತೆ, ಉದ್ಯಮ ಮತ್ತು ಸಮಾಜಗಳ ಚಕ್ರಗಳನ್ನು ಚಲನೆಯಲ್ಲಿಟ್ಟಿರುವ ಸುಪ್ತ ಇಂಜಿನ್ ಆಗಿದೆ. ನಮ್ಮ ಆರ್ಥಿಕತೆಯ ಚಾಲನಾಶಕ್ತಿ ಅವರೇ ಆಗಿದ್ದಾರೆ. ಶಿಕ್ಷಣ ಪಡೆಯಲು,ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಸಂಪಾದಿಸುವ ಅವರಿಗೆ ಅವಕಾಶಗಳು ಕಡಿಮೆ ಇರುವುದರಿಂದ ಅವರು ಆರ್ಥಿಕತೆಯ ತಳಮಟ್ಟದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಎಂದಿದೆ.

ವಿಶ್ವದಲ್ಲಿಯ 22 ಅತ್ಯಂತ ಶ್ರೀಮಂತರು ಆಫ್ರಿಕಾದಲ್ಲಿನ ಎಲ್ಲ ಮಹಿಳೆಯರಿಗಿಂತ ಹೆಚ್ಚಿನ ಸಂಪತ್ತನ್ನು ಹೊಂದಿದ್ದಾರೆ ಎಂದೂ ವರದಿಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News