ವಿಶ್ವ ಸಾಮಾಜಿಕ ಗತಿಶೀಲತೆ ಸೂಚಿಯಲ್ಲಿ 76ನೇ ಸ್ಥಾನಕ್ಕೆ ಕುಸಿದ ಭಾರತ

Update: 2020-01-20 15:38 GMT

ದಾವೋಸ್, ಜ.20: ವಿಶ್ವ ಆರ್ಥಿಕ ವೇದಿಕೆ (ಡಬ್ಲ್ಯುಇಎಫ್)ಯು ಸಿದ್ಧಪಡಿಸಿರುವ ವಿಶ್ವ ಸಾಮಾಜಿಕ ಗತಿಶೀಲತೆ ಸೂಚಿಯಲ್ಲಿ 82 ದೇಶಗಳ ಪೈಕಿ 76ನೇ ಸ್ಥಾನದಲ್ಲಿ ಭಾರತವಿದೆ. ಡೆನ್ಮಾರ್ಕ್ ಮೊದಲ ಸ್ಥಾನದಲ್ಲಿದೆ.

ಡಬ್ಲ್ಯುಇಎಫ್‌ನ 50ನೇ ವಾರ್ಷಿಕ ಶೃಂಗಸಭೆಗೆ ಮುನ್ನ ಬಿಡುಗಡೆಗೊಳಿಸಿರುವ ಸೂಚಿಯು ಸಾಮಾಜಿಕ-ಆರ್ಥಿಕ ಹಿನ್ನೆಲೆಯನ್ನು ಪರಿಗಣಿಸದೆ ಪ್ರತಿ ವ್ಯಕ್ತಿಗೂ ಸಮಾನ ಅವಕಾಶವಿರುವ ಸಮಾಜಗಳನ್ನು ಸೃಷ್ಟಿಸಲು ಅಗತ್ಯವಾದ ಮಾನದಂಡಗಳನ್ನು ಬಯಸುವ ಐದು ರಾಷ್ಟ್ರಗಳಲ್ಲಿ ಭಾರತವನ್ನೂ ಸೇರಿಸಿದೆ.

ಆದಾಯ ಅಸಮಾನತೆಯ ಪ್ರಮುಖ ಚಾಲಕ ಶಕ್ತಿಯಾಗಿರುವ ಸಾಮಾಜಿಕ ಗತಿಶೀಲತೆಯನ್ನು ಶೇ.10ರಷ್ಟು ಹೆಚ್ಚಿಸುವುದರಿಂದ ಸಾಮಾಜಿಕ ಒಗ್ಗಟ್ಟಿಗೆ ಲಾಭದಾಯವಾಗುತ್ತದೆ ಮತ್ತು 2030ರ ವೇಳೆಗೆ ವಿಶ್ವದ ಆರ್ಥಿಕತೆಯನ್ನು ಸುಮಾರು ಶೇ.5ರಷ್ಟು ಹೆಚ್ಚಿಸಲು ನೆರವಾಗುತ್ತದೆ ಎಂದು ಹೇಳಿರುವ ಡಬ್ಲ್ಯುಇಎಫ್,ಆದರೆ ಕೆಲವೇ ದೇಶಗಳು ಸಾಮಾಜಿಕ ಗತಿಶೀಲತೆಯನ್ನು ಪೋಷಿಸಲು ಸರಿಯಾದ ವಾತಾವರಣವನ್ನು ಹೊಂದಿವೆ ಎಂದಿದೆ.

ಡಬ್ಲ್ಯುಇಎಫ್ ಭಾರತಕ್ಕೆ ಜೀವನಾನುಭವ ವಿಭಾಗದಲ್ಲಿ 41ನೇ ಸ್ಥಾನ ಮತ್ತು ದುಡಿಮೆಯ ಸ್ಥಿತಿಗಳ ವಿಭಾಗದಲ್ಲಿ 53ನೇ ಸ್ಥಾನವನ್ನು ನೀಡಿದೆ. ಸಾಮಾಜಿಕ ರಕ್ಷಣೆಯಲ್ಲಿ 76 ಮತ್ತು ನ್ಯಾಯಯುತ ವೇತನ ವಿತರಣೆಯಲ್ಲಿ 79ನೇ ಸ್ಥಾನ ಭಾರತಕ್ಕೆ ಲಭಿಸಿವೆ.

ಸೂಚಿಯಲ್ಲಿ ಡೆನ್ಮಾರ್ಕ್ ನಂತರದ ಸ್ಥಾನಗಳಲ್ಲಿ ನಾರ್ವೆ, ಫಿನ್ಲಂಡ್, ಸ್ವೀಡನ್, ಐಸ್‌ಲ್ಯಾಂಡ್, ನೆದರ್‌ ಲ್ಯಾಂಡ್ಸ್, ಸ್ವಿಟ್ಝರ್‌ಲ್ಯಾಂಡ್, ಆಸ್ಟ್ರಿಯಾ, ಬೆಲ್ಜಿಯಂ ಮತ್ತು ಲಕ್ಸೆಂಬರ್ಗ್ ಇವೆ.

ಜಿ7 ದೇಶಗಳ ಪೈಕಿ ಜರ್ಮನಿ ಅತ್ಯಂತ ಹೆಚ್ಚಿನ ಸಾಮಾಜಿಕ ಗತಿಶೀಲತೆಯನ್ನು ಹೊಂದಿದ್ದು, ಕೆನಡಾ, ಜಪಾನ್, ಬ್ರಿಟನ್, ಅಮೆರಿಕ ಮತ್ತು ಇಟಲಿ ನಂತರದ ಸ್ಥಾನಗಳಲ್ಲಿವೆ.

ಚೀನಾ, ಅಮೆರಿಕ, ಭಾರತ, ಜಪಾನ್ ಮತ್ತು ಜರ್ಮನಿಗಳನ್ನು ಸಾಮಾಜಿಕ ಗತಿಶೀಲತೆಯನ್ನು ಹೆಚ್ಚಿಸುವ ಮೂಲಕ ಅತ್ಯಂತ ಹೆಚ್ಚಿನ ಲಾಭಗಳನ್ನು ಗಳಿಸಬಲ್ಲ ದೇಶಗಳೆಂದು ಹೆಸರಿಸಲಾಗಿದೆ.

ಬ್ರಿಕ್ಸ್ ರಾಷ್ಟ್ರಗಳ ಪೈಕಿ ರಷ್ಯನ್ ಒಕ್ಕೂಟ ಮೊದಲ ಸ್ಥಾನದಲ್ಲಿದ್ದರೆ, ಚೀನಾ, ಬ್ರೆಝಿಲ್, ಭಾರತ ಮತ್ತು ದಕ್ಷಿಣ ಆಫ್ರಿಕಾ ನಂತರದ ಸ್ಥಾನಗಳಲ್ಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News