ಭೀಮಸೇನ- ನಳಮಹಾರಾಜರು ಗಂಡಸರಲ್ಲವೇ?!

Update: 2020-01-20 18:27 GMT

‘ಪಾಕ ಶಾಸ್ತ್ರ’ ಅಥವಾ ‘ಸೂಪ ಶಾಸ್ತ್ರ’ ಎಂದು ಪ್ರಸಿದ್ಧಿಯಾಗಿರುವ ಅಡುಗೆಯು, ಮನೆಗಳಲ್ಲಿ ಹೆಣ್ಣು ಮಕ್ಕಳಿಗೂ, ಹೊರಗಿನ ಸಭೆ ಸಮಾರಂಭಗಳಿಗೆ ಗಂಡಸರಿಗೂ ಮೀಸಲಾಗಿ ಬಿಟ್ಟಿದೆ. ಈ ಶಾಸ್ತ್ರಗಳನ್ನು ಬರೆದವರು ಪಂಡಿತರು ಮತ್ತು ಚಕ್ರವರ್ತಿಗಳು ಎಂಬುದು ವಿಶೇಷ. ನಳ ಮತ್ತು ಭೀಮ ಎರಡೂ ಪಾತ್ರಗಳು ಮಹಾಭಾರತದ ಕಥನದಲ್ಲಿ ಕಂಡು ಬರುವಂತಹವು. ಹಾಗಿದ್ದರೆ ಕೃತಿಗಳನ್ನು ಬರೆದವರು ಅವರೇನಾ?! ಅಥವಾ ಯಾರವು ಎಂಬುದು ಯಾರಿಗೂ ತಿಳಿದಿಲ್ಲ.

  ಅಡುಗೆಯ ಅಭಿರುಚಿ ಮತ್ತು ತಾತ್ವಿಕತೆಯನ್ನು ಚರ್ಚೆಯ ಹರಹಿನಲ್ಲಿ ನೋಡಿದರೆ ಅದು ತನ್ನಷ್ಟಕ್ಕೆ ತಾನು ವಿಸ್ತರಿಸಿಕೊಳ್ಳುತ್ತಾ ಸಾಗುತ್ತದೆ. ಬದುಕಿನ ಹಲವಾರು ಮಜಲುಗಳಿಗೆ ಹೊಂದಿಕೊಳ್ಳುತ್ತಾ ಬೇರೆಬೇರೆ ಆಯಾಮಗಳನ್ನು ಸೃಷ್ಟಿಸುತ್ತದೆ. ಇದೆಲ್ಲಕ್ಕೂ ಇರುವ ಮುಖ್ಯಕಾರಣ ಅದು ಜೀವದ ಮೂಲಭೂತ ಅಗತ್ಯಗಳಲ್ಲಿ ಒಂದು. ಹಾಗಾಗಿ ಇದರ ಹಲವು ಮುಖದರ್ಶನವನ್ನು ಮಾಡುವುದು ಒಳಿತು. ಇಲ್ಲವೆಂದರೆ ಅರೆಬೆಂದ ಅನ್ನದಂತೆ ಅತೃಪ್ತಿಗೆ ಕಾರಣವಾಗಿಬಿಡುತ್ತದೆ. ಹಾಗಾಗಿ ಹಂತಹಂತವಾಗಿ ಅಡುಗೆಯ ಕ್ಷೇತ್ರಕಾರ್ಯವು ‘ಬರೀ ಅಡುಗೆ’ ಎಂಬ ಉದ್ಗಾರಕ್ಕೆ ಸೀಮಿತವಾಗಿಲ್ಲ, ಅದು ಆನಂದ, ಅನುಭೂತಿ, ಅಧ್ಯಾತ್ಮ ಈ ಎಲ್ಲ ಗಡಿಗಳನ್ನು ದಾಟಿಕೊಳ್ಳುತ್ತ ನಮಗೆ ಹೊಸ ತರಹದ ಸಾಮಾಜಿಕ ಮತ್ತು ಕೌಟುಂಬಿಕ ಸ್ವಾಸ್ಥ್ಯ ಕಾಪಾಡುವ ಪರಿಕರ ಆಗಬಹುದು ಎಂದೆನಿಸುತ್ತದೆ. ಇಂತಹ ಪರಿಕರವನ್ನು ನಮ್ಮ ಪ್ರಾಚೀನರು ಹೇಗೆ ಭಾವಿಸಿದ್ದರು ಮತ್ತು ಬಳಸಿದ್ದರು ಎಂಬುದನ್ನು ಹುಡುಕ ಹೊರಟರೆ ನಮಗೆ ಸಿಗುವ ಇಬ್ಬರು ಪಾಕತಜ್ಞರು ‘ನಳ ಮತ್ತು ಭೀಮಸೇನ’!

ಅಡುಗೆಯ ಉಪಖಂಡದಲ್ಲಿ ಒಂದು ‘ಶಾಸ್ತ್ರ’ ಅಂದರೆ ಅಧ್ಯಯನ ಮತ್ತು ಪ್ರಯೋಗಗಳಿಂದ ರೂಪಿತವಾದ ವಿಷಯವಾಗಿ ಪ್ರಾಚೀನ ಕಾಲದಿಂದಲೂ ಗುರುತಿಸಲ್ಪಟ್ಟಿದೆ.

  ‘ಪಾಕ ಶಾಸ್ತ್ರ’ ಅಥವಾ ‘ಸೂಪ ಶಾಸ್ತ್ರ’ ಎಂದು ಪ್ರಸಿದ್ಧಿಯಾಗಿರುವ ಅಡುಗೆಯು, ಮನೆಗಳಲ್ಲಿ ಹೆಣ್ಣು ಮಕ್ಕಳಿಗೂ, ಹೊರಗಿನ ಸಭೆ ಸಮಾರಂಭಗಳಿಗೆ ಗಂಡಸರಿಗೂ ಮೀಸಲಾಗಿ ಬಿಟ್ಟಿದೆ. ಈ ಶಾಸ್ತ್ರಗಳನ್ನು ಬರೆದವರು ಪಂಡಿತರು ಮತ್ತು ಚಕ್ರವರ್ತಿಗಳು ಎಂಬುದು ವಿಶೇಷ. ನಳ ಮತ್ತು ಭೀಮ ಎರಡೂ ಪಾತ್ರಗಳು ಮಹಾಭಾರತದ ಕಥನದಲ್ಲಿ ಕಂಡು ಬರುವಂತಹವು. ಹಾಗಿದ್ದರೆ ಕೃತಿಗಳನ್ನು ಬರೆದವರು ಅವರೇನಾ?! ಅಥವಾ ಯಾರವು ಎಂಬುದು ಯಾರಿಗೂ ತಿಳಿದಿಲ್ಲ. ಅವನ್ನು ಈ ಹೆಸರಿನವರೇ ಬರೆದಿರೋದು ಎಂಬ ನಂಬುಗೆಯಲ್ಲಿ ಅವು ತಲೆಮಾರಿನಿಂದ ತಲೆಮಾರಿಗೆ ದಾಟಿಬರ್ತಿವೆ. ಬಹುಶಃ ಕೃತಿ ಪ್ರಸಿದ್ಧಿಗಾಗಿಯೋ ಅಥವಾ ಅನಾಮಿಕರಾಗಿ ಉಳಿವ ಇಚ್ಛೆಯಿಂದಲೋ ಮಹಾಭಾರತದಲ್ಲಿ ಪ್ರಸಿದ್ಧವಾಗಿದ್ದ ಈ ಇಬ್ಬರನ್ನು ಹೆಸರಿಸಿ, ತಮ್ಮನ್ನು ತಾವು ಮರೆಮಾಚಿಕೊಂಡು ನಳ ಮತ್ತು ಭೀಮಸೇನರನ್ನು ವೈಭವೀಕರಿಸಿದ್ದಾರೆ. ಅವರೋ ಅಲ್ಲವೋ ಅನ್ನುವುದು ಇಲ್ಲಿ ಅನಗತ್ಯ ಚರ್ಚೆ.. ನಮ್ಮ ನೋಟವೇನಿದ್ದರೂ ಊಟದತ್ತ ಮಾತ್ರ.

ನಳನ ‘ಪಾಕದರ್ಪಣ’

ನಳ ಮಹಾರಾಜನು ನಿಷಧ ಬುಟ್ಟಕಟ್ಟಿನ ರಾಜನಾಗಿದ್ದನೆಂದೂ, ಆತ ವಿದರ್ಭ ದೇಶದ ರಾಜಕುಮಾರಿ ದಮಯಂತಿಯನ್ನು ಮದುವೆಯಾಗಿದ್ದನೆಂದು ಹಲವು ದಂತಕಥೆಗಳಿವೆ. ಆತ ಪ್ರಖ್ಯಾತ ಬಾಣಸಿಗನೆಂಬ ಅನ್ವರ್ಥನಾಮವಾಗಿ ಉಪಖಂಡದ ಲೋಕಾರೂಢಿಯ ಮಾತುಗಳಲ್ಲಿ ಸೇರಿಹೋಗಿದೆ. ಒಳ್ಳೆಯ ಅಡುಗೆ ಮಾಡುವವರನ್ನು ‘ನಳ ಮಹಾರಾಜ’ ಎಂದು ಹೊಗಳು ವುದು ಸರ್ವೇ ಸಾಮಾನ್ಯ. ಆದರೆ ಯಾರೊಬ್ಬರಿಗೂ ಆ ನಳ ಯಾವ ಅಡುಗೆ ಯಾವ ತರಹ ಮಾಡುತ್ತಿದ್ದ, ಯಾವ ರುಚಿಗಳಲ್ಲಿ ಪ್ರಾವೀಣ್ಯತೆ ಪಡೆದಿದ್ದ. ಆ ಬಗ್ಗೆ ದಮಯಂತಿ ಏನು ಹೇಳಿದ್ದರು.. ಆತನ ರಾಜಪರಿವಾರದ, ಆಸ್ಥಾನ ವಿದ್ವಾಂಸರ ಅಭಿಮತ ಏನು? ಆತನ ಪಾಕಪ್ರಯೋಗಗಳನ್ನು ಗ್ರಂಥಸ್ಥವಾಗಿಸಿದ್ದನೇ ಎಂಬ ಸಾಲು ಸಾಲು ಪ್ರಶ್ನೆಗಳು ಹುಟ್ಟುತ್ತವೆ. ಅವುಗಳಲ್ಲಿ ಕೆಲವು ವಿಚಾರ ಮಾತ್ರ ನನ್ನ ಅಧ್ಯಯನಕ್ಕೆ ಸಿಕ್ಕಿವೆ. ಅದರಲ್ಲಿ ಮುಖ್ಯವಾದುದು ಆತನದೇ ಎಂದು ನಂಬಲಾದ ‘ಪಾಕದರ್ಪಣ’ ಕೃತಿ.

ಆದರೆ ಇಲ್ಲಿ ಬಳಸಿರುವ ಸಸ್ಯಮೂಲಗಳು, ಸಂಬಾರ ಪದಾರ್ಥಗಳು ಇತ್ಯಾದಿಗಳನ್ನು ಗಮನಿಸಿ ಈ ಕೃತಿ 12ನೇ ಶತಮಾನಕ್ಕಿಂತ ಹಿಂದಿನದು ಆಗಿರಲಿಕ್ಕಿಲ್ಲವೆಂದು ಅಂದಾಜಿಸಲಾಗಿದೆ. ಮೂಲ ಸಂಸ್ಕೃತ ಭಾಷೆಯಲ್ಲಿರುವ ಇದನ್ನು ಇಂಗ್ಲಿಷ್, ಹಿಂದಿ ಭಾಷೆಗಳಿಗೆ ಅನುವಾದಿಸಲಾಗಿದೆ. ನನ್ನ ಓದಿನ ಮಿತಿಯಲ್ಲಿ ಇದು ಕನ್ನಡಕ್ಕೆ ಅನುವಾದಗೊಂಡಿಲ್ಲ.

‘ಪಾಕದರ್ಪಣ’ ಕೃತಿಯು ದಾರಿಹೋಕನಾದ ಬಹೂಕ (ನಳ) ಮತ್ತು ಅಯೋಧ್ಯೆಯ ರಾಜ ಋತುಪರ್ಣನ ನಡುವಿನ ನಡೆದ ಮಾತುಕಥೆಯ ರೂಪದಲ್ಲಿದೆ.

 ಒಟ್ಟು 11 ಅಧ್ಯಾಯಗಳ 750 ಸರ್ಗಗಳಲ್ಲಿ ವಿಂಗಡನೆಯಾಗಿದ್ದು, ಮೊದಲ ಅಧ್ಯಾಯವೇ 499 ಸರ್ಗಗಳಷ್ಟು ದೊಡ್ಡದಾಗಿದೆ. ಕೆಲವು ಅಧ್ಯಾಯಗಳಂತೂ ಹತ್ತು ಹದಿನೈದು ಸಾಲುಗಳಷ್ಟು ಸಣ್ಣದಾಗಿವೆ. ಇದರಲ್ಲಿ ಮಾಂಸಾಹಾರ ಮತ್ತು ಸಸ್ಯಾಹಾರದ ಹಲವಾರು ವಿಧಿವಿಧಾನಗಳನ್ನು, ಸಂಸ್ಕರಿಸುವ ಮತ್ತು ಬಹಳ ದಿನಗಳ ವರೆಗೆ ಕೆಡದಂತೆ ಕಾಪಿಡುವ ವಿಧಾನಗಳ ಚರ್ಚೆಯೂ ಇದೆ. ಇಲ್ಲಿ ಹದಿನಾರು ಬಗೆಯ ಅಡುಗೆ ಪದಾರ್ಥಗಳ ವಿಂಗಡನೆ ಇದೆ. ಓದನ (ಬೇಯಿಸಿದ ಅನ್ನ), ಸೂಪ (ಬೇಳೆಯ ತೋವ್ವೆ/ಸಾರು ಅಥವಾ ದ್ರವಸ್ವರೂಪ), ಸರ್ಪಿಸ್ (ತುಪ್ಪ), ವ್ಯಂಜಕ (ನಂಚಿಕೊಳುವ ತಿಂಡಿ), ಮಾಂಸ, ಶಾಕ (ತರಕಾರಿ), ಭಕ್ಷ್ಯ, ಪಾಯಸ, ರಸಾಯನ, ಪಾನ, ಯೂಸ, ವಿವಿಧಾನ್ನ, ಲೇಹ್ಯ, ಪಾನೀಯ, ಕ್ಷೀರ, ತಕ್ರ (ಮಜ್ಜಿಗೆ). ಹಾಗೆಯೆ ಈ ಅಧ್ಯಾಯವು ದ್ರವ್ಯ, ದೇಶ ಮತ್ತು ಕಾಲಗಳ ಜೊತೆಗೆ ಮಹಾಭೂತಗಳಾದ ಆಕಾಶ, ವಾಯು, ಅಗ್ನಿಗಳು ಸೇರಿ ರಸವನ್ನು ನಿರ್ಧರಿಸುತ್ತವೆ ಎಂದೂ ಹೇಳುತ್ತದೆ. ಅಂದರೆ ಸಿಗುವ ನೀರಿನ ರುಚಿ, ಗಾಳಿಯ ವಾತಾವರಣ, ಅಡುಗೆಗೆ ಬೇಕಿರುವ ಬೆಂಕಿ, ಅದರ ಪರಿಮಾಣ ಇವುಗಳಿಂದ ಅಡುಗೆಯ ‘ರಸ’ ಅವಲಂಬಿತವಾಗುತ್ತದೆ. ಹಾಗೆಯೆ ಆಹಾರದಲ್ಲಿ 63 ತರಹದ ರಸಗಳನ್ನು ನಳನು ಗುರುತಿಸುತ್ತಾನೆ. ಪ್ರಾಥಮಿಕವಾಗಿ ನಮಗೆ ತಿಳಿದಿರುವ 6 ರಸಗಳನ್ನು (ಷಡ್ರಸ- ಸಿಹಿ, ಹುಳಿ, ಉಪ್ಪು, ಖಾರ, ಒಗರು, ಕಹಿ) ಎರಡು ರಸ ಅಥವಾ ಮೂರು, ನಾಲ್ಕು, ಐದು ರಸಗಳನ್ನು ಪ್ರತ್ಯೇಕವಾಗಿ ಬೆರೆಸಿ ಅದರದೇ ರಸ ಗುರುತಿಸುವುದು. ಉದಾ: ಸಿಹಿ+ ಉಪ್ಪು= ಒಂಟೆ ಮಾಂಸದ ರುಚಿ, ಸಿಹಿ+ಹುಳಿ+ಉಪ್ಪು = ಆನೆ ಮಾಂಸದ ರುಚಿ ಹೀಗೆ ಬೇರೆ ತರಹನಾದ 63 ರಸ/ರುಚಿಗಳನ್ನು ಗುರುತಿಸಿದ್ದಾನೆ.

ಇದರಲ್ಲಿ ಎಂಟು ಬಗೆಯ ದೋಷಗಳನ್ನು ಕೂಡ ಹೇಳುತ್ತಾನೆ.. ಉದಾ: ಅಗತ್ಯಕ್ಕಿಂತ ಹೆಚ್ಚು ಬೇಯಿಸುವುದು, ತಳ ಹಿಡಿಸುವುದು ಇತ್ಯಾದಿ

ಹಾಗೆಯೇ ತರಕಾರಿಗಳು, ಹೂಗಳು, ಹಾಲು-ತುಪ್ಪ, ಕಾಳು ಮುಂತಾದವುಗಳಿಂದ ಮಾಡುವ ಅಡುಗೆಗಳ ವಿವರಣೆ ಕೂಡ ಸಿಗತ್ತೆ.

ಇನ್ನು ಎರಡನೇ ಅಧ್ಯಾಯವು ವರ್ಷದ ಆರು ಋತುಗಳಲ್ಲಿ ಯಾವ ಯಾವ ತರಹದ ಅಡುಗೆಗಳನ್ನು ಮಾಡಬೇಕು. ಆರೋಗ್ಯಕ್ಕೆ ಯಾವುದು ಒಳ್ಳೆಯದು, ದೇಹದ ತಾಪಮಾನಕ್ಕೆ ಯಾವುದು ಹೊಂದಿಕೊಳ್ಳುತ್ತದೆ ಎಂಬ ವಿವರಣೆಗಳಿಂದ ಕೂಡಿದೆ. ಆರು ಋತುಗಳಿಗೂ ಬೇರೆ ಬೇರೆ ಒಂದಷ್ಟು ಪ್ರಾಣಿಗಳ ಮಾಂಸವನ್ನು ನಳನು ಶಿಫಾರಸು ಮಾಡ್ತಾನೆ. ಅಂತೆಯೇ ಬಿರಿಯಾನಿಯ ಹಲವು ವಿಧಗಳನ್ನು ವಿವರಿಸುತ್ತಾನೆ. ಲಾವಕ ಮಾಂಸೋದನ (ಗುಬ್ಬಿಯ ಬಿರಿಯಾನಿ), ಕುಕ್ಕುಟ ಮಾಂಸೋದನ (ಕೋಳಿ ಬಿರಿಯಾನಿ)ಗಳನ್ನು ಮಾಡುವ ವಿವರಣೆಗಳು ಇವೆ. ಹಾಗೆಯೇ ಆಹಾರ ಮತ್ತು ಮಾಂಸವನ್ನು ಸಂಸ್ಕರಿಸಿಡುವ ಸಲುವಾಗಿ ‘ಗರ’(ವಿಷ)ವನ್ನು ಬಳಸಲಾಗುತ್ತದೆ. ವಿಷವೆಂದರೆ ಇದು ನೇರ ವಿಷವಾಗಿರುವುದಿಲ್ಲ. ಇವುಗಳ ಜೊತೆಗೆ ಕೆಲವು ನಿರ್ದಿಷ್ಟ ಪದಾರ್ಥಗಳು ಸೇರಿದರೆ ಮಾತ್ರ ಅವು ವಿಷವಾಗಿ ವರ್ತಿಸುತ್ತವೆ. ಇಲ್ಲವಾದರೆ ಅವೇ ಸಂರಕ್ಷಕವಾಗಿರುತ್ತವೆ. ಉದಾ; ಉಪ್ಪು, ಆಮ್ಲ ಪದಾರ್ಥ, ಕರ್ಪೂರ, ಕೆಲವು ತರದ ಎಣ್ಣೆಗಳು ಇತ್ಯಾದಿಗಳನ್ನು ಬಳಸುವುದು.

ಮುಂದಿನ ಅಧ್ಯಾಯಗಳಲ್ಲಿ ಹಲವು ತರದ ಪಾಯಸಗಳು, ಹಣ್ಣಿನ ರಸಾಯನಗಳು, ಪಾನೀಯಗಳು, ಕಡಿದ ಮಜ್ಜಿಗೆಯ ಜೊತೆಗೆ ಹಲವು ಪದಾರ್ಥಗಳನ್ನು ಸೇರಿಸಿ ಮಾಡುವ ಪಾನಕಗಳು ಬಗ್ಗೆ ಬಹಳಷ್ಟು ವಿವರಣೆಗಳು ಈ ಕೃತಿಯಲ್ಲಿ ಸಿಗುತ್ತವೆ.

ಭೀಮಸೇನ ’ಸೂಪಶಾಸ್ತ್ರ’

ಈ ಕೃತಿಯ ಕುರಿತು ಕೂಡ ಬರಿಯ ಊಹಾಪೋಹಗಳೇ ಹೆಚ್ಚು ಇವೆ. ಇದನ್ನು ಬರೆದವನು ಮಹಾಭಾರತದ ಭೀಮಸೇನನೇ ಅಥವಾ ಬೇರೆಯ ವ್ಯಕ್ತಿಯೇ ಎಂಬುದು ತಿಳಿಯುವುದಿಲ್ಲ. ಆದಾಗ್ಯೂ ಸಂಸ್ಕೃತ ಭಾಷೆಯಲ್ಲಿರುವ ಈ ಕೃತಿಯ ಭಾಷಾ ಬಳಕೆ ಆಧಾರದ ಮೇಲೆ ಇದು ಕೂಡ ನಳನ ‘ಪಾಕ ದರ್ಪಣ’ದಂತೆಯೇ ಹಳೆಯ ಕೃತಿ ಎನ್ನುವುದು ಅಂಬೋಣ. ಥೇಟ್ ಇವನೂ ಕೂಡ ಕ್ಷತ್ರಿಯ. ಮಾಂಸ ಮತ್ತು ಸಸ್ಯಾಹಾರ ಎರಡನ್ನೂ ವೈವಿಧ್ಯಮಯವಾಗಿ ಬಳಸುವ ಇವರ ಪದಾರ್ಥ ಸ್ವಾತಂತ್ರ್ಯ ನಮ್ಮ ಹೊಟ್ಟೆಗೆ ಚೂರು ಕಿಚ್ಚು ತರಿಸುವುದಂತು ಸುಳ್ಳಲ್ಲ.

 ಈ ಕೃತಿಯನ್ನು ಮದ್ರಾಸ್ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಕನ್ನಡ ಪಂಡಿತರಾಗಿದ್ದ ವಿದ್ವಾನ್ ಯು. ಸೀತಾರಾಮಾಚಾರ್ಯ ಅವರು ಸಂಪಾದಿಸಿ, ಕನ್ನಡದಲ್ಲಿ ಅರ್ಥ-ವಿವರಣೆ ಕೂಡ ನೀಡಿದ್ದಾರೆ. ಕೃತಿಯು ಸದ್ಯಕ್ಕೆ ಅಲಭ್ಯ. ನಾನು ಕೂಡ ಬಹುವಾಗಿ ಹುಡುಕಿ ಸಿಗಲಿಲ್ಲ.. ಹಾಗಾಗಿ ಹಿರಿಯರಿಂದ ಕೇಳಿದ ಸಂಗತಿಗಳನ್ನು ಮಾತ್ರ ಇಲ್ಲಿ ಸಂಕ್ಷಿಪ್ತವಾಗಿ ಉಲ್ಲೇಖಿಸಿದ್ದೇನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News