ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತೆಗಳ ಬಗ್ಗೆ ಕಸಾಪ ಅಧ್ಯಕ್ಷ ಮನು ಬಳಿಗಾರ್ ಪ್ರತಿಕ್ರಿಯೆ

Update: 2020-01-22 18:17 GMT

ಬೆಂಗಳೂರು, ಜ.22 : ಕಲ್ಪತರ ನಾಡು ಕಲಬುರ್ಗಿಯಲ್ಲಿ ಫೆ.5ರಿಂದ 7ರ ವರೆಗೆ ಮೂರು ದಿನಗಳ ಕಾಲ ನಡೆಯಲಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತೆಗಳು ಭರದಿಂದ ಸಾಗಿದ್ದು, ಲಕ್ಷಾಂತರ ಜನರು ಪಾಲ್ಗೊಳ್ಳಲಿದ್ದಾರೆ ಎಂದು ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ್ ಹೇಳಿದ್ದಾರೆ.

ಬುಧವಾರ ನಗರದ ಕಸಾಪದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮೇಳನಕ್ಕೆ ಸುಮಾರು 14 ಕೋಟಿ ರೂ. ಗಳಷ್ಟು ಅಂದಾಜು ವೆಚ್ಚವನ್ನು ಸರಕಾರಕ್ಕೆ ಜಿಲ್ಲಾಡಳಿತ ಸಲ್ಲಿಸಿದ್ದು, ಈಗಾಗಲೇ ಒಟ್ಟು 10 ಕೋಟಿ ರೂ.ಗಳನ್ನು ಸರಕಾರ ಮಂಜೂರು ಮಾಡಿದೆ. ಹಲವು ದಾನಿಗಳು ಸಮ್ಮೇಳನಕ್ಕೆ ದೇಣಿಗೆ ನೀಡಲು ಮುಂದೆ ಬಂದಿದ್ದಾರೆ. ನಂತರ ಉಳಿಕೆ ಮೊತ್ತದ ಬಿಡುಗಡೆಗೆ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಸಮ್ಮೇಳನಕ್ಕೆ ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ಸುಮಾರು 35 ಎಕರೆ ಪ್ರದೇಶದಲ್ಲಿ ವಿಶಾಲ ವೇದಿಕೆ ನಿರ್ಮಾಣ ಮಾಡಲಾಗುತ್ತಿದೆ. ಪ್ರಧಾನ ವೇದಿಕೆಯಲ್ಲಿ 10 ಗೋಷ್ಠಿಗಳು ಹಾಗೂ ಸಮಾನಾಂತರ ವೇದಿಕೆಗಳಲ್ಲಿ 12 ಗೋಷ್ಠಿಗಳು ಸೇರಿ ಒಟ್ಟು 22 ಗೋಷ್ಠಿಗಳನ್ನು ಆಯೋಜಿಸಲಾಗಿದೆ. ಮೂರು ವೇದಿಕೆಗಳಲ್ಲೂ ಸಹ ಕವಿಗೋಷ್ಠಿಗಳು ಜರುಗಲಿದ್ದು, ಕಲಬುರಗಿ ಜಿಲ್ಲೆಯ 27 ಮಂದಿ ಕವಿಗಳು ಸೇರಿದಂತೆ, ಒಟ್ಟು ನೂರು ಮಂದಿ ಕವಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಯಾವ ಯಾವ ವಿಷಯದ ಗೋಷ್ಠಿಗಳಿವೆ:

ಪ್ರಧಾನ ವೇದಿಕೆಯಲ್ಲಿ ಕಲ್ಯಾಣ ಕರ್ನಾಟಕ: ಅಂದು-ಇಂದು-ಮುಂದು, ಸಮಕಾಲೀನ ಸಾಹಿತ್ಯ: ಚಹರೆ ಮತ್ತು ಸವಾಲುಗಳು, ಸೀ ಲೋಕ-ತಲ್ಲಣಗಳು, ದಲಿತ ಬಂಡಾಯ; ಸ್ಥಿತ್ಯಂತರದ ನೆಲೆಗಳು, ವಚನ-ಕೀರ್ತನ ಸಾಹಿತ್ಯ, ಕನ್ನಡ ಮಾಧ್ಯಮ ಮತ್ತು ಶಿಕ್ಷಣ, ಚಲನಚಿತ್ರ: ಕನ್ನಡ ಸಾಹಿತ್ಯ, ಮಾಧ್ಯಮ: ಸವಾಲುಗಳು ಎಂಬ ಗೋಷ್ಠಿಗಳು ನಡೆಯಲಿವೆ. ಫೆ.6ರಂದು ಬೆಳಗ್ಗೆ 11.30ಕ್ಕೆ ಸಾಹಿತಿ ಹಾಗೂ ಸಂಶೋಧಕ ಡಾ.ಷ.ಶೆಟ್ಟರ್ ಅವರಿಂದ ‘ಕನ್ನಡ ಉಳಿಸಿ ಬೆಳೆಸುವ ಬಗೆ’ ಎಂಬ ವಿಷಯ ಕುರಿತು ಸುಮಾರು 45 ನಿಮಿಷಗಳ ಕಾಲ ವಿಶೇಷ ಉಪನ್ಯಾಸ ಏರ್ಪಡಿಸಲಾಗಿದೆ.

ಸಮಾನಾಂತರ ವೇದಿಕೆ-1ರಲ್ಲಿ ಕನ್ನಡ ಭಾಷೆ: ಹೊಸ ತಂತ್ರಜ್ಞಾನ, ಪುಸ್ತಕ ಲೋಕ, ಕಲಬುರಗಿ ಜಿಲ್ಲಾ ದರ್ಶನ, ಕನ್ನಡ ನಾಡು-ನುಡಿ ಮತ್ತು ಯುವ ಕರ್ನಾಟಕ, ಕೃಷಿ ಮತ್ತು ನೀರಾವರಿ, ಕನ್ನಡದಲ್ಲಿ ವಿಜ್ಞಾನ ಸಾಹಿತ್ಯ ಗೋಷ್ಟಿಗಳು ಜರುಗಲಿವೆ. ಸಮಾನಾಂತರ ವೇದಿಕೆ-2ರಲ್ಲಿ ಜಾನಪದ ಜಗತ್ತು, ಮಕ್ಕಳ ಸಾಹಿತ್ಯ ಗೋಷ್ಠಿ, ತತ್ವಪದ-ಸೂಫಿ-ಬೌದ್ಧ ಸಾಹಿತ್ಯ, ಕಲಾ ಸಂಗಮ ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.

500ಕ್ಕೂ ಹೆಚ್ಚು ಮಳಿಗೆಗಳು: ಪುಸ್ತಕಗಳ ಮಾರಾಟಕ್ಕೆ ಒಟ್ಟು 500 ಹಾಗೂ 300 ವಾಣಿಜ್ಯ ಮಳಿಗೆಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾಗಿದೆ. ಇದರಲ್ಲಿ 380 ಪುಸ್ತಕ ಮಳಿಗೆಗಳು ಹಾಗೂ 150 ವಾಣಿಜ್ಯ ಮಳಿಗೆಗಳು ನೋಂದಣಿಗೊಂಡಿವೆ. ಹಲವು ಜಿಲ್ಲೆಗಳಿಂದ ಈಗಾಗಲೇ 10 ಸಾವಿರಕ್ಕೂ ಅಧಿಕ ಜನರು ಪ್ರತಿನಿಧಿಗಳಾಗಿ ನೋಂದಣಿ ಮಾಡಿಕೊಂಡಿದ್ದಾರೆ. ಅಲ್ಲದೆ, ಆಸ್ಟ್ರೇಲಿಯಾ, ಕತಾರ್ ಸೇರಿ ವಿವಿಧ ದೇಶಗಳಿಂದಲೂ ಆಗಮಿಸಲಿದ್ದಾರೆ.

ಊಟದ ವ್ಯವಸ್ಥೆ: ಸಮ್ಮೇಳನಕ್ಕೆ ಪ್ರತಿದಿನ ಸುಮಾರು ಒಂದೂವರೆ ಲಕ್ಷ ಜನರು ಆಗಮಿಸುವ ನಿರೀಕ್ಷೆಯಿದೆ. ಹೀಗಾಗಿ, ಒಟ್ಟು 5 ಲಕ್ಷ ಮಂದಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಹಾಗೂ ಕರಾವಳಿ ಭಾಗದ ಖಾದ್ಯಗಳನ್ನು ಉಣ ಬಡಿಸಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News