ಕೆಲಸವಿಲ್ಲದೆ 33 ಅಧ್ಯಾಪಕರಿಗೆ ವೇತನ ಪಾವತಿ: ಪರಾಮರ್ಶೆಯಲ್ಲಿ ಬಯಲಿಗೆ

Update: 2020-01-22 18:36 GMT

ಬೆಂಗಳೂರು, ಜ.22: ರಾಜಧಾನಿ ಬೆಂಗಳೂರು ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ 33 ಅಧ್ಯಾಪಕರು ಯಾವುದೇ ಕೆಲಸ ಮಾಡದೆ ಸಂಬಳ ಪಡೆಯುತ್ತಿರುವುದು ಬೆಳಕಿಗೆ ಬಂದಿದೆ. ಅಧ್ಯಾಪಕರ ಕೊರತೆಯಿಂದಾಗಿ ಸರಕಾರಿ ಕಾಲೇಜುಗಳಲ್ಲಿ ಶಿಕ್ಷಣದ ಗುಣಮಟ್ಟ ಕುಸಿಯುತ್ತಿರುವ ಪ್ರಸ್ತುತ ಸಂದರ್ಭದಲ್ಲಿ, 39 ಅಧ್ಯಾಪಕರು ನಿಗದಿತ ಕಾರ್ಯಭಾರವಿಲ್ಲದೆ ಕಾಲಹರಣ ಮಾಡುತ್ತಿರುವುದು ಇತ್ತಿಚೆಗೆ ಕಾಲೇಜು ಶಿಕ್ಷಣ ಇಲಾಖೆ ನಡೆಸಿದ ಕಾರ್ಯಭಾರ ಪರಾಮರ್ಶೆ ವೇಳೆ ಕಂಡು ಬಂದಿದೆ. ಇದರ ನಡುವೆ, ಒಟ್ಟು 14 ಮಂದಿ ಅತಿಥಿ ಉಪನ್ಯಾಸಕರು ಹೆಚ್ಚುವರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆಂದು ತಿಳಿದುಬಂದಿದೆ.

ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಆರು ಸಾವಿರಕ್ಕೂ ಅಧಿಕ ಅಧ್ಯಾಪಕರ ಹುದ್ದೆಗಳು ಖಾಲಿಯಿವೆ. ಬೋಧನೆಗೆ ಅತಿಥಿ ಉಪನ್ಯಾಸಕರೇ ಆಧಾರವಾಗಿದ್ದಾರೆ. ಆದರೆ, 2019ರಲ್ಲಿ ಎರಡು ಬಾರಿ ನೂರಾರು ಅಧ್ಯಾಪಕರು ಉತ್ತರ ಕರ್ನಾಟಕದ ಜಿಲ್ಲೆಗಳು ಹಾಗೂ ಕರಾವಳಿ ಜಿಲ್ಲೆಗಳಿಂದ ಬೆಂಗಳೂರು, ಮೈಸೂರು ಸೇರಿ ದಕ್ಷಿಣ ಜಿಲ್ಲೆಗಳತ್ತ ನಿಯೋಜನೆ ಮೇಲೆ ಬಂದಿದ್ದಾರೆ. ಅದರಲ್ಲಿ ಹೆಚ್ಚು ಮಂದಿ ಬೆಂಗಳೂರಿನ ಸುತ್ತಮುತ್ತಲ ಕಾಲೇಜುಗಳಲ್ಲಿಯೇ ಇದ್ದಾರೆ. ಯುಜಿಸಿ ನಿಯಮಗಳ ಅನ್ವಯ ಒಬ್ಬ ಅಧ್ಯಾಪಕ ವಾರಕ್ಕೆ 16ರಿಂದ 18 ಗಂಟೆಗಳ ಕಾಲ ಕೋರ್ ವಿಷಯಗಳಿಗೆ ಸಂಬಂಧಿಸಿದಂತೆ ಬೋಧನೆ ಮಾಡಬೇಕು. ವಿಜ್ಞಾನ ವಿಷಯಗಳ (ಪ್ರಾಯೋಗಿಕ ವಿಷಯ) ಅಧ್ಯಾಪಕರು ವಾರಕ್ಕೆ 20 ಗಂಟೆಗಳ ಕಾಲ ಕಾರ್ಯ ನಿರ್ವಹಿಸಬೇಕಿದೆ.

ಆದರೆ, ನಿಯೋಜನೆ ಮೇಲೆ ಬಂದಿರುವ ಬಹುತೇಕ ಅಧ್ಯಾಪಕರು ಯಾವುದೇ ಕಾರ್ಯಭಾರವಿಲ್ಲದೇ ಇದ್ದರೂ ಕೇವಲ ಪರಿಸರ ವಿಜ್ಞಾನ, ಸಂವಿಧಾನ ಸೇರಿದಂತೆ ಇತರೆ ನಾನ್ ಕೋರ್ ವಿಷಯಗಳನ್ನು ಬೋಧನೆ ಮಾಡುತ್ತಾ ಕಾಲಹರಣ ಮಾಡುತ್ತಿರುವುದು ಇಲಾಖೆಯ ಆಯುಕ್ತರ ಗಮನಕ್ಕೆ ಬಂದಿತ್ತು. ಹೀಗಾಗಿ, ಕಾಲೇಜುಗಳಲ್ಲಿ ಅಧ್ಯಾಪಕರು ಹೊಂದಿರುವ ಕಾರ್ಯಭಾರದ ಬಗ್ಗೆ ಪರಾಮರ್ಶೆ ನಡೆಸುವಂತೆ ಅಧಿಕಾರಿಗಳು ಸೂಚಿಸಿದ್ದರು.

ಬೆಂಗಳೂರಿನಲ್ಲಿ ಒಟ್ಟು 21 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಿದ್ದು, ಈ ಪೈಕಿ ಯಲಹಂಕದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 5 ಅಧ್ಯಾಪಕರು ಕೆಲಸವಿಲ್ಲದೆ ಕಾಲ ಕಳೆಯುತ್ತಿದ್ದು, 5 ಮಂದಿ ಕಡಿಮೆ ಕಾರ್ಯಭಾರ ಹೊಂದಿದ್ದಾರೆ. ಆದರೂ ಈ ಕಾಲೇಜಿನಲ್ಲಿ ಮೂವರು ಅತಿಥಿ ಉಪನ್ಯಾಸಕರು ಹೆಚ್ಚುವರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆರ್.ಸಿ. ಕಾಲೇಜಿನಲ್ಲಿ 7 ಮಂದಿ ಅಧ್ಯಾಪಕರು, ವಿಜಯನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 3, ವಿಎಚ್‌ಡಿ, ಹೋಮ್‌ಸೈನ್ಸ್ ಕಾಲೇಜಿನಲ್ಲಿ 3, ಕೆ.ಆರ್.ಪುರಂನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 3 ಮಂದಿ ಯಾವುದೇ ಕೆಲಸವಿಲ್ಲದೆ ವೇತನ ಪಡೆಯುತ್ತಿದ್ದಾರೆ ಎಂದು ಮಾಹಿತಿಯಿಂದ ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News