ಮಾಜಿ ಸಿಜೆಐ ಗೊಗೊಯಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದ ಮಹಿಳಾ ಉದ್ಯೋಗಿಯ ಮರುನೇಮಕ

Update: 2020-01-23 11:26 GMT

ಹೊಸದಿಲ್ಲಿ: ಮಾಜಿ ಸಿಜೆಐ ರಂಜನ್ ಗೊಗೊಯಿ ಅವರ ಅಧಿಕಾರಾವಧಿ ವೇಳೆ ಅವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದ ಮಹಿಳಾ ಉದ್ಯೋಗಿಯನ್ನು ಸುಪ್ರೀಂ ಕೋರ್ಟ್  ಮರುನೇಮಕಗೊಳಿಸಿದೆ. ಆಕೆ ಗೊಗೊಯಿ ವಿರುದ್ಧ ಮಾಡಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಸುಪ್ರೀಂ ಕೋರ್ಟಿನ ತ್ರಿಸದಸ್ಯ ಪೀಠ ತೀರ್ಮಾನಿಸಿತ್ತೆಂಬುದನ್ನು ಇಲ್ಲಿ ಸ್ಮರಿಸಬಹುದು.

ಆಗ ನ್ಯಾಯಮೂರ್ತಿಯಾಗಿದ್ದ ಈಗಿನ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ನೇತೃತ್ವದ ಪೀಠವು ತಮಗೆ ಕಳೆದ ಮೇ ತಿಂಗಳಲ್ಲಿ ಕ್ಲೀನ್ ಚಿಟ್ ನೀಡಿದ ನಂತರ ತನ್ನ ಮೇಲೆ ಆರೋಪ ಹೊರಿಸಿದ್ದ ಮಹಿಳೆ ಕಳೆದ ಅಕ್ಟೋಬರ್ ತಿಂಗಳಲ್ಲಿ  ತನ್ನನ್ನು ಹಿಂದಿನ ಉದ್ಯೋಗಕ್ಕೆ ಮರುನೇಮಕಗೊಳಿಸಬೇಕೆಂದು ಸಲ್ಲಿಸಿದ್ದ ಅಪೀಲನ್ನು ನ್ಯಾಯಮೂರ್ತಿ ಗೊಗೊಯಿ ಪರಿಗಣಿಸಿದ್ದರು.

ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ದಿಲ್ಲಿಯ ನ್ಯಾಯಾಲಯವೊಂದು ಆಕೆಯ ವಿರುದ್ಧ  ವಂಚನೆಯ ಹಾಗೂ ಕ್ರಿಮಿನಲ್ ಬೆದರಿಕೆಯೊಡ್ಡಿದ ಪ್ರಕರಣದ ವಿಚಾರಣೆ ಅಂತ್ಯಗೊಳಿಸಿತ್ತು. ದೂರುದಾರ ಹರ್ಯಾಣದ ನಿವಾಸಿ ನವೀನ್ ಕುಮಾರ್ ಅವರು ತಾವು ಪ್ರಕರಣ ಮುಂದುವರಿಸಲು ಇಚ್ಛಿಸುವುದಿಲ್ಲ ಎಂದು ಹೇಳಿದ ನಂತರ ಈ ಕ್ರಮ ಕೈಗೊಳ್ಳಲಾಗಿತ್ತು.

ತನಗೆ ಸುಪ್ರೀಂ ಕೋರ್ಟಿನಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ ಆಕೆ ರೂ. 50,000 ವಂಚಿಸಿದ್ದರೆಂದು ನವೀನ್ ಈ ಹಿಂದೆ ಆರೋಪಿಸಿದ್ದರು. ಆರೋಪಿ ಮಹಿಳೆಯನ್ನು ಕಳೆದ ವರ್ಷದ ಮಾರ್ಚ್ 10ರಲ್ಲಿ ಬಂಧಿಸಲಾಗಿದ್ದರೆ ಎರಡು ದಿನಗಳಲ್ಲಿ ಆಕೆಗೆ ಜಾಮೀನು ದೊರಕಿತ್ತು.

ಎಪ್ರಿಲ್ ತಿಂಗಳಲ್ಲಿ ಆಕೆ  ಸುಪ್ರೀಂ ಕೋರ್ಟಿನ 22 ನ್ಯಾಯಾಧೀಶರ ನಿವಾಸಗಳಿಗೆ ಅಫಿಡವಿಟ್ ಕಳುಹಿಸಿ ಗೊಗೊಯಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದಲ್ಲದೆ ತನ್ನನ್ನು ವರ್ಗಾವಣೆಗೊಳಿಸಿ ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಆರೋಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News