ವಿವಿಧ ಬೇಡಿಕೆಗಳ ಈಡೇರಿಕೆಗೆ ಪಟ್ಟು: 'ಬೆಂಗಳೂರು ಚಲೋ' ಆರಂಭಿಸಿದ ಅಂಗನವಾಡಿ ನೌಕರರು

Update: 2020-01-23 12:33 GMT

ಬೆಂಗಳೂರು, ಜ.23: ಕನಿಷ್ಠ ವೇತನ ಸೇರಿ ವಿವಿಧ ಬೇಡಿಕೆಗಳನ್ನು ರಾಜ್ಯ ಸರಕಾರ ಈಡೇರಿಸಬೇಕೆಂದು ಒತ್ತಾಯಿಸಿ ಸಾವಿರಾರು ಅಂಗನವಾಡಿ ನೌಕರರು, ಇಂದಿನಿಂದ ಬೆಂಗಳೂರು ಚಲೋ ಬೃಹತ್ ಧರಣಿ ಆರಂಭಿಸಿದ್ದಾರೆ.

ಗುರುವಾರ ಕರ್ನಾಟಕ ರಾಜ್ಯಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್(ಎಐಟಿಯುಸಿ) ನೇತೃತ್ವದಲ್ಲಿ ಇಲ್ಲಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್ ಮೈದಾನದವರೆಗೂ ಬೃಹತ್ ಕಾಲ್ನಡಿಗೆ ಜಾಥಾ ನಡೆಸಿದ ಅಂಗನವಾಡಿ ನೌಕರರು, ಸರಕಾರ ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು.

ರಾಜ್ಯದಲ್ಲಿ 1.30 ಲಕ್ಷ ಅಂಗನವಾಡಿ ನೌಕರರು ಇದ್ದಾರೆ. ಮೂರು ತಿಂಗಳಿನಿಂದ ವೇತನ, ಮೊಟ್ಟೆ ಪೂರೈಕೆಯ ಹಣ ನೀಡಿಲ್ಲ. ಇದರಿಂದ ನೌಕರರ ಜೀವನ ನಿರ್ವಹಣೆ ಕಷ್ಟವಾಗಿದೆ. 45 ವರ್ಷಗಳಿಂದ ಗೌರವಧನದ ಆಧಾರದಲ್ಲಿ ದುಡಿಯುತ್ತಿದ್ದು, ಖಾಯಂ ಕಾರ್ಮಿಕರೆಂದು ಪರಿಗಣಿಸಬೇಕು ಎಂದು ಪ್ರತಿಭಟನಾನಿರತರು ಒತ್ತಾಯಿಸಿದರು.

ಧರಣಿಯನ್ನುದ್ದೇಶಿಸಿ ಮಾತನಾಡಿದ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಎಂ. ಜಯಮ್ಮ, ಅಂಗನವಾಡಿಗಳಿಗೆ ಮಾರಕವಾಗಿರುವ ನೂತನ ಶಿಕ್ಷಣ ನೀತಿಯನ್ನು ಕೇಂದ್ರ ಸರಕಾರ ಕೈಬಿಡಬೇಕು. ಸೇವಾ ಹಿರಿತನವನ್ನು ಪರಿಗಣಿಸುವ ಮೂಲಕ ವರ್ಷಕ್ಕೆ 200 ಭತ್ಯೆ ಹೆಚ್ಚಳ, ವೈದ್ಯಕೀಯ ಸೌಲಭ್ಯ, ರಜೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.

ನಿವೃತ್ತಿಯಾದವರಿಗೆ ಕನಿಷ್ಠ 5 ಸಾವಿರ ಪಿಂಚಣಿ ನೀಡಬೇಕು. ಸೇವಾ ಹಿರಿತನದ ಮೇಲೆ ಗೌರವಧನ ಹೆಚ್ಚಳ ಮಾಡಬೇಕು. ತೀವ್ರ ಕಾಯಿಲೆ ಬಿದ್ದಾಗ ಉಚಿತ ಚಿಕಿತ್ಸೆ, ವೇತನ ಸಹಿತ ರಜೆ ನೀಡಬೇಕು. 21 ಸಾವಿರ ಕನಿಷ್ಠ ವೇತನ ನಿಗದಿಪಡಿಸಬೇಕು. ಇಎಸ್‌ಐ, ಭವಿಷ್ಯ ನಿಧಿ, ಗ್ರ್ಯಾಚುಟಿ ನೀಡಬೇಕೆಂದು ಒತ್ತಾಯಿಸಿದರು.

ವೇತನ ನಿಗದಿಪಡಿಸಿ ಸೇವಾ ಜೇಷ್ಠತೆಯ ಆಧಾರದಲ್ಲಿ ಕನಿಷ್ಠ ವೇತನ ಜಾರಿ ಮಾಡಬೇಕು. 45 ಎಲ್‌ಐಸಿಯ ಶಿಫಾರಸ್ಸಿನ ಪ್ರಕಾರ 18 ಸಾವಿರ ಕನಿಷ್ಠ ವೇತನ ಜಾರಿಗೊಳಿಸಿ. ದಿನಕ್ಕೆ 6:30 ಗಂಟೆ ಕೆಲಸ ಮಾತೃಪೂರ್ಣ ಮುಂತಾದ ಕೆಲಸ ಹೊರೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮತ್ತೊಂಡೆಡೆ ಬೆಲೆ ಏರಿಕೆ, ಮಾತ್ರವಲ್ಲದೆ ಹರಿಯಾಣ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಗೋವಾ, ಪಾಂಡಿಚೇರಿ, ಕೇರಳ ಮುಂತಾದ ರಾಜ್ಯಗಳಲ್ಲಿ 11 ರಿಂದ 12 ಸಾವಿರ ವೇತನ ಹೆಚ್ಚಳವಾಗಿದೆ. ಆದ್ದರಿಂದ ರಾಜ್ಯದಲ್ಲಿಯೂ ಕೂಡಾ ಗೌರವಧನ ಹೆಚ್ಚಳವಾಗಬೇಕು ಮತ್ತು ಸೇವಾ ಜೇಷ್ಠತೆಯ ಆಧಾರದಲ್ಲಿ ವೇತನವನ್ನು ನಿಗದಿಪಡಿಸಬೇಕೆಂದು ಧರಣಿ ನಿರತ ನೌಕರರು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News