ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ: ಶೀಘ್ರದಲ್ಲೆ ಸಿಎಂಗೆ ಸತ್ಯಶೋಧನಾ ಸಮಿತಿ ವರದಿ- ಐವಾನ್ ಡಿಸೋಜಾ

Update: 2020-01-23 15:17 GMT

ಬೆಂಗಳೂರು, ಜ.23: ಕನಕಪುರ ತಾಲೂಕಿನ ಹಾರೋಬೆಲೆಯಲ್ಲಿರುವ ಕಪಾಲ ಬೆಟ್ಟದಲ್ಲಿ ಏಸುಕ್ರಿಸ್ತನ ಪ್ರತಿಮೆ ನಿರ್ಮಿಸುವ ವಿಚಾರದಲ್ಲಿ ಉಂಟಾಗಿರುವ ಗೊಂದಲ ಕುರಿತು ವಾಸ್ತವ ಸ್ಥಿತಿಯನ್ನು ತಿಳಿಸಲು ರಚಿಸಲಾಗಿದ್ದ ಕ್ರೈಸ್ತ ಸಮುದಾಯದ ಮುಖಂಡರ ಸತ್ಯ ಶೋಧನಾ ಸಮಿತಿಯು ಈ ಸಂಬಂಧ ವರದಿ ಸಿದ್ಧಪಡಿಸಿದೆ ಎಂದು ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜಾ ತಿಳಿಸಿದರು.

ಗುರುವಾರ ವಿಧಾನಸೌಧದಲ್ಲಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸತ್ಯಶೋಧನಾ ಸಮಿತಿಯ ವರದಿಯನ್ನು ಶೀಘ್ರದಲ್ಲೆ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಕಂದಾಯ ಸಚಿವ ಆರ್.ಅಶೋಕ್‌ಗೆ ಸಲ್ಲಿಸುತ್ತೇವೆ ಎಂದರು.

ಸ್ಥಳೀಯ ಶಾಸಕರಾಗಿ ಕ್ರೈಸ್ತ ಸಮುದಾಯಕ್ಕೆ ಡಿ.ಕೆ.ಶಿವಕುಮಾರ್ ಸಹಾಯ ಮಾಡಿದ್ದು ತಪ್ಪಲ್ಲ. ಪ್ರತಿಯೊಬ್ಬರೂ ತಮ್ಮ ತಮ್ಮ ಧಾರ್ಮಿಕ ನಾಯಕರ ಪ್ರತಿಮೆ ನಿರ್ಮಿಸಲು ಹಕ್ಕಿದೆ. ಕಲ್ಲಡ್ಕ ಪ್ರಭಾಕರ್ ಭಟ್ ತಮ್ಮ ತವರಲ್ಲಿ ಶ್ರೀ ಕೃಷ್ಣನ ಪ್ರತಿಮೆ ನಿರ್ಮಿಸಿದರೆ ನಾವೆಲ್ಲ ಅವರಿಗೆ ನೆರವು ಕೊಡುತ್ತೇವೆ ಎಂದು ಅವರು ಹೇಳಿದರು.

ಏಸು ಕ್ರಿಸ್ತನ ಪ್ರತಿಮೆಯನ್ನು ರಾಜ್ಯ ಸರಕಾರವೇ ಮುಂದೆ ನಿಂತು ನಿರ್ಮಿಸಲಿ. ಕಪಾಲ ಬೆಟ್ಟದಲ್ಲಿ 2018ರ ಫೆ.2ರಂದು 10 ಎಕರೆ ಭೂಮಿ ಕಪಾಲಬೆಟ್ಟ ಅಭಿವೃದ್ಧಿ ಟ್ರಸ್ಟ್‌ಗೆ ಸರಕಾರದಿಂದ ಮಂಜೂರಾಗಿತ್ತು. ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಗಳಿಗೆ ಈ ಭೂಮಿ ಮಂಜೂರಾಗಿದೆ. 1660ರಿಂದಲೇ ಕಪಾಲ ಬೆಟ್ಟದಲ್ಲಿ ಕ್ರೈಸ್ತ ಸಮುದಾಯದವರು ವಾಸ ಮಾಡುತ್ತಿದ್ದಾರೆ. ಈ ಭಾಗದ ಕ್ರೈಸ್ತರು ರೇಷ್ಮೆ ಬೆಳೆಯುತ್ತಿದ್ದರು ಎಂದು ಐವಾನ್ ಡಿಸೋಜಾ ತಿಳಿಸಿದರು.

ಕಳವಾಯಿ ಬೆಟ್ಟದಲ್ಲಿ ಏಸುಕ್ರಿಸ್ತನನ್ನು ಶಿಲುಬೆಗೇರಿಸಲಾಗಿತ್ತು. ಹಾಗಾಗಿ ಆ ಪ್ರದೇಶಕ್ಕೆ ಕಪಾಲ ಬೆಟ್ಟ ಅಂತ ಕರೆಯಲಾಗುತ್ತಿದೆ. ಇದುವರೆಗೆ ಅಲ್ಲಿ ಯಾವುದೇ ವ್ಯಾಜ್ಯ, ಸಮಸ್ಯೆ ಇರಲಿಲ್ಲ. 1661ರಲ್ಲಿ ಹಾರೋಬೆಲೆಯಲ್ಲಿ ಪ್ರಥಮ ಚರ್ಚ್ ನಿರ್ಮಿಸಲಾಗಿದೆ ಎಂದು ಅವರು ಹೇಳಿದರು. ಕಾವೇರಿ ನೀರಿನ ಸಂಗ್ರಹಕ್ಕೆ ಅಲ್ಲಿ ದೊಡ್ಡ ಟ್ಯಾಂಕ್ ಕಟ್ಟಲಾಗಿದೆ. ಆ ಟ್ಯಾಂಕ್ ನಿರ್ಮಾಣಕ್ಕೆ ಅಗತ್ಯ ಪರಿಕರ, ಸಾಮಗ್ರಿ ತೆಗೆದುಕೊಂಡು ಹೋಗಲು ಗುತ್ತಿಗೆದಾರರು ರಸ್ತೆ ನಿರ್ಮಿಸಿದ್ದಾರೆ. ಏಸು ಪ್ರತಿಮೆ ನಿರ್ಮಾಣಕ್ಕಾಗಿ ಟ್ರಸ್ಟ್ ರಸ್ತೆ ನಿರ್ಮಿಸಿದೆ ಎಂಬ ಆರೋಪ ಸತ್ಯಕ್ಕೆ ದೂರವಾದದ್ದು. ವಿದ್ಯುತ್ ಸಂಪರ್ಕವನ್ನು ಅಧಿಕೃತವಾಗಿಯೇ ಪಡೆಯಲಾಗಿದೆ ಎಂದು ಅವರು ತಿಳಿಸಿದರು.

ರಾಜಕೀಯ ದುರುದ್ದೇಶಕ್ಕಾಗಿ ಈ ಪ್ರಕರಣವನ್ನು ಬಳಸಿಕೊಳ್ಳಲಾಗುತ್ತಿದೆ. ಗೋಮಾಳ ಭೂಮಿಯನ್ನು ಹಿಂದೂ, ಮುಸ್ಲಿಂ, ಕ್ರೈಸ್ತ ಇತರೇ ಸಮುದಾಯಗಳಿಗೆ ಸರಕಾರ ಮೊದಲಿಂದಲೂ ಮಂಜೂರು ಮಾಡುತ್ತಾ ಬಂದಿದೆ. ಹಾಗೆಯೇ ಕಪಾಲ ಬೆಟ್ಟದಲ್ಲಿ ಕ್ರೈಸ್ತರಿಗೂ ಭೂಮಿ ಮಂಜೂರು ಮಾಡಲಾಗಿದೆ. ಆದರೂ, ಸಮಾಜದಲ್ಲಿ ವಿಷಬೀಜ ಬಿತ್ತುವ ಪ್ರಯತ್ನಗಳು ನಡೆಯುತ್ತಿವೆ ಎಂದು ಐವಾನ್ ಡಿ’ಸೋಜಾ ದೂರಿದರು.

ಏಸು ಪ್ರತಿಮೆ ನಿರ್ಮಾಣವನ್ನು ಕೈ ಬಿಡಲು ತಮಗೆ ಹೇಗೆ ಬೇಕೋ ಹಾಗೆ ವರದಿ ತಯಾರಿಸಲು ಕನಕಪುರ ತಹಶೀಲ್ದಾರ್‌ಗೆ ಸರಕಾರ ನಿರ್ದೇಶನ ನೀಡಿತ್ತು. ಸರಕಾರ ಹೇಳಿದಂತೆ ಜಿಲ್ಲಾಡಳಿತ ವರದಿ ತಯಾರಿಸಿದೆ ಎಂದು ಅವರು ಆರೋಪಿಸಿದರು.

ಹೊನ್ನಾಳಿಯ ಶಾಸಕ ಎಂ.ಪಿ.ರೇಣುಕಾಚಾರ್ಯ ವಿರುದ್ಧ ವಾಗ್ದಾಳಿ ನಡೆಸಿದ ಐವಾನ್ ಡಿಸೋಜಾ, ಅಲ್ಪಸಂಖ್ಯಾತರ ವಿರುದ್ಧ ನೀಡಿರುವ ಈ ಹೇಳಿಕೆಗಳು ಸಂವಿಧಾನದ ಸ್ಪಷ್ಟ ಉಲ್ಲಂಘನೆಯಾಗಿದೆ. ರೇಣುಕಾಚಾರ್ಯ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಅವರು ಕಿಡಿಗಾರಿದರು.

ಸಿಎಂ ರಾಜಕೀಯ ಕಾರ್ಯದರ್ಶಿಯಾಗಿ ಅವರು ಹೀಗೆ ಮಾತಾಡೋದು ಸರಿಯಲ್ಲ. ಮುಸ್ಲಿಮರಿಗೆ ಎಲ್ಲಿಡಬೇಕೋ ಅಲ್ಲಿಡುತ್ತೇನೆ ಅಂದರೆ ಏನರ್ಥ? ಮುಸ್ಲಿಮರಿಗೆ ಈ ದೇಶದಲ್ಲಿ ಯಾವುದೇ ಹಕ್ಕು, ಸ್ವಾತಂತ್ರ್ಯ ಇಲ್ವಾ? ರೇಣುಕಾಚಾರ್ಯ ಒಂದು ಸಮುದಾಯಕ್ಕೆ ಮಾತ್ರ ಶಾಸಕರಾ? ಈ ಹೇಳಿಕೆ ಕೊಟ್ಟ ರೇಣುಕಾಚಾರ್ಯರನ್ನು ಸಿಎಂ ಅಮಾನತು ಮಾಡಬೇಕು. ರಾಜ್ಯ ಹಿತಾಸಕ್ತಿಗೆ ಅವಮಾನ ಮಾಡುವಂತಹ ಹೇಳಿಕೆಯನ್ನು ರೇಣುಕಾಚಾರ್ಯ ನೀಡಿದ್ದಾರೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News