ವೆಲ್ಫೇರ್ ಪಾರ್ಟಿ ವತಿಯಿಂದ ‘ಸಂವಿಧಾನ ಉಳಿಸಿ, ಪೌರತ್ವ ರಕ್ಷಿಸಿ’ ಅಭಿಯಾನ

Update: 2020-01-23 12:37 GMT

ಬೆಂಗಳೂರು, ಜ.23: ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ಇಂದಿನಿಂದ ಜ.30ರವರೆಗೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದಿಂದ ಸಂವಿಧಾನ ಉಳಿಸಿ, ಪೌರತ್ವ ರಕ್ಷಿಸಿ ಕುರಿತ ರಾಷ್ಟ್ರೀಯ ಅಭಿಯಾನ ನಡೆಸಲಾಗುತ್ತಿದೆ ಎಂದು ಪಕ್ಷದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಹಬೀಬುಲ್ಲಾ ಖಾನ್ ತಿಳಿಸಿದ್ದಾರೆ.

ಗುರುವಾರ ನಗರದ ವೆಲ್ಫೇರ್ ಪಾರ್ಟಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಎ ಕಾಯ್ದೆ ದೇಶದ ಸಂವಿಧಾನದ ಮೂಲ ಆಶಯಕ್ಕೆ ಮತ್ತು ವಿಶ್ವಸಂಸ್ಥೆಯ ಅಂತರ್‌ರಾಷ್ಟ್ರೀಯ ಕಾನೂನಿಗೆ ವಿರುದ್ಧವಾಗಿದ್ದು, ಇದು ತಾರತಮ್ಯದಿಂದ ಕೂಡಿದೆ ಎಂದು ಆರೋಪ ಮಾಡಿದರು.

ದೇಶದಲ್ಲಿ ಒಂದು ಅನಿಶ್ಚಿತ ವಾತಾವರಣ ತಲೆದೋರಿದ್ದು, ನಿರುದ್ಯೋಗ ಸಮಸ್ಯೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಇದರ ವಿರುದ್ಧ ಜನ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ವಿದ್ಯಾರ್ಥಿಗಳು, ಮಹಿಳೆಯರು ಸೇರಿದಂತೆ ಎಲ್ಲ ಜನ ವಿಭಾಗಗಳ ಜನರು ಸಿಎಎ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ಆದರೂ ಸರಕಾರ ಇವೆಲ್ಲವನ್ನೂ ಗಣನೆಗೆ ತೆಗೆದುಕೊಳ್ಳಲು ನಿರ್ಲಕ್ಷ ವಹಿಸಿರುವುದು ಖಂಡನೀಯ ಎಂದರು.

ಸುಳ್ಳನ್ನೇ ನಿರಂತರವಾಗಿ ಹೇಳಿ ಅದನ್ನು ಸತ್ಯವಾಗಿಸುವ ಪ್ರಯತ್ನ ನಡೆಯುತ್ತಿದೆ. ಇದರ ವಿರುದ್ಧ ಜನರು ಜಾತಿ, ಮತ, ಭೇದವಿಲ್ಲದೆ ಬೀದಿಗಿಳಿದಿದ್ದಾರೆ. ಇಂತಹ ಸಂದರ್ಭದಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಈಗ ನಡೆಯುತ್ತಿರುವ ಹೋರಾಟ ಶೇಕಡಾ 90ರಷ್ಟು ನಾಗರಿಕರು ಮತ್ತು ಶೇಕಡಾ10ರಷ್ಟು ಜನರ ನಡುವಿನ ಹೋರಾಟವಾಗಿದೆ. ದ್ವೇಷ ಮತ್ತು ಪ್ರೀತಿಯ ನಡುವಿನ, ಮಾನವೀಯತೆ ಮತ್ತು ಅಮಾನವೀಯತೆ ನಡುವಿನ, ಜಾತ್ಯತೀತ ಮತ್ತು ಫ್ಯಾಶಿಸ್ಟ್ ನಡುವಿನ, ಪ್ರಜಾಪ್ರಭುತ್ವ ಮತ್ತು ಮನುವಾದಿಗಳ ನಡುವಿನ, ಅಂಬೇಡ್ಕರ್‌ವಾದಿಗಳು ಮತ್ತು ಮನುವಾದಿಗಳ ನಡುವಿನ ಹೋರಾಟವಾಗಿದೆ. ಇದರಲ್ಲಿ ಖಂಡಿತವಾಗಿಯೂ ಸತ್ಯಕ್ಕೆ ಜಯ ಲಭಿಸಲಿದೆ. ಜಗತ್ತಿನ ಚರಿತ್ರೆಯಲ್ಲಿಯೂ, ಇರಾನ್ ಕ್ರಾಂತಿ, ಫ್ರೆಂಚ್ ಕ್ರಾಂತಿಯ ಇತಿಹಾಸವನ್ನು ನೋಡಿದಾಗ ನಮಗೆ ಸತ್ಯಕ್ಕೆ ಜಯ ಲಭಿಸಿರುವುದು ಕಾಣಬಹುದು. ಅದೇ ರೀತಿ ಇಲ್ಲಿಯೂ ನಮಗೆ ಜಯ ಲಭಿಸಲಿದೆ ಎಂದು ಹೇಳಿದರು.

ಈಗಾಗಲೇ ಪಕ್ಷವು ಸಿಎಎಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದೆ. ಇದರೊಂದಿಗೆ ಈ ಮೂರು ಕಾಯ್ದೆಗಳ ವಿರುದ್ಧ ಜನಜಾಗೃತಿ ಮೂಡಿಸಲು ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಒಂದು ವಾರ ಕಾಲ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ವಿಚಾರಗೋಷ್ಠಿ, ಕಾರ್ನರ್ ಸಭೆ, ಬೃಹತ್ ಸಾರ್ವಜನಿಕ ಸಭೆ, ಮಾನವ ಸರಪಳಿ, ಬೀದಿ ನಾಟಕ, ಕರಪತ್ರ ಹಂಚಿಕೆ, ಅಭಿಯಾನ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜ.26ರಂದು ರಾಜ್ಯಾದ್ಯಂತ ಮಾನವ ಸರಪಳಿ ಮತ್ತು ವಿಚಾರಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹಬೀಬುಲ್ಲಾ ವಿವರಿಸಿದರು.

ಈ ಸಂದರ್ಭದಲ್ಲಿ ಎಫ್‌ಐಟಿಯು ರಾಜ್ಯಾಧ್ಯಕ್ಷ ಅಡ್ವಕೇಟ್ ಅಬ್ದುಲ್ ಸಲಾಂ, ವೆಲ್ಫೇರ್ ಪಾರ್ಟಿಯ ಮಹಿಳಾ ವಿಭಾಗದ ಪ್ರಧಾನ ಕಾರ್ಯದರ್ಶಿ ತಲ್ಹತ್ ಯಾಸ್ಮೀನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಾವುದ್ ಅಂಬರ್ ಹಾಜರಿದ್ದರು.

ಮಂಗಳೂರಿನಲ್ಲಿ ಪೊಲೀಸರು ನಡೆಸಿದ ಗೋಲಿಬಾರ್ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು. ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣದಲ್ಲಿ ಮಾಧ್ಯಮಗಳು ನಡೆದುಕೊಂಡ ರೀತಿಯಿಂದ ಮಾಧ್ಯಮಗಳ ಮೇಲಿನ ವಿಶ್ವಾಸವನ್ನು ಸಾರ್ವಜನಿಕರು ಕಳೆದುಕೊಳ್ಳುವಂತಾಗಿದೆ. ನಿಷ್ಪಕ್ಷಪಾತವಾಗಿ ವರದಿ ಮಾಡಬೇಕಿದ್ದ ಮಾಧ್ಯಮಗಳು ಒಂದು ಸಮುದಾಯವನ್ನು ಬಲಿಪಶು ಮಾಡಲು ಪ್ರಯತ್ನಿಸಿದ್ದು ಖಂಡನೀಯ.

-ಮೊಯಿನ್ ಖಮರ್, ಫೆಟರ್ನಿಟಿ ಮೂವ್‌ಮೆಂಟ್‌ನ ರಾಜ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News