3 ತಿಂಗಳಲ್ಲಿ ಭಾರತದ 95 ಮಹಿಳಾ ರಾಜಕಾರಣಿಗಳಿಗೆ 1 ಮಿಲಿಯನ್ ನಿಂದನಾತ್ಮಕ ಟ್ವೀಟ್: ಆಮ್ನೆಸ್ಟಿ ವರದಿ

Update: 2020-01-23 17:06 GMT
  ಫೋಟೊ ಕೃಪೆ: twitter.com/amnestyusa

ಹೊಸದಿಲ್ಲಿ, ಜ.23: ಕಳೆದ ವರ್ಷ(2019)ದ ಮಾರ್ಚ್‌ನಿಂದ ಮೇ ತಿಂಗಳ ಅವಧಿಯಲ್ಲಿ ಭಾರತದ 95 ರಾಜಕಾರಣಿಗಳು ಸುಮಾರು 1 ಮಿಲಿಯನ್ ಸಮಸ್ಯಾತ್ಮಕ ಅಥವಾ ನಿಂದನಾತ್ಮಕ ಟ್ವೀಟ್‌ಗಳನ್ನು ಪಡೆದಿದ್ದಾರೆ ಎಂದು ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಇಂಡಿಯಾದ ಅಧ್ಯಯನ ವರದಿ ತಿಳಿಸಿದೆ. ಭಾರತದಲ್ಲಿ ಕಳೆದ ವರ್ಷ ಸಾರ್ವತ್ರಿಕ ಚುನಾವಣೆ ನಡೆದ ಸಂದರ್ಭದ ವಿದ್ಯಮಾನ ಇದಾಗಿದ್ದು ಈ ಮಹಿಳಾ ರಾಜಕಾರಣಿಗಳು ದಿನಾ ಸರಾಸರಿ 113 ಟ್ವೀಟ್ ಸಂದೇಶ ಪಡೆದಿದ್ದಾರೆ. ಭಾರತದಲ್ಲಿ ಈ ಅವಧಿಯಲ್ಲಿ ಮಾಡಲಾಗಿರುವ ಟ್ವೀಟ್‌ನ ಸರಾಸರಿ 13.8% ಟ್ವೀಟನ್ನು ಈ 95 ಮಹಿಳಾ ರಾಜಕಾರಣಿಗೆ ರವಾನಿಸಲಾಗಿದೆ. ಇದರಲ್ಲಿ ಹೆಚ್ಚಿನವು ನಿಂದನಾತ್ಮಕ ಅಥವಾ ಸಮಸ್ಯಾತ್ಮಕ ಟ್ವೀಟ್ ಆಗಿದ್ದರೆ ಐದನೇ ಒಂದರಷ್ಟು ಟ್ವೀಟ್‌ಗಳು ಲಿಂಗ ಭೇದಭಾವ ಅಥವಾ ಸ್ತ್ರೀದ್ವೇಷಕ್ಕೆ ಸಂಬಂಧಿಸಿದ್ದಾಗಿದೆ.

ಮುಸ್ಲಿಂ ಮಹಿಳಾ ರಾಜಕಾರ ಣಿಗಳು ಅಥವಾ ಮುಸ್ಲಿಮರೆಂದು ಗ್ರಹಿಸಲಾದವರು ಇತರ ಧರ್ಮೀಯರು ಪಡೆದಿರುವ ಟ್ವೀಟ್‌ಗಿಂತ 55.5% ಹೆಚ್ಚು ನಿಂದನಾತ್ಮಕ ಟ್ವೀಟ್ ಪಡೆದಿದ್ದಾರೆ. ದುರ್ಬಲ ವರ್ಗದ ಮಹಿಳೆಯರು ಇತರ ಜಾತಿಯವರಿಗಿಂತ 59%ದಷ್ಟು ಹೆಚ್ಚು ಜಾತಿ ನಿಂದನೆ ಟ್ವೀಟ್ ಪಡೆದಿದ್ದಾರೆ. ‘ಟ್ರೋಲ್ ಪ್ಯಾಟ್ರೋಲ್ ಇಂಡಿಯಾ: ಎಕ್ಸ್‌ಪೋಸಿಂಗ್ ಆನ್‌ಲೈನ್ ಅಬ್ಯೂಸ್ ಫೇಸ್ಡ್ ಬೈ ವುಮೆನ್ ಪೊಲಿಟೀಷಿಯನ್ಸ್ ಇನ್ ಇಂಡಿಯಾ’ ಎಂಬ ಶೀರ್ಷಿಕೆಯ ಅಧ್ಯಯನದಲ್ಲಿ ಜನಸಮೂಹದಿಂದ ಪಡೆದ ಮಾಹಿತಿ, ಡೇಟಾ ವಿಜ್ಞಾನ ಮತ್ತು ಕಂಪ್ಯೂಟರ್‌ಗಳ ಅಧ್ಯಯನದ ಮೂಲಕ ಮಾಹಿತಿ ಸಂಗ್ರಹಿಸಿ ವರದಿ ತಯಾರಿಸಲಾಗಿದೆ.

 95 ಮಹಿಳಾ ರಾಜಕಾರಣಿಗಳು ಪಡೆದಿರುವ ಸುಮಾರು 70 ಲಕ್ಷ ಟ್ವೀಟ್‌ಗಳಲ್ಲಿ 1.14 ಲಕ್ಷ ಟ್ವೀಟ್‌ಗಳನ್ನು ಅಧ್ಯಯನ ನಡೆಸಲಾಗಿದೆ. ನೋಯಿಸುವ ಅಥವಾ ಹಗೆಯ ಭಾವವುಳ್ಳ ಟ್ವೀಟ್‌ಗಳನ್ನು ಸಮಸ್ಯಾತ್ಮಕ ಟ್ವೀಟ್‌ಗಳೆಂದು ವರ್ಗೀಕರಿಸಲಾಗಿದೆ. ಆಮ್ನೆಸ್ಟಿಯ ವರದಿಯನ್ನು 2019ರ ನವೆಂಬರ್‌ನಲ್ಲಿ ಟ್ವಿಟರ್‌ಗೆ ಕಳುಹಿಸಲಾಗಿದೆ. ಟ್ವಿಟರ್ ವೇದಿಕೆಯನ್ನು ಅನಗತ್ಯ, ನಿಂದಾತ್ಮಕ ಮತ್ತಿತರ ನಡವಳಿಕೆಗಳಿಂದ ಮುಕ್ತವಾಗಿಸುವುದು ತನ್ನ ಪ್ರಮುಖ ಆದ್ಯತೆಯಾಗಿದೆ ಎಂದು ಟ್ವಿಟರ್ ಪ್ರತಿಕ್ರಿಯಿಸಿದೆ ಎಂದು ಮೂಲಗಳು ತಿಳಿಸಿವೆ. ಕಿರುಕುಳದ ಉದ್ದೇಶದ , ಹಗೆತನ ಅಥವಾ ನಿಂದಾತ್ಮಕ ವರ್ತನೆಗೆ ಟ್ವಿಟರ್‌ನಲ್ಲಿ ಅವಕಾಶವಿಲ್ಲ ಎಂದು ಟ್ವಿಟರ್‌ನ ವಕ್ತಾರರು ತಿಳಿಸಿರುವುದಾಗಿ ಸುದ್ದಿಸಂಸ್ಥೆ ವರದಿ ಮಾಡಿದೆ.

 ಈಗ ಅತ್ಯಾಧುನಿಕ ತಂತ್ರಜ್ಞಾನದ ಬಳಕೆಯಿಂದ ನಿಂದಾತ್ಮಕ ವಿಷಯವುಳ್ಳ 50%ಕ್ಕೂ ಹೆಚ್ಚು ಟ್ವೀಟ್ ‌ಗಳನ್ನು ಮೊದಲೇ ಪತ್ತೆಹಚ್ಚಿ ಕ್ರಮ ಕೈಗೊಳ್ಳಲಾಗುತ್ತಿದೆ. ನಮ್ಮ ಇಂಜಿನಿಯರಿಂಗ್ ತಂಡ ಆರೋಗ್ಯಕರ ಟ್ವಿಟರ್ ರೂಪಿಸುವ ಕಾರ್ಯವನ್ನು ಮುಂದುವರಿಸಿದೆ ಎಂದು ಟ್ವಿಟರ್‌ನ ವಕ್ತಾರರು ಹೇಳಿದ್ದಾರೆ. ಆದರೆ ಮಹಿಳೆಯರ ಹಕ್ಕನ್ನು ಗೌರವಿಸುವ ಜವಾಬ್ದಾರಿ ನಿರ್ವಹಿಸಲು ಟ್ವಿಟರ್ ವಿಫಲವಾಗಿದೆ ಎಂದು ಮಹಿಳಾ ರಾಜಕಾರಣಿಗಳು ಹೇಳಿದ್ದಾರೆ. ಮಹಿಳೆಯರ ವಿರುದ್ಧ ಅಂತರ್ಜಾಲದಲ್ಲಿ ನಡೆಯುತ್ತಿರುವ ನಿಂದನೆಗಳ ಸ್ವರೂಪ ಮತ್ತು ಪ್ರಮಾಣವನ್ನು ರಾಷ್ಟ್ರಗಳ ಆಧಾರದಲ್ಲಿ ಪ್ರಕಟಿಸುವಂತೆ ಮತ್ತು ಈ ನಿಂದಾತ್ಮಕ ಟ್ವೀಟ್‌ಗಳಿಗೆ ಟ್ವಿಟರ್ ಯಾವ ರೀತಿ ಪ್ರತಿಕ್ರಿಯಿಸಿದೆ ಎಂಬುದನ್ನು ವಿವರಿಸುವಂತೆ ಆಮ್ನೆಸ್ಟಿ ಸಂಸ್ಥೆ ಒತ್ತಾಯಿಸಿದೆ. ಮಹಿಳೆಯರು ಟ್ವಿಟರ್‌ನಲ್ಲಿ ನಿಯಮಿತವಾಗಿ ಮತ್ತು ನಿರಂತರವಾಗಿ ನಿಂದನೆಗೆ ಒಳಗಾಗುತ್ತಿದ್ದು ಇದು ಅವರನ್ನು ಮೌನವಾಗಿಸುವ ಪರಿಣಾಮ ಬೀರುತ್ತದೆ ಎಂದು ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ ಅವಿನಾಶ್ ಕುಮಾರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News