ಎಲ್ಲ ಕಾನೂನುಗಳಿಗೂ ಸಂವಿಧಾನವೇ ತಾಯಿ: ನ್ಯಾ.ನಾಗಮೋಹನ್‌ ದಾಸ್

Update: 2020-01-23 17:43 GMT

ಬೆಂಗಳೂರು, ಜ.23: ಮನುಷ್ಯ ಹುಟ್ಟಿನಿಂದ ಸಾಯುವವರೆಗೂ ಒಂದಲ್ಲಾ ಒಂದು ಕಾನೂನಿನಡಿಯಲ್ಲಿಯೇ ಇರುತ್ತಾರೆ. ಇದಕ್ಕೆ ಮೂಲ ಬೇರು ಸಂವಿಧಾನವಾಗಿದೆ ಎಂದು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‌ ದಾಸ್ ಹೇಳಿದ್ದಾರೆ.

ಗುರುವಾರ ನಗರದ ಯವನಿಕದಲ್ಲಿ ಬಿಎಂಟಿಸಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಿದ್ದ ಸಂವಿಧಾನ ಮತ್ತು ಮೀಸಲಾತಿ ಹೆಚ್ಚಳ ಕುರಿತ ಸಮಾಲೋಚನ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಜನನ, ಮರಣ, ಶಿಕ್ಷಣ, ಉದ್ಯೋಗ, ಕನಿಷ್ಠ ವೇತನ, ವಿವಾಹ ಹೀಗೆ ನಾವು ಹುಟ್ಟಿದಾಗಿನಿಂದ ಸಾಯುವತನಕ ಅನೇಕ ಕಾನೂನು ಕಾಯ್ದೆಗಳ ಅಡಿಯಲ್ಲಿಯೇ ಬದುಕುತ್ತೇವೆ. ಇವೆಲ್ಲವನ್ನೂ ಸಂವಿಧಾನದ ಅಡಿಯಲ್ಲಿಯೇ ಮಾಡಿದ್ದು, ಎಲ್ಲದಕ್ಕೂ ಸಂವಿಧಾನವೇ ತಾಯಿಯಾಗಿದೆ ಎಂದು ತಿಳಿಸಿದರು.

ಸಂವಿಧಾನ ಜಾರಿಯಾಗಿ 70 ವರ್ಷಗಳು ಕಳೆದಿದೆ. ಈ ಅವಧಿಯಲ್ಲಿ, ಅನೇಕ ಬದಲಾವಣೆಗಳು ನಮ್ಮ ದೇಶ ಕಂಡಿದೆ. ದಲಿತರು, ಅಲ್ಪಸಂಖ್ಯಾತರಿಗೆ, ಹಿಂದುಳಿದ ವರ್ಗಗಳು ಹಾಗೂ ಮೇಲ್ಜಾತಿಗಳು ಸೇರಿ ಎಲ್ಲರಿಗೂ ಸಮಾನ ಅವಕಾಶಗಳನ್ನು ಸಂವಿಧಾನ ಕಲ್ಪಿಸಿದೆ ಎಂದರು.

ಭಾರತ ಗಣರಾಜ್ಯವಾದ ಬಳಿಕ ಸಂಸತ್ತು, ವಿಧಾನಸಭೆ, ಶಾಸನಸಭೆ, ನ್ಯಾಯಾಂಗ, ಕಾರ್ಯಾಂಗಗಳು ಉದಯವಾಗಿವೆ. ಅಲ್ಲದೆ, ಇಂದು ದಲಿತರೊಬ್ಬರು ದೇಶದ ಪ್ರಥಮ ಪ್ರಜೆಯಾಗಲು ಸಂವಿಧಾನವೇ ಕಾರಣವಾಗಿದೆ. ಶೋಷಿತ ಸಮುದಾಯವರು ಉನ್ನತ ಅಧಿಕಾರಿಗಳಾಗಿದ್ದಾರೆ, ಶಿಕ್ಷಣ, ಉದ್ಯೋಗ, ಸಾಹಿತ್ಯ ಸೇರಿ ಎಲ್ಲದರಲ್ಲಿಯೂ ಇಂದು ಸ್ಥಾನ ಪಡೆದಿದ್ದಾರೆ ಎಂದು ಅವರು ಹೇಳಿದರು.

ಭಾರತವು ವಿಶ್ವದ 10 ಅಭಿವೃದ್ಧಿ ರಾಷ್ಟ್ರಗಳಲ್ಲಿ ಒಂದಾಗಿದೆ ಅಂದರೆ, ಅದಕ್ಕೆ ನಮ್ಮ ಸಂವಿಧಾನವೇ ಕಾರಣ ಎಂದ ನಾಗಮೋಹನ್‌ದಾಸ್, ಅಂಬೇಡ್ಕರ್ ಸಂವಿಧಾನದ ಮೂಲಕ ಕಾರ್ಮಿಕರು, ಮಹಿಳೆಯರು, ದುಡಿಯುವ ವರ್ಗ ಸೇರಿ ಎಲ್ಲರ ಹಿತ ಕಾಪಾಡಿದ್ದಾರೆ. ಅದರಲ್ಲಿ ನೀಡಿರುವ ಹಕ್ಕು ಮತ್ತು ಸೌಲಭ್ಯಗಳನ್ನು ಎಲ್ಲರೂ ಪಡೆಯುತ್ತಿದ್ದಾರೆ. ಹಾಗಾದರೆ, ಅಂಬೇಡ್ಕರ್ ಇಂದು ದಲಿತ ನಾಯಕರಾಗಿ ಬಿಂಬಿತವಾಗಿದ್ದಾರೆ ಎಂದು ವಿಷಾದಿಸಿದರು.

ನಮ್ಮ ದೇಶವು ಬಹುತ್ವವನ್ನು ಒಪ್ಪಿಕೊಂಡಿದೆ. ಹಿಂದು, ಮುಸ್ಲಿಮ್, ಕ್ರೈಸ್ತ, ಬೌದ್ಧ, ಸಿಖ್, ಪಾರ್ಸಿ, ಜೈನ್ ಧರ್ಮಗಳವರಿದ್ದು, ಅನೇಕ ಜಾತಿ, ಉಪ ಜಾತಿಗಳವರಿದ್ದಾರೆ. ನಮ್ಮ ಪೂರ್ವಜರು ಯಾರು ಎಂದು ಕೇಳಿದರೆ ಖಂಡಿತ ಹೇಳಲು ಸಾಧ್ಯವಾಗುವುದಿಲ್ಲ. ನಮ್ಮ ಸಂವಿಧಾನವೇ ಬಹುತ್ವವನ್ನು ಪ್ರಸ್ತಾಪಿಸಿದೆ ಎಂದು ಅವರು ನುಡಿದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ, ಅಲ್ಪಸಂಖ್ಯಾತರಿಗೆ ನಮ್ಮ ದೇಶದಲ್ಲಿ ಮೀಸಲಾತಿಯನ್ನು ನೀಡಲಾಗಿದೆ. ಅದರಲ್ಲಿಯೂ ನಿವೃತ್ತ ಯೋಧರಿಗೆ, ವಿಶೇಷಚೇತನರಿಗೆ, ಕನ್ನಡ ಮಾಧ್ಯಮ, ಗ್ರಾಮೀಣ ಮಾಧ್ಯಮ, ನಿರಾಶ್ರಿತರು ಎಂದು ವರ್ಗೀಕರಣ ಮಾಡಲಾಗಿದೆ. ಈ ಮೀಸಲಾತಿಯನ್ನು ಎಲ್ಲ ವರ್ಗದವರೂ ಪಡೆಯುತ್ತಿದ್ದಾರೆ. ಆದರೂ, ಕೆಲವರಿಗೆ ಮೀಸಲಾತಿ ಎಂದರೆ ಅಸಹ್ಯ ಎನಿಸುತ್ತಿರುವುದು ಸಲ್ಲ ಎಂದು ಪ್ರತಿಪಾದಿಸಿದರು.

ಎಲ್ಲರಿಗೂ ಮೀಸಲಾತಿಯ ಕಲ್ಪನೆ, ಸಂವಿಧಾನದ ಆಶಯವನ್ನು ತಲುಪಿಸಬೇಕಿದೆ. ಜನರಲ್ಲಿ ಜಾಗೃತಿಯನ್ನು ಮೂಡಿಸಬೇಕಾಗಿದೆ. ಸಂವಿಧಾನ ದಲಿತರಿಗೆ ಸೀಮಿತವಾದದ್ದಲ್ಲ, ಅದೊಂದು ಸಾಮಾಜಿಕ, ಆರ್ಥಿಕ ನ್ಯಾಯ, ನಮ್ಮ ಹಕ್ಕುಗಳನ್ನು ನೀಡಿರುವ, ಸಮಾನತೆ, ಬಹುತ್ವವನ್ನು ಕಟ್ಟಿಕೊಡುವ ಗ್ರಂಥವಾಗಿದೆ ಎಂಬುದು ಅರಿಯಬೇಕಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News