ಸತತ ಕಷ್ಟ ಪಡುವುದರಿಂದ ಯಶ ಪ್ರಾಪ್ತಿಯಾಗುತ್ತದೆ

Update: 2020-01-23 18:13 GMT

ಭಾಗ-2

ಸತತ ಕಾರ್ಯ ಮತ್ತು ದುಡಿಮೆ ಮಾಡುವುದರಿಂದಲೇ ಯಶಪ್ರಾಪ್ತಿಯಾಗುತ್ತದೆ. ಕೇವಲ ಪದವಿ ಗಳಿಸುವುದರಿಂದ ಏನೂ ಪ್ರಯೋಜನವಿಲ್ಲ. ಏಕೆಂದರೆ ಪದವಿ ಎಂದರೆ ಜ್ಞಾನಾರ್ಜನೆ ಮಾಡಲು ಸಂಗ್ರಹಿಸಿದ ಸಾಧನ ಸಾಮಗ್ರಿಯಾಗಿದೆ. ವಿಶ್ವವಿದ್ಯಾನಿಲಯದ ಪದವಿಗೂ, ಬುದ್ಧಿವಂತಿಕೆಗೂ ಏನೂ ಸಂಬಂಧವಿಲ್ಲ. ಈ ವಿಷಯದ ಒಂದು ಮನನೀಯವಾದ ಉದಾಹರಣೆಯನ್ನು ನಿಮ್ಮ ಮಾಹಿತಿಗಾಗಿ ನೀಡುತ್ತೇನೆ. 7ನೇ ಎಡ್ವರ್ಡ್ ಬಳಿಕ ಯಾವಾಗ ಪಂಚಮ ಜಾರ್ಜ್‌ನು ಸಿಂಹಾಸನವನ್ನು 1911ರಲ್ಲಿ ಏರಿದನೋ ಆಗವನು ಹಿಂದೂಸ್ಥಾನಕ್ಕೆ ಬಂದು ಹೋದ. ನಂತರ ಅವನು ಹಿಂದೂಸ್ಥಾನದ ವಿಶ್ವವಿದ್ಯಾನಿಲಯಗಳಿಗೆ ಹಲವು ಲಕ್ಷಗಳ ಅನುದಾನ ನೀಡಿದನು. ವಿಶ್ವವಿದ್ಯಾನಿಲಯ ಈ ಅನುದಾನದ ಹಣದಿಂದ ಗಣಿತಶಾಸ್ತ್ರದಲ್ಲಿ ಪಾರಂಗತರಾದ ಪ್ರೊಫೆಸರ್‌ನನ್ನು ಕರೆಸಿ ಅದರ ಲಾಭ ದೇಶಕ್ಕೆ ಸಿಗಲಿ ಎಂದು ನಿರ್ಧರಿಸಿತು. ಅದರಂತೆ ಅವನನ್ನು ಕರೆಯಿಸಿತು. ಯಾರು ಎಂಎ ಕಲಿಯುತ್ತಿದ್ದಾರೋ ಅವರೇ ಕ್ಲಾಸಿಗೆ ಹಾಜರಾಗಬೇಕೆಂದು ನಿರ್ಧರಿಸಲಾಯಿತು. ಆಗ ಮದ್ರಾಸಿನ ರೈಲ್ವೆ ಆಫೀಸಿನಲ್ಲಿ ಪ್ರತಿ ತಿಂಗಳಿಗೆ 20 ರೂಪಾಯಿ ಪಡೆದು ಕೆಲಸ ಮಾಡುವ ರಾಮಾನುಜನ್ ಎಂಬ ಒಬ್ಬ ಗುಮಾಸ್ತನಿದ್ದ. ಅವನು ತನ್ನ ಕೆಲಸ ಮುಗಿಸಿ ಗಣಿತ ವಿದ್ವಾಂಸನ ಉಪನ್ಯಾಸ ಕೇಳಲು ಮುಂದಾದ. ಅವನು ತನಗೆ ಕ್ಲಾಸಿಗೆ ಹಾಜರಾಗಲು ಅನುಮತಿ ನೀಡಬೇಕೆಂದು ಬೇಡಿಕೊಂಡ. ಆದರೆ ರಾಮಾನುಜ ಕಲಿತದ್ದು ಕೇವಲ ಮೆಟ್ರಿಕ್. ಅವನಿಗೆ ಏನೂ ಅರ್ಥವಾಗಲಿಕ್ಕಿಲ್ಲ ಎಂದು ಮೊದಲು ಆ ವಿದ್ವಾಂಸ ಭಾವಿಸಿದ. ಆದರೂ ಇಚ್ಛೆಯಿದ್ದರೆ ಕ್ಲಾಸಿಗೆ ಹಾಜರಾಗಬಹುದು ಎಂದು ರಾಮಾನುಜನ್‌ನಿಗೆ ಅನುಮತಿ ನೀಡಲಾಯಿತು. ರಾಮಾನುಜನ್ ಆ ಪ್ರೊಫೆಸರ್‌ನ ಐದಾರು ಉಪನ್ಯಾಸವನ್ನು ಆಲಿಸಿದ. ಆದರೆ ಪ್ರತಿಸಲ ಅವನು ವಿದ್ವಾಂಸನ ಭಾಷಣ ಕೇಳುವ ಬದಲು ತನ್ನ ನೋಟ್‌ಬುಕ್‌ನಲ್ಲಿ ಏನೋ ಬರೆಯುತ್ತ ಕೂತಿರುತ್ತಿದ್ದ. ಇದರಿಂದ ಸಿಟ್ಟಿಗೆದ್ದ ಪ್ರೊಫೆಸರ್ ಅವನನ್ನು ಸಾಕಷ್ಟು ಬಯ್ದ. ಕೊಟ್ಟ ಅವಕಾಶದ ದುರುಪಯೋಗ ಪಡಿಸಿಕೊಳ್ಳುತ್ತಿ ಎಂದ. ಆಗ ರಾಮಾನುಜನ್ ನೀಡಿದ ಉತ್ತರ ಹೀಗಿತ್ತು: ‘‘ಸರ್, ನೀವಿಂದು ಹೇಳುವ ಗಣಿತದ ಪ್ರಮೇಯವನ್ನು ನಾನು ಬಾಲ್ಯದಲ್ಲೇ ಕಲಿತಿದ್ದೇನೆ. ಅದರಲ್ಲಿ ಹೊಸದೇನೂ ಇದ್ದಂತೆ ನನಗೆ ಕಾಣಲಿಲ್ಲ. ಅಷ್ಟೇ ಅಲ್ಲ, ಮುಂದಿನ ಪ್ರಮೇಯವನ್ನೂ ನಾನು ನೋಟ್‌ಬುಕ್‌ನಲ್ಲಿ ಬಿಡಿಸಿದ್ದೇನೆ’’.

ಪ್ರೊಫೆಸರ್ ಅವನ ನೋಟ್‌ಬುಕ್ ಪರಿಶೀಲಿಸಿದ ಅವನು ಗಣಿತ ಶಾಸ್ತ್ರದ ದೊಡ್ಡ ದೊಡ್ಡ ಪ್ರಾಬ್ಲಮ್‌ಗಳನ್ನು ಬಿಡಿಸಿದ್ದ. ಅದನ್ನು ಕಂಡು ಪ್ರೊಫೆಸರ್‌ನು ಗವರ್ನ್ ಮೆಂಟ್ ಆಫ್ ಇಂಡಿಯಾಕ್ಕೆ ಬರೆದು ತಿಳಿಸಿದ. ಯಾವ ವ್ಯಕ್ತಿಯು ಗಣಿತಶಾಸ್ತ್ರದಲ್ಲಿ ಇಷ್ಟೆಲ್ಲ ಪಾರಂಗತನಾಗಿದ್ದಾನೋ ಅವನಿಗೆ ಕಾರಕೂನ ಕೆಲಸ ನೀಡಿ ಪ್ರತಿ ತಿಂಗಳು 20ರೂಪಾಯಿ ಕೊಡುತ್ತಿರುವುದಕ್ಕೆ ಖೇದವನ್ನು ವ್ಯಕ್ತಪಡಿಸಿದನು. ಅಷ್ಟೇ ಅಲ್ಲ, ಆ ಪ್ರೊಫೆಸರ್ ಅವನನ್ನು ವಿದೇಶಕ್ಕೆ ಕರೆದೊಯ್ದು ಹೆಚ್ಚಿನ ಸಂಬಳ ನೀಡಿ, ಗಣಿತದಲ್ಲಿ ನಿಷ್ಣಾತನಾಗಿರುವುದರಿಂದ ಅಲ್ಲಿಯವರಿಗೆ ಗಣಿತ ಕಲಿಸಲು ನೇಮಿಸಿದನು. ತಾನು ಸ್ವತಃ ಅವನ ವಿದ್ಯಾರ್ಥಿಯಾದನು. ಆದರೆ ರಾಮಾನುಜನು ಬ್ರಾಹ್ಮಣನಾಗಿರುವುದರಿಂದ ಅವನ ಬ್ರಾಹ್ಮಣ್ಯ ಅಡ್ಡಬಂತು. ಅವನು ವಿದೇಶಕ್ಕೆ ಹೋಗುವಾಗ ತನ್ನ ಜೊತೆಗೆ ಅಡುಗೆಗೆ ಬೇಕಾಗುವ ಸಕಲ ಸಾಮಗ್ರಿಗಳನ್ನು ಒಯ್ದನು. ಇಟ್ಟಿಗೆಯ ಒಲೆ ಮಾಡಿ, ಅದರ ಮೇಲೆ ಸ್ವತಃ ಅಡುಗೆ ಮಾಡಿ ಅವನು ಊಟ ಮಾಡುತ್ತಿದ್ದ. ಯುರೋಪಿಯನ್ನರು ಯವನರಾಗಿದ್ದರಿಂದ ಮುಂಜಾನೆ, ಸಂಜೆ ಅವರನ್ನು ಸ್ಪರ್ಶಿಸಿದ್ದರಿಂದ ತಣ್ಣೀರಿನ ಸ್ನಾನ ಮಾಡುತ್ತಿದ್ದ. ಸ್ನಾನದಿಂದ ನಿಮೋನಿಯಾ ಆಗಿ ಅದರಲ್ಲೇ ಅವನು ಕೊನೆಯುಸಿರೆಳೆದನು. ಹಾಗೆಯೇ ಲಿಬರಲ್ ಪಕ್ಷದ ಚಿಂತಾಮಣಿ ಎಂಬವನು ತುಂಬ ಬುದ್ಧಿವಂತ, ಜಾಣನೆಂಬ ಖ್ಯಾತಿ ಪಡೆದಿದ್ದ. ಅಷ್ಟೇ ಅಲ್ಲ, ಸಂಪೂರ್ಣ ಹಿಂದೂಸ್ಥಾನದಲ್ಲೇ ಮೊದಲ ದರ್ಜೆಯ ಸಂಪಾದಕ ಮತ್ತು ಲೇಖಕನೆನಿಸಿದ್ದ. ಬಿಎ ಮುಗಿದ ಕೂಡಲೇ ಏನೂ ಓದಬೇಕಿಲ್ಲ ಎಂಬ ಭಾವನೆ ವಿದ್ಯಾರ್ಥಿಗಳಲ್ಲಿದೆ. ಆದರೆ ಹಾಗೆ ನೋಡಿದರೆ, ಬಿಎ ಮುಗಿದ ಬಳಿಕ ಶಿಕ್ಷಕರಿಲ್ಲದೆಯೂ ಸ್ವತಂತ್ರ ಅಧ್ಯಯನ ಮಾಡಬಹುದಾಗಿದೆ. ಅಂದರೆ ಕಲಿಯಬೇಕಾಗಿರುವುದು ಇನ್ನು ಮುಂದೆ ಇದೆ. ಮನುಷ್ಯ ಆಯುಷ್ಯದುದ್ದಕ್ಕೂ ಕಲಿಯಬೇಕೆಂಬ ಮನಸ್ಸು ಮಾಡಿದರೆ ವಿದ್ಯಾಸಾಗರದ ಬದಿಯಲ್ಲಿದ್ದ ಮೊಣಕಾಲಿನಷ್ಟು ಜ್ಞಾನದಲ್ಲಿ ಬಹಳವೆಂದರೆ ನಡೆಯಬಹುದು.

ವಿದ್ಯೆಯ ಜೊತೆಗೆ ಶೀಲಚಾರಿತ್ರವು ಅಷ್ಟೇ ಮಹತ್ವದ್ದು. ಚಾರಿತ್ರವಿಲ್ಲದ ವಿದ್ಯೆಯೇ ಹುರುಳಿಲ್ಲದ್ದು. ಏಕೆಂದರೆ ವಿದ್ಯೆಯೆ ಒಂದು ಶಸ್ತ್ರ. ವಿದ್ಯೆಯ ಶಸ್ತ್ರವಿದ್ದರೆ, ಚಾರಿತ್ರವಂತನಾಗಿದ್ದರೆ ಅದರ ಮೂಲಕ ಮತ್ತೊಬ್ಬನ ಸಂರಕ್ಷಣೆ ಮಾಡಬಹುದು. ಚಾರಿತ್ರವೇ ಇಲ್ಲದಿದ್ದರೆ ಅವನು ವಿದ್ಯೆಯ ಶಸ್ತ್ರ ಬಳಸಿ ಮತ್ತೊಬ್ಬನನ್ನು ನಾಶ ಮಾಡಬಹುದು. ವಿದ್ಯೆಯು ಖಡ್ಗದಂತಿದ್ದು, ಅದರ ಮಹತ್ವ ಅದನ್ನು ಧಾರಣ ಮಾಡುವವನನ್ನು ಅವಲಂಬಿಸಿದೆ. ಏಕೆಂದರೆ ಅಜ್ಞಾನಿಯಾದವನು ಬೇರೆಯವರನ್ನು ವಂಚಿಸಲಾರ. ವಂಚಿಸುವುದು ಹೇಗೆ ಎನ್ನುವುದೇ ಅವನಿಗೆ ಗೊತ್ತಿರುವುದಿಲ್ಲ. ಆದರೆ ಕಲಿತವನು ಯಾರನ್ನು ಹೇಗೆ ವಂಚಿಸಬೇಕೆಂಬ ಯುಕ್ತಿವಾದ ಗೊತ್ತಿರುವುದರಿಂದ ಅವನು ಸತ್ಯವನ್ನು ಸುಳ್ಳೆಂದೂ, ಸುಳ್ಳನ್ನು ಸತ್ಯವೆಂದೂ ಭಾಸ ಉರ್ಮಾಣ ಮಾಡಬಹುದಾಗಿದೆ. ಪ್ರತಿಹಳ್ಳಿಯಲ್ಲಿ ಬ್ರಾಹ್ಮಣ, ವ್ಯಾಪಾರಿ ಮತ್ತು ಇತರ ಕಲಿತ ಉಂಡಾಡಿಗಳು ಮೋಸ ವಂಚನೆಯಿಂದ ಹೇಗೆ ವರ್ತಿಸುತ್ತಾರೆನ್ನುವುದನ್ನು ನಾವೆಲ್ಲರೂ ನೋಡಿದ್ದೇವೆ. ಮೋಸ ಮಾಡಲು ಚತುರತೆ ಮತ್ತು ಬುದ್ಧಿ ಬೇಕಾಗುತ್ತದೆ. ಆದರೆ ಚಾತುರ್ಯ ಮತ್ತು ಬುದ್ಧಿಗೆ ಸದಾಚಾರದ ಜೊತೆ ಸಿಕ್ಕರೆ ಅವನು ಮೋಸ ವಂಚನೆ ಮಾಡಲಾರ. ಆದ್ದರಿಂದಲೇ ಕಲಿತವರಿಗೆ ಶೀಲ-ಚಾರಿತ್ರದ ಅಗತ್ಯವಿದೆ. ಚಾರಿತ್ರವಿಲ್ಲದ ಕಲಿಕೆಯಲ್ಲಿ ಜನರ, ಸಮಾಜದ, ದೇಶದ ನಾಶ ಅಡಗಿದೆ. ಆದ್ದರಿಂದಲೇ ಚಾರಿತ್ರಕ್ಕೆ ಶಿಕ್ಷಣಕ್ಕಿಂತಲೂ ಅದೆಷ್ಟೋ ಅಧಿಕ ಮಹತ್ವವಿದೆ ಎನ್ನುವುದು ನಿಮ್ಮ ಲಕ್ಷಕ್ಕೆ ಬಂದಿರಲೂಬಹುದು. ಆದ್ದರಿಂದಲೇ ಪ್ರತಿ ವ್ಯಕ್ತಿಯಲ್ಲಿ ಶೀಲವಿರಬೇಕು.

ನನ್ನ ಮಾತು ಮುಗಿಸುವ ಮುನ್ನ ರಾಜಕಾರಣದ ಕುರಿತು ಒಂದೆರಡು ವಿಷಯ ಹೇಳುವುದು ನನ್ನ ಕರ್ತವ್ಯವೆಂದು ನಾನು ಅಂದುಕೊಂಡಿದ್ದೇನೆ. ಸಾಮಾನ್ಯವಾಗಿ ಜನರು ಬಡತನದಿಂದಾಗಿ ವಿದ್ಯೆಯನ್ನು ಹೊಟ್ಟೆ ತುಂಬಿಸಿಕೊಳ್ಳಲು ಬಳಸುತ್ತಾರೆ. ನಾನು ಅದರ ಬಗೆಗೆ ಅವರನ್ನು ದೂಷಿಸುವುದಿಲ್ಲ. ಶಿಕ್ಷಣ ಪಡೆದವರ ಸಮಸ್ಯೆಗಳನ್ನು ನೀವು ನಿರ್ಲಕ್ಷಿಸುವಂತಿಲ್ಲ. ಇಂದು ಸ್ಪಶ್ಯ ಸಮಾಜ ಅಧಿಕಾರರೂಢವಾಗಿದೆ. ಅದರಿಂದಾಗಿ ಸ್ಪಶ್ಯರಾಗಿದ್ದವರ ಸ್ಥಿತಿ ತುಂಬ ಸಮಾಧಾನಕಾರಕವಾಗಿದೆ. ಅದರ ಮಾರ್ಗ ಎಲ್ಲ ದೃಷ್ಟಿಯಿಂದ ಸುಖಕರವಾಗಿದೆ. ಅದರ ವಿರುದ್ಧ ನಿಮ್ಮ ಮಾರ್ಗ ಮಾತ್ರ ಕಂಟಕಮಯವಾಗಿದೆ. ಯಾವ ಉಪಾಯದಿಂದ ಆ ಮಾರ್ಗ ಸುಲಭವಾಗಬಹುದು ಎಂಬ ಬಗೆಗೆ ನೀವು ಈಗಿನಿಂದಲೇ ಯೋಚಿಸಬೇಕು. ಎಲ್ಲ ದೃಷ್ಟಿಯಿಂದ ನಮ್ಮ ಸಮಾಜವು ತುಳಿತಕ್ಕೊಳಗಾಗಿದೆ. ಇಲ್ಲಿ ಅದರ ವಿವರ ನೀಡುವುದು ಸಾಧ್ಯವಿಲ್ಲ. ನಾವು ಅಲ್ಪಸಂಖ್ಯಾತರು; ಸಂಖ್ಯೆಯ ಬಲದಿಂದ ಸ್ಪಶ್ಯರಾದವರು ದೌರ್ಜನ್ಯ ಮಾಡುತ್ತಲಿದ್ದಾರೆ. ಇಂದು ನಾವು ಕೋರ್ಟು ಕಚೇರಿಗೆ ಹೋದರೆ ನಿಮಗೆ ಕಾಣಿಸುವುದೇನು? ನ್ಯಾಯಾಧೀಶ ಬ್ರಾಹ್ಮಣ, ಗುಮಾಸ್ತ ಬ್ರಾಹ್ಮಣ, ಫೌಜಿದಾರ್ ಬ್ರಾಹ್ಮಣ. ಇಂಥ ಪರಿಸ್ಥ್ಥಿತಿಯಲ್ಲಿ ನಮ್ಮ ಖಟ್ಲೆಯ ನ್ಯಾಯಕ್ಕಾಗಿ ಕೋರ್ಟುಕಟ್ಟೆ ಏರಿದರೆ ನ್ಯಾಯಸಿಗಬಹುದೇ? ಖಂಡಿತಕ್ಕೂ ಇಲ್ಲ, ಎಷ್ಟೋ ಖಟ್ಲೆಯ ನಿರ್ಣಯದಲ್ಲಿ ನ್ಯಾಯಾಧೀಶನು ಮಹಾರರ ಪರವಾಗಿ ಮಹಾರ ಸಾಕ್ಷಿದಾರನಿರುವುದರಿಂದ ಅದನ್ನು ನಂಬುವಂತಿಲ್ಲ ಎಂದಿದ್ದಾರೆ. ಆದರೆ ಸ್ಪಶ್ಯ ಜಾತಿಯ ಪರವಾಗಿ ಸ್ಪಶ್ಯ ಸಾಕ್ಷಿದಾರನಿದ್ದರೆ ನ್ಯಾಯಾಧೀಶರು ಆಕ್ಷೇಪವೆತ್ತುವುದಿಲ್ಲ. ಅಷ್ಟೇ ಏಕೆ, ಇಂದಿನ ಕಾಂಗ್ರೆಸ್ ಸಚಿವರೂ ಸಹ ಕಾಂಗ್ರೆಸ್‌ನವನಿಗೆ ಸಹಾಯ ಮಾಡಲು ಮುಂದಾಗುತ್ತಾನೆ. ಇಂಥ ಪರಿಸ್ಥಿತಿಯಲ್ಲಿ ಆಯಕಟ್ಟಿನ ಜಾಗ ನಮಗೆ ಹಸ್ತಗತವಾಗದ ಹೊರತು ನಡೆಯುತ್ತಿರುವ ದೌರ್ಜನ್ಯ ನಿಲ್ಲಲಾರದು. ಆದರೆ ಅಂಥ ಜಾಗವನ್ನು ವಶಪಡಿಸಿಕೊಳ್ಳುವುದು ಹೇಗೆ ಎನ್ನುವುದೇ ಯೋಚಿಸಬೇಕಾದ ಸಂಗತಿ.

ಇವತ್ತಂತೂ ಕಳ್ಳರು ಮತ್ತು ವಂಚಕರೆಲ್ಲ ಸ್ಪಶ್ಯ ಕಾಂಗ್ರೆಸಿಗರ ಗೆಳೆಯರಾಗಿದ್ದಾರೆ. ಅವರ ಗುಂಪು ಸೇರಿದವರತ್ತ ಮಾತ್ರ ಸಹಾನುಭೂತಿಯ ನೋಟ ಬೀರುತ್ತಾರೆ. ಯಾರು ಅವರ ಗುಂಪಿಗೆ ಸೇರುವುದಿಲ್ಲವೋ ಅವರತ್ತ ಕ್ರೂರವಾದ ನೋಟಬೀರುತ್ತಾರೆಂಬ ಅನುಭವ ನಮಗೆಲ್ಲ ಇದೆ. ಈ ಕಾರಣಕ್ಕಾಗಿ ನಾನು ನಿಮಗೆರಡು ಸಂಗತಿ ಹೇಳಲು ಬಯಸುತ್ತೇನೆ. ಮೊದಲನೆಯದು ನಾವೆಲ್ಲರೂ ಸಂಘಟಿತರಾಗಬೇಕು. ನಾವು ಅಸ್ಪಶ್ಯರಾಗಿರುವ ಜನರೆಲ್ಲ ಒಗ್ಗಟ್ಟಾಗದಿದ್ದರೆ ಈ ಭೇದದ ಕೋಟೆಗೆ ಎಲ್ಲಾದರೂ ಬಿರುಕುಬಿಡದೆ ಇರದು. ಜನರು ಅಜ್ಞಾನಿಗಳಾಗಿದ್ದಾರೆ. ಅವರಿಗೆ ಓದುಬರಹ ಬರುವುದಿಲ್ಲ. ಊರಿನ ಉಚ್ಚವರ್ಗದವರು ಹೇಳಿದಂತೆ ಅವರು ವರ್ತಿಸುತ್ತಾರೆ. ಯೋಚಿಸುವುದೂ ಇಲ್ಲ. ಭಯದಿಂದಾಗಿ ಜನರು ಬೇರ್ಪಡುವ ಸಾಧ್ಯತೆಯೇ ಹೆಚ್ಚು. ಈ ಒಗ್ಗಟ್ಟಿಗಾಗಿ ವಿದ್ಯಾರ್ಥಿ ಸಮೂಹ ಏನು ಮಾಡಲು ಸಿದ್ಧವಾಗಿದೆ? ಈ ಒಗ್ಗಟ್ಟನ್ನು ವಿದ್ಯಾರ್ಥಿಗಳು ಹೇಗೆ ಸಂಭಾಳಿಸುತ್ತಾರೋ ಎಂಬ ಬಗೆಗೆ ಶಂಕೆಯಿದೆ. ಅವರು ತಮ್ಮ ವಿದ್ಯಾರ್ಥಿದಿಶೆಯಲ್ಲಿ ವಿದ್ಯೆ ಪಡೆಯಲು ಶತಪ್ರಯತ್ನ ಮಾಡಬೇಕು. ಅದು ತುಂಬ ಸಮಾಧಾನ ತಂದು ಕೊಡುವ ಸಂಗತಿ. ಅದರ ಜೊತೆಗೆ ಸಂಘಟನೆಯ ಕಾರ್ಯದ ಆಂಶಿಕ ಭಾರವನ್ನು ಅವರು ತಮ್ಮ ಹೆಗಲ ಮೇಲೆ ಹೋರಬೇಕು. ನಮ್ಮೆಲ್ಲರ ಬಯಕೆಯನ್ನು ಈಡೇರಿಸುವ ಸಾಮರ್ಥ್ಯ ನಮಗಾರಿಗೂ ಇಲ್ಲ. ಹೀಗಾಗಿ ವೈಯಕ್ತಿಕ ಆಶೆ-ಆಕಾಂಕ್ಷೆ ಈಡೇರದಿದ್ದಾಗ ನಾವು ತಕ್ಷಣ ವಿಪರೀತವಾಗಿ ವರ್ತಿಸುವುದರಿಂದ ನಮ್ಮ ಆತ್ಮನಾಶವನ್ನು ನಾವೇ ಮಾಡಿಕೊಂಡಂತಾಗುತ್ತದೆ. ಆದ್ದರಿಂದ ಈ ಸಂಗತಿಯನ್ನು ಕಣ್ಣೆದುರಿಗಿಸಿಕೊಂಡು ಸ್ವಾರ್ಥವನ್ನು ತ್ಯಜಿಸಿ ಸಂಘಟನೆಗಾಗಿ ನಾವೆಲ್ಲ ಹೋರಾಡಬೇಕು. ವ್ಯಕ್ತಿಗತ ಸ್ವಾರ್ಥಕ್ಕಿಂತ ಸಮಾಜದ ಹಿತಕ್ಕಾಗಿ ನಾವು ಹೆಚ್ಚು ಗಮನ ಹರಿಸಬೇಕು.

 ಎರಡನೆಯ ಸಂಗತಿ ಎಂದರೆ ನಮ್ಮ ಉದ್ಧಾರಕ್ಕಾಗಿ ಹರಿಜನ ಸೇವಕ ಸಂಘದಂತಹ ಸಾವಿರಾರು ಸಂಸ್ಥೆಗಳು ಸ್ಥಾಪನೆಗೊಂಡಿವೆ. ಆದರೆ ಅವುಗಳ ಅಂತಿಮ ಧ್ಯೇಯವೇನು ಎನ್ನುವುದೇ ಗೊತ್ತಾಗುತ್ತಿಲ್ಲ. ಅವರ ಕಾರ್ಯವು ಕರ್ತವ್ಯದ ಉದ್ದೇಶದಿಂದ ಶುರುವಾಗಿದೆಯೇ ಅಥವಾ ಕೋಳಿಗೆ ಕಾಳುಹಾಕಿ ಕೊಲ್ಲುವ ಸಿದ್ಧತೆಯ ಸ್ವಾರ್ಥ ಬುದ್ಧಿಯದಾಗಿದೆಯೇ? ಈ ಸಂಸ್ಥೆಯ ಲಾಭದ ಪರಿಣಾಮವೇನು ಎನ್ನುವುದೇ ಯೋಚಿಸಬೇಕಾದ ಪ್ರಶ್ನೆ. ಈ ಬ್ರಾಹ್ಮಣ ಸಂಸ್ಥೆಗಳಿಂದ ನಮ್ಮ ವಿದ್ಯಾರ್ಥಿಗಳು ಲಾಭ ಪಡೆದರೆ ‘ಉಂಡ ಮನೆಗೆ ದ್ರೋಹ ಮಾಡಬಾರದು’ ಎಂಬ ಹಲವು ವರ್ಷಗಳ ಬೋಧನೆಯಿಂದ ನಾವು ನಮ್ಮ ಸತ್ವವನ್ನೇ ಮರೆಯುವ ಭೀತಿಯಿದೆ. ಈ ಬಗೆಗಿನ ದ್ರೋಹ, ಭೀಷ್ಮರ ಉದಾಹರಣೆಯಂತೂ ನಮ್ಮ ಕಣ್ಣೆದುರಿಗಿದ್ದೇ ಇದೆ.

ಪಾಂಡವರ ಪ್ರಶ್ನೆಯು ನ್ಯಾಯಯುತವಾಗಿರುವಾಗ ನೀವು ಅವರ ವಿರುದ್ಧ ಹೇಗೆ ಹೋರಾಡುತ್ತೀರಿ ಎಂಬ ಪ್ರಶ್ನೆಯು ಭೀಷ್ಮನಿಗೆ ಕೇಳಿದಾಗ, ಅವನು ‘ಅರ್ಥಸ್ಯ ಪುರಷೋ ದಾಸ’ ಎಂದು ಉತ್ತರಿಸಿದ.

‘‘ನಾನು ಯಾರ ಅನ್ನ ತಿನ್ನುತ್ತೇನೋ ಅವರ ಪರವಾಗಿ ಹೋರಾಡ ಬೇಕಾಗುತ್ತದೆ’’ ಈ ಉತ್ತರದಲ್ಲಿ ಮನುಷ್ಯನ ಸರ್ವಸಾಧಾರಣ ಸ್ವಭಾವವನ್ನು ಚಿತ್ರಿಸಲಾಗಿದೆ. ಆದ್ದರಿಂದ ಸ್ಪಶ್ಯಜನರು ಆರಂಭಿಸಿದ ಈ ಸಂಸ್ಥೆಯ ಲಾಭಪಡೆಯುವ ಮುನ್ನ ಅದರ ಬಗೆಗೆ ಯೋಚಿಸುವುದೊಳಿತು.

ಈ ವಿಷಯಕ್ಕೆ ಸಂಬಂಧಿಸಿದ ಒಂದು ಕಥೆಯನ್ನು ನಾನು ಹೇಳಲು ಬಯಸುತ್ತೇನೆ. ದೇವ-ದಾನವರ ಯುದ್ಧದಲ್ಲಿ ದಾನವರ ಗುರು ಶುಕ್ರಾಚಾರ್ಯನಿಗೆ ಸಂಜೀವಿನಿ ವಿದ್ಯೆ ಅವಗತವಾಗಿರುವುದರಿಂದ ಕಾಳಗದಲ್ಲಿ ಮಡಿದ ರಕ್ಕಸರನ್ನು ಅವನು ಜೀವಂತಗೊಳಿಸುತ್ತಿದ್ದ. ಅದರಿಂದ ದಿನೇ ದಿನೇ ದೇವತೆಗಳ ಸೈನ್ಯ ಕಡಿಮೆಯಾಗಲಾರಂಭಿಸಿತು. ಹೀಗಾಗಿ ದೇವತೆಗೆಳೆಲ್ಲ ಒಂದಾಗಿ ಸಾಕಷ್ಟು ಚರ್ಚೆಮಾಡಿ ನಿರ್ಧಾರಕ್ಕೆ ಬಂದರು. ದೇವತೆಗಳ ಗುರುವಿನ ಮಗ ಕಚನನ್ನು ಸಂಜೀವಿನಿ ವಿದ್ಯೆ ಕಲಿಯಲು ದಾನವರ ಗುರುವಿನ ಬಳಿಗೆ ಕಳಿಸುವುದೆಂದು. ಅದರಂತೆ ಕಚನು ವಿದ್ಯೆ ಕಲಿಯಲು ಶುಕ್ರಾಚಾರ್ಯರ ಬಳಿಗೆ ಹೋದ. ಆದರೆ ದಾನವರಿಗೆ ದೇವರ ಈ ಕಾರಸ್ತಾನ ಗೊತ್ತಾಗಿ ಕಚನನ್ನು ಕೊಂದರು. ಅವನನ್ನು ಸುಟ್ಟುಬೂದಿ ಮಾಡಿ ಶುಕ್ರಾಚಾರ್ಯನಿಗೆ ಮದ್ಯದಲ್ಲಿ ಕಲಸಿ ಕುಡಿಯಲು ನೀಡಿದರು. ಉದ್ದೇಶವೇನೆಂದರೆ ಕಚನು ಶುಕ್ರಾಚಾರಿಯ ಮಗಳಾದ ದೇವಯಾನಿಯನ್ನು ಪ್ರೀತಿಸಿ ವಶಪಡಿಸಿಕೊಂಡಿದ್ದ. ಅವನಿಗೆ ಸಂಜೀವಿನಿ ವಿದ್ಯೆ ಕಲಿಸುವಂತೆ ದೇವಯಾನಿ ತಂದೆಯ ಎದುರಿಗೆ ಹಠಹಿಡಿದಿದ್ದಳು. ಅವಳ ಹಠಕ್ಕೆ ಮಣಿದು ಶುಕ್ರಾಚಾರ್ಯನು ಕಚನಿಗೆ ಸಂಜೀವಿನಿ ವಿದ್ಯೆ ಕಲಿಸಿದರೆ ತಮಗೆ ಉಳಿಗಾಲವಿಲ್ಲ ಎಂಬ ಭೀತಿಯಿಂದ. ಮದ್ಯದ ಮೂಲಕ ಅವನ ಬೂದಿ ಶುಕ್ರಾಚಾರ್ಯನ ಉದರ ಸೇರಿದರೆ, ಅವನಿಗೆ ಜೀವದಾನ ಮಾಡಬೇಕಾದರೆ ಶುಕ್ರಾಚಾರ್ಯ ಸಾಯಬೇಕಾಗುತ್ತದೆ. ಇಂಥ ಸ್ಥಿತಿಯಲ್ಲಿ ದೇವಯಾನಿ ಹಠ ಹಿಡಿಯಲಿಕ್ಕಿಲ್ಲ ಎಂಬ ಭಾವನೆಯಿಂದ ದಾನವರು ಇದನ್ನೆಲ್ಲ ಮಾಡಿದರು. ಆದರೆ ಈ ಕಾರಸ್ತಾನ ದೇವಯಾನಿಗೆ ಗೊತ್ತಾದಾಗ ಅವಳು ಶುಕ್ರಾಚಾರಿಯ ಉದರದಲ್ಲಿದ್ದ ಕಚನಿಗೆ ಮೊದಲು ಸಂಜೀವಿನಿ ವಿದ್ಯೆ ಕಲಿಸುವಂತೆ ಹಠ ಹಿಡಿದಳು. ಹೀಗಾಗಿ ಶುಕ್ರಾಚಾರಿ ಕಚನಿಗೆ ವಿದ್ಯೆ ಕಲಿಸಿದ. ಬಳಿಕ ಮಂತ್ರೋಚ್ಛಾರ ಮಾಡಿದ ಕೂಡಲೇ ಕಚ ಗುರುವಿನ ಉದರವನ್ನು ಸೀಳಿ ಹೊರಬಿದ್ದ. ಅದೇ ವಿದ್ಯೆಯ ಬಲದಿಂದ ಅವನು ಶುಕ್ರಾಚಾರಿಯನ್ನು ಮತ್ತೆ ಜೀವಂತಗೊಳಿಸಿದ. ಇದೊಂದು ಅಖ್ಯಾಕೆ. ಕಚನು ದೇವಯಾನಿಯನ್ನು ಮದುವೆಯಾಗುವುದಾಗಿ ಹೇಳಿದರೂ, ತನ್ನ ಗೂಡು ಸೇರಿದ ಕಚನ ಈ ಕಾರ್ಯವನ್ನು ಹಲವರು ಕೃತಘ್ನತೆ ಎನ್ನುತ್ತಾರೆ. ನಮ್ಮ ವಿದ್ಯಾರ್ಥಿಗಳು ಇದನ್ನು ಅನುಕರಿಸಿದರೆ ನನಗೆ ಕೆಡಕು ಎನಿಸಲಾರದು. ಈ ವಿಷಯಕ್ಕೆ ಸಂಬಂಧಿಸಿದ ಆಂಗ್ಲ ಸುಭಾಷಿತ ನೆನಪಾಗುತ್ತದೆ.’ ‘No man can be greatful at the cost of his honour, no woman can be greatfull at the cost of her chastity and no nation can be greatfull at the cost of as liberty'

ಗಾಂಧಿಯ ಸತ್ಯ, ಅಹಿಂಸೆ ನನಗಿಂದೂ ಅರ್ಥವಾಗಿಲ್ಲ. ಸತ್ಯಯಾರಿಗೆ ಯಾವಾಗ ಹೇಳಬೇಕೆಂಬುದರ ಉತ್ತರವನ್ನು ಗಾಂಧಿ ಇವತ್ತಿಗೂ ಕೊಟ್ಟಿಲ್ಲ. ಕಲ್ಪನೆ ಮಾಡಿ, ನನ್ನ ನೆರೆಯಲ್ಲೊಬ್ಬ ಶ್ರೀಮಂತ ಗೃಹಸ್ಥನಿದ್ದಾನೆ. ಅವನು ನನ್ನ ಸ್ನೇಹಿತನಾಗಿರುವುದರಿಂದ ಅವನು ತನ್ನ ಠೇವಣಿಯನ್ನು ಎಲ್ಲಿಡುತ್ತಾನೊ ನನಗೆ ಗೊತ್ತಿದೆ. ಒಂದು ವೇಳೆ ಕಳ್ಳ ಬಂದು ‘ನಿಮ್ಮ ನೆರೆಯವನ ಸಂಪತ್ತು ಎಲ್ಲಿದೆ ಹೇಳು’ ಎಂದರೆ ನಾನು ಸತ್ಯವನ್ನು ಹೇಳಿ ಗೆಳೆಯನಿಗೆ ಮೋಸ ಮಾಡುವುದೇ ಅಥವಾ ಸುಳ್ಳು ಹೇಳಿ ಗೆಳೆಯನ ಪ್ರಾಣ ಉಳಿಸುವುದೇ? ಇಂಥ ಒಂದಲ್ಲ ನೂರು ಉದಾಹರಣೆಯನ್ನು ನೀಡಬಹುದು.

 ಕೊನೆಗೆ ನಾನು ಹೇಳಬೇಕಾಗಿರುವುದಿಷ್ಟೇ, ನೀವು ಎಲ್ಲರೂ ಒಗ್ಗಟ್ಟಾದರೆ ಏನಾದರೂ ಮಾಡುವುದು ಸಾಧ್ಯ. ನಮ್ಮ ಸಮುದಾಯ ದವರ ಮೇಲೆ ಸಾವಿರಾರು ವರ್ಷಗಳಿಂದ ನಡೆಯುತ್ತಿರುವ ದೌರ್ಜನ್ಯ ಮತ್ತು ಅನ್ಯಾಯವನ್ನು ನಿವಾರಣೆ ಮಾಡುವ ಕೆಲಸವನ್ನು ಇಂದಿನ ಪೀಳಿಗೆಯವರು ಸ್ವಸಂತೋಷದಿಂದ ಕೈಗೆತ್ತಿಕೊಳ್ಳಬೇಕು. ನಮ್ಮ ಸಮಾಜದಲ್ಲಿ ಒಗ್ಗಟ್ಟಿನ ಅಗತ್ಯವಿದೆ. ಐಕ್ಯದಿಂದಲೇ ನಾವು ಈ ಕಾರ್ಯ ಮಾಡುವುದು ಸಾಧ್ಯವೆಂದು ನನ್ನ ನಂಬಿಕೆ.

 ಈ ವಿಷಯದಲ್ಲಿ ಶಿಸ್ತನ್ನು ಕಠೋರವಾಗಿ ಪಾಲಿಸಿದರೆ ಮಾತ್ರ ಏನಾದರೂ ಮಾಡುವುದು ಸಾಧ್ಯ. ಇಲ್ಲದಿದ್ದರೆ ಎಲ್ಲೆಡೆ ಗೊಂದಲ ನಿರ್ಮಾಣವಾಗಿ ಸಮಾಜನಾಶ ಮತ್ತು ವಿಘಟನೆಯಾಗಬಹುದು. ಇಂಥ ಸಮಯದಲ್ಲಿ ಎಲ್ಲರೂ ಯೋಗ್ಯ ಮುಂಜಾಗರೂಕತೆಯನ್ನು ವಹಿಸಬೇಕು. ಕೊನೆಗೆ ನಿಮ್ಮಲ್ಲಿ ಸಂಘಟನೆ, ಚಾರಿತ್ರ ಮತ್ತು ಶಿಸ್ತನ್ನು ಬೆಳೆಸಿ, ಸಮಾಜದ ಉನ್ನತಿಗಾಗಿ ಶ್ರಮಿಸಿ ಎಂದು ಹೇಳಿ ನಾನು ನನ್ನ ಭಾಷಣವನ್ನು ಮುಗಿಸುತ್ತೇನೆ.

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News