ಭಯೋತ್ಪಾದನೆಗೆ ಧರ್ಮವನ್ನು ತಳುಕು ಹಾಕುವುದು ನಿಲ್ಲಿಸಿ: ಟಿ.ಎಂ ಶಾಹಿದ್ ತೆಕ್ಕಿಲ್

Update: 2020-01-23 18:44 GMT

ಬೆಂಗಳೂರು, ಜ.23: ಭಯೋತ್ಪಾದಕರಿಗೆ ಧರ್ಮವಿಲ್ಲ, ಅವರನ್ನು ಹಿಂದೂ ಅಥವಾ ಮುಸ್ಲಿಂ ಭಯೋತ್ಪಾದಕ ಎಂದು ವರ್ಗೀಕರಿಸಬಾರದು ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ.ಎಂ ಶಾಹಿದ್ ತೆಕ್ಕಿಲ್ ತಿಳಿಸಿದ್ದಾರೆ.

ಗುರುವಾರ ಪ್ರೆಸ್‌ಕ್ಲಬ್‌ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಗ್ರಗಾಮಿ ಚಟುವಟಿಕೆಯಲ್ಲಿ ಭಾಗಿಯಾಗುತ್ತಿರುವವರನ್ನು ಧರ್ಮದ ಆಧಾರದಲ್ಲಿ ಗುರುತಿಸುತ್ತಿರುವುದು ದುರದೃಷ್ಟಕರ. ಭಯೋತ್ಪಾದಕನಿಗೆ ಜಾತಿ, ಧರ್ಮ ಅಥವಾ ಯಾವುದೇ ಪಂಥಗಳಿಲ್ಲ. ಭಯೋತ್ಪಾದನೆಗೆ ಧರ್ಮವನ್ನು ತಳುಕು ಹಾಕವುದನ್ನು ನಿಲ್ಲಿಸಿ, ಭಯೋತ್ಪಾದಕರು ಯಾರೇ ಇದ್ದರೂ ಸಹ ಅವರನ್ನು ಪ್ರತಿಯೊಬ್ಬರೂ ಖಂಡಿಸಬೇಕಾಗಿದೆ ಎಂದು ಹೇಳಿದರು.

ಧರ್ಮದ ಮೇಲೆ ದೇಶಪ್ರೇಮವನ್ನು ಗುರುತಿಸುವುದನ್ನು ನಿಲ್ಲಿಸಬೇಕು. ದೇಶದಲ್ಲಿ ಭಯೋತ್ಪಾದಕ ಕೃತ್ಯ ನಡೆದರೆ ಮುಸ್ಲಿಮರಿಂದ ಎಂದು ಸುಲಭವಾಗಿ ಮಾತನಾಡುವುದು ಸರಿಯಲ್ಲ. ಇಸ್ಲಾಂ ಧರ್ಮ ಎಂದಿಗೂ ಹಿಂಸೆಯನ್ನು ಬಯಸುವುದಿಲ್ಲ. ಮಂಗಳೂರು ಸ್ಫೋಟಕ ಪ್ರಕರಣದಲ್ಲಿ ಶರಣಾಗಿರುವ ವ್ಯಕ್ತಿ ಮುಸ್ಲಿಂ ಆಗಿದ್ದರೆ ಕತೆಯೇ ಬೇರೆ ಆಗಿರುತಿತ್ತು. ಆತ ಹಿಂದೂ ಎನ್ನುವ ಕಾರಣಕ್ಕೆ ಎಲ್ಲರೂ ಮೌನವಾಗಿದ್ದಾರೆ. ಅಲ್ಲದೇ, ಮಾಧ್ಯಮದವರು ಒಂದೊಂದು ರೀತಿಯ ಬಣ್ಣ ಕಟ್ಟುತ್ತಿದ್ದರು. ಈ ರೀತಿಯ ಬೆಳವಣಿಗೆ ಸರಿಯಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಸರಕಾರ ಬಂದ ನಂತರ ಮಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕ್ಷುಲಕ ವಿಷಯಗಳಿಗೂ ಮುಸಲ್ಮಾನರನ್ನು, ಅವರು ಪಾಕಿಸ್ತಾನದ ಪರ ಅಥವಾ ಭಯೋತ್ಪಾದಕರು ಎಂಬ ಪಟ್ಟ ಕಟ್ಟುತ್ತಿರುವುದು ವಿಷಾದನೀಯ ಎಂದರು.

ಜುಜುಬಿ ಪಾಕಿಸ್ತಾನ

ಕೇಂದ್ರ ಬಿಜೆಪಿ ನಾಯಕರು ಮಾತು ಎತ್ತಿದರೆ ಪಾಕಿಸ್ತಾನ, ಪಾಕಿಸ್ತಾನ ಎನ್ನುತ್ತಾರೆ. ಆ ಜುಜುಬಿ ಪಾಕಿಸ್ತಾನವನ್ನು ತೆಗೆದುಕೊಂಡು ಭಾರತೀಯರು ಏನು ಮಾಡಬೇಕು? ಬೇಕಾದರೆ ಪಾಕಿಸ್ತಾನವನ್ನು ಇಂದೇ ಉಡಾಯಿಸಿಬಿಡಿ, ಅದಕ್ಕೆ ದೇಶದ ಎಲ್ಲ ಮುಸಲ್ಮಾನರು ಬೆಂಬಲಿಸುತ್ತಾರೆ. ಕೋಮುವಾದವನ್ನು ಬಿತ್ತುವ ಕೆಲಸವನ್ನು ಬಿಜೆಪಿಯವರು ನಿಲ್ಲಿಸಬೇಕು ಎಂದು ಕಿಡಿಕಾರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News