ಬೆಂಗಳೂರು: ಸಿಎಎ, ಎನ್‌ಆರ್‌ಸಿ ವಿರೋಧಿಸಿ ಮುಸ್ಲಿಂ ಮಹಿಳೆಯರ ಪ್ರತಿಭಟನೆ

Update: 2020-01-24 16:14 GMT

ಬೆಂಗಳೂರು, ಜ.24: ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ), ರಾಷ್ಟ್ರೀಯ ಪೌರತ್ವ ನೊಂದಣಿ (ಎನ್‌ಆರ್‌ಸಿ) ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ವಿರೋಧಿಸಿ ಫ್ರೇಜರ್ ಟೌನ್‌ನಲ್ಲಿ ಮುಸ್ಲಿಮ್ ಮಹಿಳೆಯರು ಪ್ರತಿಭಟನೆ ನಡೆಸಿದರು.

ಇಲ್ಲಿನ ಎಂಎಂ ರಸ್ತೆಯಲ್ಲಿ ಜಮಾಯಿಸಿದ ನೂರಕ್ಕೂ ಅಧಿಕ ಮುಸ್ಲಿಮ್ ಮಹಿಳೆಯರು, ಕೇಂದ್ರ ಸರಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಬಹುತ್ವ ಭಾರತಕ್ಕೆ ಮಾರಕವಾಗಿರುವ, ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿರುವ ಕಾಯ್ದೆಯನ್ನು ದೇಶದ ಜನರ ಮೇಲೆ ಪ್ರಯೋಗಿಸಲು ಮುಂದಾಗಿದ್ದಾರೆ. ಇದನ್ನು ಜಾರಿಗೆ ನಾವು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಕೇಂದ್ರ ಸರಕಾರ ಕೂಡಲೇ ಕಾಯ್ದೆಯನ್ನು ವಾಪಸ್ಸು ಪಡೆಯಬೇಕು ಎಂದು ಆಗ್ರಹಿಸಿದರು.

ದೇಶದ ಅಭಿವೃದ್ಧಿಗಾಗಿ ಎಲ್ಲ ಧರ್ಮದವರು ಕೊಡುಗೆ ನೀಡಿದ್ದಾರೆ ಹಾಗೂ ನೀಡುತ್ತಿದ್ದಾರೆ. ಇಲ್ಲಿ ಎಲ್ಲರೂ ಒಂದಾಗಿ, ಯಾವುದೇ ಧರ್ಮದ ಭೇದವಿಲ್ಲದೆ, ಸೌಹಾರ್ದಯುತವಾಗಿ ಬದುಕುತ್ತಿದ್ದೇವೆ. ಕೇಂದ್ರ ಸರಕಾರವು ನಮ್ಮ ನಡುವಿನ ಸೌಹಾರ್ದತೆಯನ್ನು ಮುರಿಯಲು ಯತ್ನಿಸುತ್ತಿದೆ ಎಂದು ಕಿಡಿಕಾರಿದರು.

ಕೇಂದ್ರ ಸರಕಾರವು ಈ ಕಾಯ್ದೆಯನ್ನು ಜಾರಿಯ ಮೂಲಕ ದೇಶದ್ರೋಹದ ಕೆಲಸ ಮಾಡುತ್ತಿದೆ. ಅದನ್ನು ವಿರೋಧಿಸಿ ನಾವಿಂದು ನಮ್ಮ ಧ್ವನಿಯನ್ನು ಎತ್ತಿದ್ದೇವೆ. ನೀವು ಎಷ್ಟು ಪ್ರಯತ್ನಿಸಿದರೂ, ನಮ್ಮ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಪ್ರತಿಭಟನಾಕಾರರು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News