ಬೆಂಗಳೂರು: ಸಿಎಎ ವಿರೋಧಿಸಿ ಜೆಡಿಎಸ್ ಬೃಹತ್ ಪ್ರತಿಭಟನೆ

Update: 2020-01-24 16:25 GMT

ಬೆಂಗಳೂರು, ಜ.24: ದೇಶದ ಜನರಿಗೆ ದಾಖಲೆ ಬಹಿರಂಗಪಡಿಸಿ ಎನ್ನುವ ಬಿಜೆಪಿಗರು, ಮೊದಲು ಅವರ ಅಜ್ಜಂದಿರ ದಾಖಲೆಗಳನ್ನು ಸ್ಮಶಾನದಿಂದ ತರುವ ಪ್ರಯತ್ನ ಮಾಡಲಿ ಎಂದು ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ ವಾಗ್ದಾಳಿ ನಡೆಸಿದರು.

ಶುಕ್ರವಾರ ನಗರದ ಪುರಭವನ ಮುಂಭಾಗ ಜೆಡಿಎಸ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ, ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ), ಎನ್‌ಆರ್‌ಸಿ ಪ್ರಕ್ರಿಯೆ, ಎನ್‌ಪಿಆರ್ ವಿರೋಧಿಸಿ ಬೃಹತ್ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಮತದಾರರ ಚೀಟಿಯಿಂದಲೇ ಆಯ್ಕೆಯಾದ ಪ್ರಧಾನಿ ನರೇಂದ್ರ ಮೋದಿ ಸರಕಾರ, ಇದೀಗ ಅದೇ ಮತದಾರರ ಮೇಲೆ ಅನುಮಾನ ವ್ಯಕ್ತಪಡಿಸಿ, ದಾಖಲೆ ಕೇಳುತ್ತಿರುವುದು ದುರಂತವಾಗಿದೆ. ಇದನ್ನು ಸಮರ್ಥಿಸಿಕೊಳ್ಳುತ್ತಿರುವ ಬಿಜೆಪಿಗರು, ತಮ್ಮ ವಂಶಸ್ಥರ ದಾಖಲೆಗಳನ್ನು ತರಬೇಕು, ಅವಕಾಶ ಬಿದ್ದಲ್ಲಿ, ಸ್ಮಶಾನದಿಂದಲೂ ತನ್ನಿ ಎಂದು ಹೇಳಬೇಕು.

ಜನರನ್ನು ಧರ್ಮದ ಆಧಾರದ ಮೇಲೆ ಒಡೆದು ಆಳುವ ತನ್ನ ಕಾರ್ಯಸೂಚಿಯನ್ವಯವೇ ಬಿಜೆಪಿ ಇಂತಹ ವಿಭಜಕ ನೀತಿಗಳನ್ನು ಜಾರಿಗೆ ತರುತ್ತಿದೆ. ಇದರಿಂದ ಮುಸ್ಲಿಮರಿಗಷ್ಟೇ ಅಲ್ಲದೇ ಇತರೆ ಧರ್ಮೀಯರಿಗೂ ಸಮಸ್ಯೆ ಆಗುತ್ತದೆ. ಮುಸ್ಲಿಮರನ್ನು ಇತರರು ಸಂಶಯದ ದೃಷ್ಟಿಯಿಂದಲೇ ನೋಡುವಂತಹ ವಾತಾವರಣವನ್ನು ಬಿಜೆಪಿ ಸೃಷ್ಟಿಸುತ್ತಿದೆ ಎಂದು ದೂರಿದರು.

ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಖ್ ಮಾತನಾಡಿ, ದೇಶದಲ್ಲಿ ಎಲ್ಲರೂ ಒಗ್ಗೂಡಿ ಜೀವನ ನಡೆಸುತ್ತಿದ್ದಾರೆ. ಆದರೆ, ಸಿಎಎ, ಎನ್‌ಆರ್‌ಸಿ ಮೂಲಕ ಸಮಾಜ ಒಡೆಯಲು ಬಿಜೆಪಿ ಕೈಹಾಕಿರುವುದು ಖಂಡನೀಯ. ಈ ಬಗ್ಗೆ ಪಕ್ಷದಿಂದ ಜನ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.

ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಝಫ್ರುಲ್ಲಾ ಖಾನ್ ಮಾತನಾಡಿ, ಬೌದ್ಧ ಧರ್ಮವನ್ನು ಭಾರತದಲ್ಲಿ ನಿರ್ನಾಮ ಮಾಡಿದ ಜನಾಂಗವೇ ಇಂದು, ಸಿಎಎ, ಎನ್‌ಆರ್‌ಸಿ ಮೂಲಕ ಶೂದ್ರರನ್ನು ತುಳಿಯಲು ಮುಂದಾಗಿದೆ. ಈ ಬಗ್ಗೆ ನಾವು ಎಚ್ಚರವಹಿಸಬೇಕು ಎಂದು ಹೇಳಿದರು.

ಬಿಜೆಪಿ ಶಾಸಕ ರೇಣುಕಾಚಾರ್ಯ ಮಸೀದಿಗಳ ಬಗ್ಗೆ ವಿವಾದಿತ ಹೇಳಿಕೆ ನೀಡಿದ್ದಾರೆ. ಆದರೆ, ಇಂತಹ ಅಯೋಗ್ಯರ ಮಾತುಗಳಿಗೆ ನಾವು ಉತ್ತರ ನೀಡುವುದಿಲ್ಲ. ಮಸೀದಿಗಳ ಬಗ್ಗೆ ಅನುಮಾನ ಇದ್ದರೆ, ಒಮ್ಮೆ ಭೇಟಿ ನೀಡಲಿ ಎಂದು ಝಫ್ರುಲ್ಲಾ ನುಡಿದರು.

ಈ ಸಂದರ್ಭದಲ್ಲಿ ಬಿಬಿಎಂಪಿ ಜೆಡಿಎಸ್ ಸದಸ್ಯ ಇಮ್ರಾನ್ ಪಾಷಾ ಸೇರಿದಂತೆ ಹಿರಿಯ ಮುಖಂಡರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News