ವಕ್ಫ್ ಬೋರ್ಡ್ ಯಾವುದೇ ರಾಜಕೀಯ ಪಕ್ಷದ್ದಲ್ಲ, ಮುಸ್ಲಿಮರದ್ದು : ಶಾಫಿ ಸ‌ಅದಿ

Update: 2020-01-24 17:47 GMT

ಬೆಂಗಳೂರು, ಜ.24: ರಾಜ್ಯ ವಕ್ಫ್ ಬೋರ್ಡ್ ಎನ್ನುವುದು ಯಾವುದೇ ರಾಜಕೀಯ ಪಕ್ಷದ ಬಿಟ್ಟಿ ಬಿಕ್ಷೆಯಲ್ಲ. ಅದು ಈ ರಾಜ್ಯದ ಎಲ್ಲ ಮುಸ್ಲಿಮರ ಆಸ್ತಿಯಾಗಿದೆ. ಆದುದರಿಂದ ಯಾವುದೇ ಸಂದರ್ಭ ವಕ್ಫ್ ಇಲಾಖೆಯ ಎಲ್ಲಾ ಕಾರ್ಯಚಟುವಟಿಕೆಗಳೊಂದಿಗೆ ಮುಸ್ಲಿಮರು ಸದಾ ಇರಬೇಕು. ಸಾವಿರಾರು ಕೋಟಿ ರೂ. ಮೌಲ್ಯದ ಆಸ್ತಿಯ ಒಡೆತನ ಹೊಂದಿರುವ ಸ್ವಾಯತ್ತ ಸಂಸ್ಥೆಯಾಗಿದೆ ವಕ್ಫ್ ಬೋರ್ಡ್ ಎಂದು ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಪ್ರಧಾನ ಕಾರ್ಯದರ್ಶಿ, ರಾಜ್ಯ ವಕ್ಫ್ ಬೋರ್ಡ್ ಸದಸ್ಯ ಶಾಫಿ ಸಅದಿ ತಿಳಿಸಿದ್ದಾರೆ.

ವಕ್ಫ್ ಮಂಡಳಿಯ ಎಲ್ಲಾ ಆಸ್ತಿಗಳು ಮುಸ್ಲಿಮ್ ಸಮುದಾಯದ ಶ್ರೇಯಾಭಿವೃದ್ಧಿಗಾಗಿ ವಿನಿಯೋಗ ಆಗಬೇಕಾಗಿದೆ. ಆ ನಿಟ್ಟಿನಲ್ಲಿ ರಾಜ್ಯ ವಕ್ಫ್ ಮಂಡಳಿಯ ಎಲ್ಲ ಸದಸ್ಯರು( ನಿರ್ದೇಶಕರು) ಒಟ್ಟಾಗಿ ಕಾರ್ಯಾಚರಿಸಲಿದ್ದಾರೆ. ವಕ್ಫ್ ಮಂಡಳಿಯೊಳಗೆ ಪಕ್ಷಾಧಾರಿತ ಭಿನ್ನಾಭಿಪ್ರಾಯಗಳಿಲ್ಲ ಎಂದು ತಿಳಿಸಿದರು.

ವಕ್ಫ್ ಕಾಯ್ದೆ ಪ್ರಕಾರ ರಾಜ್ಯ ಸಮಿತಿಗೆ ಆರು ಮಂದಿ ನಿರ್ದೇಶಕರನ್ನು ವಿವಿಧ ಕ್ಷೇತ್ರಗಳಿಂದ ಚುನಾವಣೆ ಮೂಲಕ ಆರಿಸಿ ಬರುತ್ತಾರೆ‌.  ನಾಲ್ಕು ಮಂದಿಯನ್ನು ವಿವಿಧ ಕ್ಷೇತ್ರಗಳಿಂದ ಸರಕಾರ ನಾಮನಿರ್ದೇಶನ ಮಾಡುತ್ತದೆ. ಮಂಡಳಿಯ ಅಧ್ಯಕ್ಷತೆಗೆ ಆಂತರಿಕ ಚುನಾವಣೆ ನಡೆಯುತ್ತದೆ. ಆಯಾ ಕಾಲಕ್ಕೆ ಅದರ ಪ್ರಕ್ರಿಯೆಗಳು ಅದರದೇ ದಿಕ್ಕಿನಲ್ಲಿ ನಡೆಯುತ್ತಿರುತ್ತದೆ. ಅದಕ್ಕೆ ಯಾವುದೇ ರಾಜಕೀಯ ಬಣ್ಣ ಕೊಡಬೇಕಾಗಿಲ್ಲ. ವಕ್ಫ್ ಮೂಲಕ ಸಿಗುವ ಎಲ್ಲಾ ಸೌಲಭ್ಯಗಳನ್ನು ಮುಸ್ಲಿಮ್ ಸಮುದಾಯ ಸದುಪಯೋಗಪಡಿಸುವತ್ತ ಗಮನ ಹರಿಸಬೇಕಾಗಿದೆ. ಈಗಾಗಲೇ ಮಸೀದಿಗಳ ಇಮಾಮ್ -ಮುಅದ್ಸಿನ್ ಗಳಿಗೆ ಗೌರವಧನ ನೀಡಲಾಗುತ್ತಿದ್ದು, ಅದನ್ನು ಮದ್ರಸ ಅಧ್ಯಾಪಕರುಗಳಿಗೂ ವಿಸ್ತರಿಸುವ ಬಗ್ಗೆ ಯೋಚಿಸಲಾಗುತ್ತಿದೆ. ವಕ್ಫ್ ಆಸ್ತಿಗಳ ಆನ್ಲೈನ್ ನೋಂದಣಿ ಹಾಗೂ ದಾಖಲೆಗಳ ಕಂಪ್ಯೂಟರೀಕರಣ ಪ್ರಕ್ರಿಯೆ ಆರಂಭಿಸಲಾಗಿದ್ದು, ಶೀಘ್ರವೇ ಪ್ರಕ್ರಿಯೆ ಮುಕ್ತಾಯವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

ವಕ್ಫ್ ನೋಂದಣಿಯಾಗದ ಸಂಸ್ಥೆಗಳನ್ನು ಸಂಬಂಧಪಟ್ಟವರು ಆದಷ್ಟು ಬೇಗ ನೋಂದಣಿ ಮಾಡುವ ಮೂಲಕ ರಾಜ್ಯ ವಕ್ಫ್ ಮಂಡಳಿಯೊಂದಿಗೆ ಸಹಕರಿಸಬೇಕು. ವಕ್ಫ್ ನ ಯಾವುದೇ ಯೋಜನೆಯಡಿ ಸವಲತ್ತು ಪಡೆಯ ಬಯಸುವವರು ಯಾವುದೇ ರಾಜಕೀಯ ಪ್ರೇರಿತ ಮಧ್ಯವರ್ತಿಗಳನ್ನು ಆಶ್ರಯಿಸದೇ ನೇರವಾಗಿ ವಕ್ಫ್ ಮಂಡಳಿಯನ್ನು ಸಂಪರ್ಕಿಸಿ ಪಡೆಯುವಂತಾಗಬೇಕು‌.‌ ವಕ್ಫ್ ಮಂಡಳಿಯು ಮುಸ್ಲಿಮ್ ಸಮುದಾಯದ ಆಸ್ತಿಯಾಗಿರುವುದರಿಂದ ಯಾವುದೇ ಅದರ ಗುತ್ತಿಗೆಯನ್ನು ವಹಿಸಲು ಯಾವುದೇ ರಾಜಕೀಯ ಪಕ್ಷಕ್ಕೆ ಅವಕಾಶ ಉಂಟಾಗಬಾರದು. ಆ ಕುರಿತು ಎಲ್ಲಾ ಮೊಹಲ್ಲಾ ಆಡಳಿತ ಸಮಿತಿಗಳು, ಮುಸ್ಲಿಮ್ ಸಮುದಾಯದ ಎಲ್ಲ ಸಂಘಟನೆಗಳು ಮುತುವರ್ಜಿ ವಹಿಸಿದರೆ ಇದು ಸಾಧ್ಯವಾಗಬಹುದು. ವಕ್ಫ್ ಆಸ್ತಿಗಳು ದುರ್ಬಳಕೆಯಾಗದಂತೆ ತಡೆಯಲು ಯುವ ತಲೆಮಾರು ಮುಂದೆ ಬರಬೇಕು. ಸೋಷಿಯಲ್ ಮೀಡಿಯಾದ ಯುವ ಬರಹಗಾರರು ಕೂಡ ಸಕ್ರಿಯರಾಗಿ ವಕ್ಫ್ ಆಸ್ತಿಯ ಸದ್ಬಳಕೆಯ ವಿಚಾರದಲ್ಲಿ ಕಾವಲಾಳುಗಳಾಗಿ ಕಾರ್ಯಪ್ರವೃತ್ತರಾಗಬೇಕು. ಸಮುದಾಯದ ಆಸ್ತಿಯ ದುರ್ಬಳಕೆಯಾಗದಂತೆ ತಡೆಯಲು ಯುವಶಕ್ತಿಯು ಸದಾ ಎಚ್ಚರದಲ್ಲಿರಲಿ ಎಂದು ಶಾಫಿ ಸಅದಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News