ಮಾನಸಿಕ ರೋಗ ಅತ್ಯಂತ ಮಾರಕ: ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ

Update: 2020-01-24 18:35 GMT

ಬೆಂಗಳೂರು, ಜ.24 : ದೈಹಿಕ ರೋಗಗಳಿಗಿಂತ ಇಂದಿನ ದಿನಗಳಲಿ ಮಾನಸಿಕ ರೋಗವೇ ಅತ್ಯಂತ ಮಾರಕ ರೋಗವಾಗಿ ಪರಿಣಮಿಸಿದೆ ಎಂದು ಸಾಹಿತಿ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ತಿಳಿಸಿದ್ದಾರೆ.

ಶುಕ್ರವಾರ ನಗರದ ಮಲ್ಲೇಶ್ವರದಲ್ಲಿರುವ ಮಹಾರಾಣಿ ಅಮ್ಮಣ್ಣಿ ಮಹಿಳಾ ಕಾಲೇಜಿನಲ್ಲಿ ನಡೆದ ಡಾ.ಎಂ.ಬಸವಣ್ಣ ಅವರ ಸಿಗ್ನಂಡ್ ಫ್ರಾಯ್ಡಾ ಜೀವನ ದರ್ಶನ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಮನೋವಿಜ್ಞಾನ ಭವಿಷ್ಯದ ವಿಜ್ಞಾನವಾಗಿದ್ದು, ಮನೋರೋಗದ ಸಮಸ್ಯೆ ಕುರಿತು ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಇಂದಿನ ಸಮಾಜಕ್ಕೆ ಮನೋರೋಗ ದೊಡ್ಡ ತಲೆನೋವಾಗಿದೆ. ಎಲ್ಲಾ ವಿಷಯದಲ್ಲೂ ಮನೋವಿಜ್ಞಾನ ಇರುತ್ತದೆ. ಹೀಗಾಗಿ ಭೌತಿಕ ವಿಜ್ಞಾನಕ್ಕಿಂತ ಮನೋವಿಜ್ಞಾನ ಪ್ರಮುಖವಾಗಿದೆ ಎಂದರು.

ವಿದ್ಯಾರ್ಥಿಗಳು ದೊಡ್ಡ ದೊಡ್ಡ ಕನಸು ಕಾಣುವುದರಿಂದ ಆತ್ಮ ವಿಶ್ವಾಸ ಬೆಳೆಸುತ್ತವೆ. ವಿಜ್ಞಾನ ಹಾಗೂ ಮನೋವಿಜ್ಞಾನದ ಪುಸ್ತಕಗಳು ಕನ್ನಡದಲ್ಲಿ ಬರಬೇಕು. ಅಧ್ಯಾಪಕರು ವಿಜ್ಞಾನ ವಿಷಯವನ್ನು ಕನ್ನಡದಲ್ಲಿ ಕಲಿಸುವುದು ಅಗತ್ಯವಿದೆ. ಇಂದಿನ ಮಕ್ಕಳಿಗೆ ಎಲ್ಲಾ ವಿಷಯಗಳ ಪುಸ್ತಕಗಳು ಕನ್ನಡದಲ್ಲಿ ಸಿಗುವಂತೆ ಆಗಬೇಕು ಎಂದು ಹೇಳಿದರು.

ಪಠ್ಯವನ್ನು ಕನ್ನಡದಲ್ಲಿಯೇ ಸಿಗುವಂತಾದರೆ ಕನ್ನಡದ ಕುರಿತು ಮಕ್ಕಳಲ್ಲಿ ಅಭಿಮಾನ ಹುಟ್ಟಲು ಸಾಧ್ಯವಾಗುತ್ತದೆ. ವಾಣಿಜ್ಯ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ಸಿಗುತ್ತಿರುವುದರಿಂದ ಶಿಕ್ಷಣ ಕ್ಷೇತ್ರ ಪ್ರಾಮುಖ್ಯತೆ ಕಳೆದುಕೊಳ್ಳುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

ವಿ.ಕೃ.ಗೋಕಾಕ್ ವ್ಮಾಯ ಟ್ರಸ್ಟ್‌ನ ಕಾರ್ಯದರ್ಶಿ ಅನಿಲ್ ಗೋಕಾಕ್ ಮಾತನಾಡಿ, ಇಂಗ್ಲಿಷ್ ಭಾಷೆ ಅಗತ್ಯವಾಗಿದ್ದಾದರೂ, ಕನ್ನಡದ ನಂತರ ಅದು ಆದ್ಯತೆಯಾಗಲಿ. ಎಲ್ಲ ವಿಷಯದಲ್ಲಿ ಕನ್ನಡ ಪುಸ್ತಕಗಳು ಬರುವ ಅವಶ್ಯಕವಾಗಿದೆ. ಡಾ.ಎಂ. ಬಸವಣ್ಣವರು ಹೆಚ್ಚಾಗಿ ಮನೋವಿಜ್ಞಾನ ಹಾಗೂ ರಾಜ್ಯಶಾಸ ಪುಸ್ತಕವನ್ನು ಕನ್ನಡದಲ್ಲಿ ಪರಿಚಯ ಮಾಡಿದ್ದಾರೆ ಎಂದು ನುಡಿದರು.

 ಡಾ.ಎಂ.ಬಸವಣ್ಣ ಅವರು ಪುಸ್ತಕ ಓದುತ್ತಿದ್ದರೆ ಮಾನವ ವರ್ತನೆಗಳು ಕಣ್ಣು ಮುಂದೆ ಬರುತ್ತವೆ ಎಂದು ಬಣ್ಣಿಸಿದರು. ಈ ಸಂದರ್ಭದಲ್ಲಿ ಮಹಾರಾಣಿ ಅಮ್ಮಣ್ಣಿ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುಷ್ಮಾ ಬಾವ್ಲೆ, ಆಡಳಿತಾಧಿಕಾರಿ ಪ್ರೊ.ಕೆ.ಜಿ.ಲೋಕೇಶ್, ಕೆ.ಸತ್ಯನಾರಾಯಣ ಸೇರಿದಂತೆ ಹಲವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News