ಬಿಬಿಎಂಪಿ ವ್ಯಾಪ್ತಿಯ ಅಕ್ರಮ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿ ಧರಣಿ

Update: 2020-01-24 18:48 GMT

ಬೆಂಗಳೂರು, ಜ.24: ಬಿಬಿಎಂಪಿ ವ್ಯಾಪ್ತಿಯಲ್ಲಿನ ಅಕ್ರಮ ಕಟ್ಟಡಗಳ ನಿರ್ಮಾಣ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಸಮತಾ ಸೈನಿಕ ದಳದ ಕಾರ್ಯಕರ್ತರಿಂದು ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ನಗರದಲ್ಲಿ ಉಳ್ಳವರು ಅಕ್ರಮವಾಗಿ ಭೂಮಿ ವಶಪಡಿಸಿಕೊಂಡು ಅಥವಾ ಯಾವುದೇ ಅಡೆತಡೆಯನ್ನು ಗಮನಿಸದೇ ಕಟ್ಟಡಗಳನ್ನು ನಿರ್ಮಾಣ ಮಾಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಲು ಪಾಲಿಕೆ ಮುಂದಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಬಿ.ಶ್ರೀರಾಮ್, ನಗರದಲ್ಲಿ ಅಕ್ರಮವಾಗಿ ನಡೆಯುತ್ತಿರುವುದಕ್ಕೆ ಬಿಬಿಎಂಪಿಯ ಆಡಳಿತ ವಿಫಲವಾಗಿದೆ. ನಾಮಕಾವಸ್ಥೆಗೆ ಅಷ್ಟೇ ಸರ್ವೆ ಮಾಡುತ್ತಿದೆಯಾದರೂ, ಕಾರ್ಯ ಯೋಜನೆ ರೂಪಿಸಲು ಮುಂದಾಗುತ್ತಿಲ್ಲ. ಇಂದಿನ ಅಧಿಕಾರಿಗಳ ನಿರ್ಲಕ್ಷದಿಂದ ಅನೇಕ ದುರಂತಗಳು ನಡೆಯುತ್ತಿವೆ ಎಂದು ಹೇಳಿದರು.

ಸಂಪಂಗಿರಾಮನಗರ 110ನೇ ವಾರ್ಡ್‌ನಲ್ಲಿರುವ ಒಂದು ಆರು ಅಂತಸ್ಥಿನ ಕಟ್ಟಡ ಅಕ್ರಮ ಎಂದು ಬಿಬಿಎಂಪಿಗೆ ಮಾಹಿತಿ ಇದ್ದರೂ ಅದರ ವಿರುದ್ಧ ಕ್ರಮಕ್ಕೆ ಮುಂದಾಗಿಲ್ಲ. ಈ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುಮೋದಿತ ನಕ್ಷೆಯನ್ನೇ ಹೊಂದಿಲ್ಲ ಎಂದು ಅವರು ಆಪಾದಿಸಿದರು.

ನಗರದಲ್ಲಿ ಅಧಿಕೃತ ಪರವಾನಿಗೆ, ನಕ್ಷೆ ಸೇರಿದಂತೆ ಅಗತ್ಯ ದಾಖಲೆಗಳನ್ನು ಪಡೆಯದೇ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳಿಗೆ ಮಾಹಿತಿಯಿದ್ದರೂ ಕ್ರಮಕ್ಕೆ ಮುಂದಾಗುತ್ತಿಲ್ಲ. ಹೀಗಾಗಿ, ಕೂಡಲೇ ಅಕ್ರಮ ಕಟ್ಟಡಗಳ ಮೇಲೆ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಕ್ರಮಕ್ಕೆ ಮುಂದಾಗದ ಅಧಿಕಾರಿಗಳ ಮೇಲೂ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಡಾ.ಆರ್.ಚಂದ್ರಶೇಖರ್, ಮುನಿಯಮ್ಮ, ರಾಧಮ್ಮ, ವೆಂಕಟೇಶ್ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News