ಅನಾಥರ ಅಂತ್ಯಕ್ರಿಯೆ ನಡೆಸುವ ಚಾಚಾ ಶರೀಫ್ ರಿಂದ ಹಿಡಿದು ಉಚಿತ ಆಹಾರ ನೀಡುವ ಜಗದೀಶ್ ಲಾಲ್ ವರೆಗೆ...

Update: 2020-01-25 18:10 GMT

ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಪದ್ಮ ಪ್ರಶಸ್ತಿಗಳಿಗೆ ಆಯ್ಕೆಯಾದ ಸಾಧಕರ ಹೆಸರುಗಳನ್ನು ಘೋಷಿಸಲಾಗಿದೆ. ಈ ಪೈಕಿ ಹಲವರು ಸಾಮಾನ್ಯ ಜನರಾಗಿದ್ದು, ಸಮಾಜಕ್ಕಾಗಿ, ರೋಗಿಗಳಿಗಾಗಿ, ನಿರಾಶ್ರಿತರಿಗಾಗಿ ಅಸಾಮಾನ್ಯ ಸೇವೆ ಸಲ್ಲಿಸಿದವರು.

80 ವರ್ಷ ವಯಸ್ಸಿನ ಮುಹಮ್ಮದ್ ಶರೀಫ್ 'ಚಾಚಾ ಶರೀಫ್' ಎಂದೇ ಪ್ರಸಿದ್ಧರು. ಉತ್ತರ ಪ್ರದೇಶದ ಫೈಝಾಬಾದ್ ನಲ್ಲಿ ವಾರಸುದಾರರಿಲ್ಲದ ಅನಾಥ ಮೃತದೇಹಗಳ ಅಂತ್ಯಕ್ರಿಯೆಯನ್ನು 25 ವರ್ಷಗಳಿಂದ ನಡೆಸುತ್ತಿದ್ದಾರೆ. ಇವರು ಮೆಕ್ಯಾನಿಕ್ ಕೆಲಸ ಮಾಡಿಕೊಂಡಿದ್ದಾರೆ. ಇದುವರೆಗೆ ಅವರು 25 ಸಾವಿರ ಜನರ ಅಂತ್ಯಕ್ರಿಯೆ ನಡೆಸಿದ್ದಾರೆ. ಯಾವುದೇ ಧರ್ಮದ ವ್ಯಕ್ತಿಯಾದರೂ ಅವರ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸುತ್ತಿದ್ದಾರೆ.

ಕ್ಯಾನ್ಸರ್ ನಿಂದ ಬಳಲುತ್ತಿರುವ 84 ವರ್ಷದ ಜಗದೀಶ್ ಲಾಲ್ ಅಹುಜಾ ಪಾಕಿಸ್ತಾನದ ನಿರಾಶ್ರಿತರು. ಚಂಡೀಗಢದಲ್ಲಿ ಇವರು 15 ವರ್ಷಗಳಿಂದೀಚೆಗೆ ನೂರಾರು ಜನರಿಗೆ, ರೋಗಿಗಳಿಗೆ ಉಚಿತ ಆಹಾರಗಳನ್ನು ನೀಡುತ್ತಿದ್ದಾರೆ. ತಮ್ಮ ಕ್ಯಾನ್ಸರ್ ಚಿಕಿತ್ಸೆಗಾಗಿ ಅಹುಜಾ ಕೋಟ್ಯಾಂತರ ರೂ. ಮೌಲ್ಯದ ಆಸ್ತಿಯನ್ನು ಮಾರಿದ್ದರು. ಆಹಾರ ನೀಡುವುದು ಮಾತ್ರವಲ್ಲದೇ ರೋಗಿಗಳಿಗೆ ಇವರು ಆರ್ಥಿಕ ಸಹಾಯ ಮಾಡುತ್ತಿದ್ದಾರೆ.

ಕಾಶ್ಮೀರದ ಅನಂತ್ ನಾಗ್ ನ ಜಾವೇದ್ ಅಹ್ಮದ್ ತಕ್ ವಿಕಲಚೇತನ ಸಾಮಾಜಿಕ ಕಾರ್ಯಕರ್ತ. ಉಗ್ರ ದಾಳಿಯೊಂದರಲ್ಲಿ ಗಂಭೀರವಾಗಿ ಗಾಯಗೊಂಡ ನಂತರ ಅವರು ವೀಲ್ ಚೇರನ್ನೇ ಆಶ್ರಯಿಸಿದ್ದಾರೆ. 2 ದಶಕಗಳಿಂದ ಜಾವೆದ್ ವಿಕಲಚೇತನ ಮಕ್ಕಳಿಗಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಇಂತಹ ಮಕ್ಕಳಿಗಾಗಿ ಝೈಬಾ ಆಪಾ ಎನ್ನುವ ಶಾಲೆಯನ್ನು ಸ್ಥಾಪಿಸಿದ್ದು, ಮಕ್ಕಳಿಗೆ ಈ ಶಾಲೆಯಲ್ಲಿ ಉಚಿತ ಶಿಕ್ಷಣ ನೀಡಲಾಗುತ್ತಿದೆ.

ಭೋಪಾಲ್ ಅನಿಲ ದುರಂತದ ಸಂತ್ರಸ್ತರ ನ್ಯಾಯಕ್ಕಾಗಿ 35 ವರ್ಷಗಳ ಕಾಲ ಹೋರಾಡಿದ ಅಬ್ದುಲ್ ಜಬ್ಬಾರ್ ಈ ಪಟ್ಟಿಯಲ್ಲಿರುವ ಮತ್ತೊಬ್ಬ ಸಾಧಕ. ಮಧ್ಯಪ್ರದೇಶದ ಅಬ್ದುಲ್ ಜಬ್ಬಾರ್ ರಿಗೆ ಮರಣೋತ್ತರ ಪದ್ಮಶ್ರೀ ನೀಡಲಾಗಿದೆ.  ಅನಿಲ ದುರಂತದಲ್ಲಿ ಪತಿಯಂದಿರನ್ನು ಕಳೆದುಕೊಂಡ 2300 ಮಹಿಳೆಯರಿಗೆ ವಿವಿಧ ತರಬೇತಿಗಳನ್ನು ನೀಡಿದರು.

ತಾನು ಕಿತ್ತಳೆ ಮಾರುತ್ತಾ ತನ್ನೂರಿನ ಮಕ್ಕಳು ವಿದ್ಯಾವಂತರಾಗಬೇಕು ಎನ್ನುವ ಕನಸಿನ ಬೆನ್ನುಹತ್ತಿದ 'ಅಕ್ಷರಸಂತ' ಹರೇಕಳ ಹಾಜಬ್ಬ. ಒಂದೂವರೆ ದಶಕದ ಹಿಂದೆ ಕಿತ್ತಳೆ ಹಣ್ಣಿನ ಬುಟ್ಟಿಯನ್ನು ದಿನದ ಕೆಲವು ತಾಸಿನ ಮಟ್ಟಿಗೆ ಬದಿಗೆ ಸರಿಸಿ ತನ್ನೂರಿನ ಮಕ್ಕಳಿಗೆ ಶಿಕ್ಷಣ ನೀಡುವ ಹಂಬಲದೊಂದಿಗೆ ಶಾಲೆ ಕಟ್ಟಲು ಮುಂದಾದರು. ಅಕ್ಷರ ಸಂತ ಬಿರುದಾಂಕಿತ ಹರೇಕಳ ಹಾಜಬ್ಬರ ಯಶೋಗಾಥೆ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯ ಮತ್ತು ಧಾರವಾಡ ಕರ್ನಾಟಕ ವಿಶ್ವವಿದ್ಯಾನಿಲಯದ ಪಠ್ಯಪುಸ್ತಕದಲ್ಲಿ ಸೇರ್ಪಡೆಗೊಂಡಿದ್ದು, ಸಾವಿರಾರು ವಿದ್ಯಾರ್ಥಿಗಳಿಗೆ ಅವರು ಸ್ಫೂರ್ತಿಯ ಚಿಲುಮೆಯಾಗಲಿದ್ದಾರೆ.

ರಾಜಸ್ಥಾನದ ಉಶಾ ಚೌಮಾರ್ ಈ ಹಿಂದೆ ಪೌರ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ನಂತರ ಶೌಚ ಕಾರ್ಮಿಕರಿಗಾಗಿ ಹೋರಾಟಕ್ಕಿಳಿದ ಅವರು ಸುಲಭ್ ಇಂಟರ್ ನ್ಯಾಶನಲ್ ನ ಅಧ್ಯಕ್ಷೆಯಾದರು.

72 ವರ್ಷದ ಕರ್ನಾಟಕದ ತುಳಸಿ ಗೌಡ ಅವರು, ಅನಕ್ಷರಸ್ಥೆ. ಆದರೆ ಕಾಡಿನ ಬಗ್ಗೆ ಅವರಿಗಿರುವ ಜ್ಞಾನ ಅಪರಿಮಿತ. ಬುಡಕಟ್ಟು ಮಹಿಳೆ ತುಳಸಿಯವರು ಕಾಡಿನಲ್ಲಿರುವ ಸಸ್ಯಗಳು ಮತ್ತು ಗಿಡಮೂಲಿಕೆಗಳ ಬಗ್ಗೆ ಅಪಾರ ಜ್ಞಾನವನ್ನು ಹೊಂದಿದ್ದು ಅವರನ್ನು 'ಕಾಡಿನ ಎನ್ ಸೈಕ್ಲೋಪೀಡಿಯಾ' ಎಂದು ಕರೆಯಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News