ಗಣರಾಜ್ಯೋತ್ಸವ ಪರೇಡ್‍: ಪುರುಷರ ಪಡೆಗೆ ಕ್ಯಾ. ತಾನಿಯಾ ಶೇರ್ ಗಿಲ್ ನೇತೃತ್ವ

Update: 2020-01-26 10:16 GMT

ಹೊಸದಿಲ್ಲಿ: ಖಾಕಿ ಸಮವಸ್ತ್ರ ಧರಿಸಿ, ಸಾಂಪ್ರದಾಯಿಕ ಖಡ್ಗ ಹಿಡಿದಿದ್ದ ಕ್ಯಾಪ್ಟನ್ ತಾನಿಯಾ ಶೇರ್ ಗಿಲ್ (26) ಅವರು ದೆಹಲಿಯ ರಾಜಪಥದಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್‍ ನಲ್ಲಿ ಪುರುಷರ ಪಡೆಯ ನೇತೃತ್ವ ವಹಿಸಿ ಗಮನ ಸೆಳೆದರು. ಕಾರ್ಪ್ಸ್ ಆಫ್ ಸಿಗ್ನಲ್ ಪಡೆಯ ನೇತೃತ್ವವನ್ನು ಮಹಿಳಾ ಅಧಿಕಾರಿಯೊಬ್ಬರು ವಹಿಸಿರುವುದು ಇದು ಸತತ ಎರಡನೇ ಬಾರಿ.

ಇತ್ತೀಚೆಗೆ ನಡೆದ ಸೇನಾ ದಿನಾಚರಣೆ ಸಮಾರಂಭದಲ್ಲಿ ಪುರುಷರ ಪಡೆಯ ನೇತೃತ್ವ ವಹಿಸಿದ ಕ್ಯಾಪ್ಟನ್ ಶೇರ್‍ ಗಿಲ್ ಇತಿಹಾಸ ಸೃಷ್ಟಿಸಿದ್ದರು. ಕುಟುಂಬದಲ್ಲಿ ನಾಲ್ಕನೇ ಪೀಳಿಗೆಯ ಅಧಿಕಾರಿಯಾಗಿರುವ ಶೇರ್‍ ಗಿಲ್ ಎಳೆ ವಯಸ್ಸಿನಲ್ಲೇ ಸೇನೆ ಬಗ್ಗೆ ವಿಶೇಷ ಒಲವು ಹೊಂದಿದ್ದರು.

"ನಾನು ಪುಟ್ಟ ಹುಡುಗಿಯಾಗಿದ್ದಾಗಲೇ ಸೇನೆಗೆ ಸೇರಲು ಬಯಸಿದ್ದೆ. ತಂದೆ ಸಮವಸ್ತ್ರ ಧರಿಸಿ ಸಿದ್ಧವಾಗುತ್ತಿದ್ದುದನ್ನು ನೋಡುತ್ತಿದ್ದೆ. ಆಗ ನಾನು ಕೂಡಾ ಒಂದಲ್ಲ ಒಂದು ದಿನ ಸಮವಸ್ತ್ರದ ಗೌರವ ಪಡೆಯಬಲ್ಲೆ ಎಂಬ ವಿಶ್ವಾಸವಿತ್ತು" ಎಂದು ಎನ್‍ ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಅವರು ವಿವರಿಸಿದರು.

"ಮೈದಾನದಲ್ಲಿ ಇಡೀ ಪಡೆಯನ್ನು ಮುನ್ನಡೆಸುವಾಗ ಸಕ್ರಿಯ, ಕೃತಜ್ಞತಾ ಭಾವ ಮತ್ತು ಸಂತೋಷವೆನಿಸುತ್ತದೆ" ಎಂದು ಗಿಲ್ ಬಣ್ಣಿಸಿದರು.

ಲಿಂಗ, ಧರ್ಮ, ಜಾತಿ ಅಥವಾ ಪ್ರದೇಶ ಆಧಾರದಲ್ಲಿ ಸೇನೆಗೆ ನೇಮಕಾತಿ ಸಲ್ಲದು ಎಂದು ಪ್ರತಿಪಾದಿಸಿದ ಅವರು, "ಪ್ರತಿಭೆ ಆಧಾರದಲ್ಲಿ ಅರ್ಹರಿಗೆ ಅವಕಾಶ ಸಿಗಬೇಕು. ನೀವು ಆ ಅರ್ಹತೆ ಹೊಂದಿದ್ದರೆ ನೀವು ಮುಂದುವರಿಯಬಹುದು" ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News