ಸಿಎಎ ಹಿಂಪಡೆಯದಿದ್ದರೆ, ಮತ್ತಷ್ಟು ಮಂದಿ ಬೀದಿಗಿಳಿಯುತ್ತಾರೆ: ಗಾಂಧೀಜಿ ಮೊಮ್ಮಗ ರಾಜಮೋಹನ್ ಗಾಂಧಿ

Update: 2020-01-26 13:41 GMT
ಫೈಲ್ ಚಿತ್ರ

ಬೆಂಗಳೂರು, ಜ.26: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಸಂಪೂರ್ಣ ಸಂವಿಧಾನ ವಿರೋಧಿಯಾಗಿದ್ದು, ಇದನ್ನು ಕೇಂದ್ರ ಸರಕಾರ ಹಿಂಪಡೆಯಲಿ. ಇಲ್ಲದಿದ್ದರೆ, ಮತ್ತುಷ್ಟು ಮಂದಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಾರೆ ಎಂದು ರಾಷ್ಟ್ರಪಿತ ಮಹಾತ್ಮ ಗಾಂಧಿ ಮೊಮ್ಮಗ ರಾಜಮೋಹನ್ ಗಾಂಧಿ ಹೇಳಿದ್ದಾರೆ.

ರವಿವಾರ ಆದಿವಾಸಿ, ಅಲೆಮಾರಿ, ದಲಿತ ಮತ್ತು ಹಿಂದುಳಿದ ಜಾತಿ ಸಂಘಟನೆಗಳ ವೇದಿಕೆ, ನಾವು ಭಾರತೀಯರು ನೇತೃತ್ವದಲ್ಲಿ ಸಿಎಎ, ಎನ್‌ಪಿಆರ್,ಎನ್‌ಆರ್‌ಸಿ ಹಾಗೂ ಇವಿಎಂ ವಿರುದ್ಧ ಹಮ್ಮಿಕೊಂಡಿದ್ದ ಸಂವಿಧಾನದ ಉಳಿವಿಗಾಗಿ ಪ್ರತಿಭಟನಾ ರ್ಯಾಲಿ ಮತ್ತು ಜನ ಜಾಗೃತಿ ಆಂದೋಲನ ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಒಂದು ಜಾತಿ, ಧರ್ಮವನ್ನು ಹೊರಗಿಟ್ಟು ಕಾನೂನು ರೂಪಿಸುವ ಅವಶ್ಯಕತೆ ಇಲ್ಲ. ದೇಶದಲ್ಲಿ ಎಲ್ಲಾ ಧರ್ಮದವರೂ ಜೀವಿಸುವ ಅವಕಾಶವನ್ನು ಡಾ.ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ನೀಡಿದ್ದಾರೆ. ಹಾಗಾಗಿ, ಕೇಂದ್ರ ಸರಕಾರ ಎಲ್ಲರಿಗೂ ಒಳಿತಾಗುವ ಕಾನೂನು ರೂಪಿಸಬೇಕು ಎಂದು ಆಗ್ರಹಿಸಿದರು.

ಈ ಕಾನೂನಿನಿಂದ ಮುಸ್ಲಿಮರಷ್ಟೇ ಅಲ್ಲದೇ ಆದಿವಾಸಿಗಳು, ದಲಿತರು ಸಂಕಷ್ಟಕ್ಕೆ ಒಳಗಾಗುತ್ತಾರೆ. ಸಾಕಷ್ಟು ಮಂದಿಗೆ ಪೌರತ್ವ ಸಿಗುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದ ಅವರು, ಸಿಎಎ ಕಾಯ್ದೆ ಸಂವಿಧಾನ ವಿರೋಧಿ ಆಗಿದೆ.

ಸಿಎಎ ಹೋರಾಟದಲ್ಲಿ ಭಾಗವಹಿಸುವವರ ಧ್ವನಿಗಳಿಗೆ ನಿರ್ಬಂಧ ಹಾಕುವ ದುಸ್ಸಾಹಸಕ್ಕೆ ಕೈ ಹಾಕುವ ಮೂಲಕ ಸರಕಾರ ಅಪಖ್ಯಾತಿಗೆ ಗುರಿ ಆಗಿವೆ. ಅಲ್ಲದೇ ಈ ಕಾಯ್ದೆಯನ್ನು ದೇಶ-ವಿದೇಶಗಳ ವಿವಿಗಳು, ನಾಯಕರು, ಪ್ರಾಧ್ಯಾಪಕರು, ಮಹಿಳೆಯರು, ವಿದ್ಯಾರ್ಥಿಗಳು ಭಾರೀ ಸಂಖ್ಯೆಯಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ನುಡಿದರು.

ಸಿಎಎ ಧರ್ಮದ ಆಧಾರದ ಮೇಲೆ ದೇಶ ವಿಭಜಿಸುತ್ತದೆ. ಅನುಚ್ಛೆದ 14ರ ಅನುಸಾರ ಕಾನೂನಿನ ಮುಂದೆ ಎಲ್ಲರೂ ಸಮಾನರು, ಪ್ರಭುತ್ವವು ಯಾರಿಗೂ ಆ ಸಮಾನತೆ ನಿರಾಕರಿಸಬಾರದು. ಅಥವಾ ಭಾರತದಲ್ಲಿ ಕಾನೂನುಗಳನ್ನು ಸಮಾನವಾಗಿ ರಕ್ಷಿಸಬೇಕು ಎಂದು ಹೇಳುತ್ತದೆ. ಆದರೆ ಸಿಎಎ ಧರ್ಮದ ಆಧಾರದಲ್ಲಿ ಪ್ರತ್ಯೆಕತೆ ಮತ್ತು ತಾರತಮ್ಯದಿಂದ ನೋಡುತ್ತದೆ. ಅಲ್ಲದೆ, ನಮ್ಮ ಸಂವಿಧಾನದ ಪೀಠಿಕೆಯಲ್ಲಿ ಪ್ರಮುಖವಾಗಿ ಎರಡು ಕಂಬಗಳಿದ್ದು, ಅವು ಏಕತೆ ಮತ್ತು ಸ್ವಾತಂತ್ರವಾಗಿದೆ ಎಂದು ರಾಜಮೋಹನ್ ಗಾಂಧಿ ಹೇಳಿದರು.

ಈ ಸಂದರ್ಭದಲ್ಲಿ ಸಾಹಿತಿ ದೇವನೂರ ಮಹಾದೇವ, ಪ್ರೊ.ಜಿ.ಕೆ.ಗೋವಿಂದ ರಾವ್, ನಿವೃತ್ತ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್, ದಸಂಸ ಮುಖಂಡರಾದ ವಿ. ನಾಗರಾಜ್, ಮಾವಳ್ಳಿ ಶಂಕರ್, ಲಕ್ಷ್ಮಿನಾರಾಯಣ ನಾಗವಾರ, ಇಂಧೂದರ ಹೊನ್ನಾಪುರ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ದೇಶದೆಲ್ಲೆಡೆ ಸಂವಿಧಾನ ವಿರೋಧಿ ನಡೆಯನ್ನು ಖಂಡಿಸಿ ಪ್ರತಿಭಟನೆಗಳು ನಡೆಯುತ್ತಿದ್ದು, ಇದನ್ನು ಸರಕಾರವು ಗಂಭೀರವಾಗಿ ಪರಿಗಣಿಸಿ, ತಾರತಮ್ಯ ಕಾನೂನು ಹಿಂಪಡೆಯಬೇಕು.ಇಲ್ಲದಿದ್ದರೆ, ಅಹಿಂಸಾ ಪ್ರತಿಭಟನೆಗಳ ಕಾವು ಹೆಚ್ಚಾಗಲಿದೆ.

-ರಾಜಮೋಹನ್ ಗಾಂಧಿ ಗಾಂಧಿ ಮೊಮ್ಮಗ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News