ದೇಶಕ್ಕೆ ಗಾಂಧೀಜಿ, ಅಂಬೇಡ್ಕರ್‌ರವರ ಕೊಡುಗೆ ಅಪಾರ: ನಳಿನ್ ಕುಮಾರ್

Update: 2020-01-26 14:46 GMT

ಬೆಂಗಳೂರು, ಜ.26: ಭಾರತ ಪ್ರಜಾಪ್ರಭುತ್ವ ದೇಶವಾಗಲು ಮಹಾತ್ಮ ಗಾಂಧೀಜಿ ಹಾಗೂ ಡಾ. ಬಿ.ಆರ್ ಅಂಬೇಡ್ಕರ್ ಅವರ ಕೊಡುಗೆ ಅಪಾರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಹೇಳಿದ್ದಾರೆ.

ರವಿವಾರ ನಗರದ ಬಿಜೆಪಿ ಕೇಂದ್ರ ಕಾರ್ಯಾಲಯದಲ್ಲಿ ಆಯೋಜಿಸಿದ್ದ 71ನೇ ಗಣರಾಜ್ಯೋತ್ಸವ ದಿನಾಚರಣೆ ಸಂದರ್ಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಪ್ರಜೆಗಳೇ ಆಡಳಿತ ನಡೆಸುವ ವಿಶಿಷ್ಟ ಪ್ರಜಾಪ್ರಭುತ್ವ ನಮ್ಮದು. ಪ್ರಜಾಪ್ರಭುತ್ವವೆಂದರೆ ಸ್ವೇಚ್ಛಾಚಾರವಲ್ಲ. ಕಾನೂನಿನಂತೆ ನಡೆದುಕೊಳ್ಳುವುದು ಈ ಉದ್ದೇಶಕ್ಕಾಗಿಯೇ ಸಂವಿಧಾನವನ್ನು ಜಾರಿಗೆ ತರಲಾಯಿತು ಎಂದು ಹೇಳಿದರು.

ಸ್ವಾತಂತ್ರ ನಂತರದ ಕನಸುಗಳನ್ನು ಪ್ರಧಾನಿ ನರೇಂದ್ರ ಮೋದಿ ಸರಕಾರ ಈಡೇರಿಸುತ್ತಿರುವುದರ ಜತೆಗೆ ಸಂವಿಧಾನ ಬಲಪಡಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದ ಅವರು, ಒಂದು ಕಾಲದಲ್ಲಿ ಭಾರತ ಅಮೆರಿಕ ಆಗಬೇಕು, ಸಿಂಗಪೂರ್ ಆಗಬೇಕು ಎಂದು ಕೆಲವರು ಬಯಸುತ್ತಿದ್ದರು. ಆದರೆ, ಸ್ವತಃ ಅಮೇರಿಕಾ ಭಾರತವಾಗಬೇಕು ಎಂದು ಅಲ್ಲಿನ ಅಧ್ಯಕ್ಷರೇ ಹೇಳಿದ್ದಾರೆ ಎಂದರು.

ರಾಜ್ಯದಲ್ಲಿ ಅಭಿವೃದ್ಧಿ ಪರವಾದ ಆಡಳಿತವಿದ್ದು, ಕಟ್ಟಕಡೆಯ ವ್ಯಕ್ತಿಯ ಕಲ್ಯಾಣಕ್ಕಾಗಿ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರಕಾರ ಸರ್ವ ಸಮಾನತೆಯಡಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಮುರಳೀಧರರಾವ್ ಮಾತನಾಡಿ, ದೇಶಕ್ಕೆ ಸ್ವಾತಂತ್ರ ತಂದುಕೊಟ್ಟ ಹುತಾತ್ಮರು ನಮಗೆ ಸ್ಫೂರ್ತಿಯಾಗಬೇಕು. ವಿಶ್ವಕ್ಕೆ ಇಂದು ಭಾರತದ ಪ್ರಜಾಪ್ರಭುತ್ವ ಮಾದರಿಯಾಗಿದೆ. 370ನೇ ವಿಧಿ ರದ್ದುಗೊಳಿಸಿರುವುದು, ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವ ಮೂಲಕ ಗಾಂಧೀಜಿಯವರ ಕನಸನ್ನು ಮೋದಿ ಸರಕಾರ ನನಸಾಗಿಸಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News