ಕೊಲೆ ಬೆದರಿಕೆ ಪತ್ರದ ಬಗ್ಗೆ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು: ಸಿದ್ದರಾಮಯ್ಯ

Update: 2020-01-26 14:41 GMT

ಬೆಂಗಳೂರು, ಜ. 26: ಮಾಜಿ ಸಿಎಂ ಕುಮಾರಸ್ವಾಮಿ ಸೇರಿದಂತೆ 14 ಗಣ್ಯರಿಗೆ ಕೊಲೆ ಬೆದರಿಕೆ ಪತ್ರ ಬರೆದಿರುವುದನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಇದರ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರನ್ನು ಶಿಕ್ಷಿಸಬೇಕು’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

 ರವಿವಾರ ಸರಣಿ ಟ್ವೀಟ್ ಮಾಡಿರುವ ಅವರು, ಭಯದ ವಾತಾವರಣ ಸೃಷ್ಟಿಸಿ ಜನರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನಗೊಳಿಸುವ ಯಾವುದೇ ಶಕ್ತಿಗಳಾದರೂ ಸರಿ ಅಂಥವರಿಗೆ ತಕ್ಕ ಶಿಕ್ಷೆಯಾಗಲೇಬೇಕು ಎಂದು ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

ಬೆಂಬಲಿಸುವೆ: ‘ಮೈಸೂರಿನಲ್ಲಿ Free Kashmir ಫಲಕ ಹಿಡಿದಿದ್ದ ಯುವತಿಯ ಪರ ನಾನು ವಕಾಲತ್ತು ವಹಿಸುತ್ತಿಲ್ಲ. ನನ್ನ ಲೈಸೆನ್ಸ್ ಅನ್ನು ಹಿಂದೆ ಅಮಾನತು ಮಾಡಿದ್ದರು. ಅಮಾನತು ತೆಗೆಯುವಂತೆ ಅರ್ಜಿ ಸಲ್ಲಿಸಿದ್ದೇನೆ. ಯುವತಿಯ ಪರ ಯಾರೇ ವಕಾಲತ್ತು ವಹಿಸಿದರೂ ಅವರಿಗೆ ಬೆಂಬಲ ನೀಡುತ್ತೇನೆ. ಈ ಬಗ್ಗೆ ಗೊಂದಲ ಬೇಡ’ ಎಂದು ಸಿದ್ದರಾಮಯ್ಯ ಸ್ಪಷ್ಟಣೆ ನೀಡಿದ್ದಾರೆ.

‘ಬಿಜೆಪಿಯವರು ಸಂವಿಧಾನ ವಿರೋಧಿಗಳು. ಸ್ವಾತಂತ್ರ್ಯ ನಂತರ ಸಂಸತ್ತಿನಲ್ಲಿ ಸಂವಿಧಾನ ಮಂಡನೆಯಾದಾಗ ಆಗಿನ ಜನಸಂಘ ಅದನ್ನು ವಿರೋಧಿಸಿತ್ತು. ಆರೆಸೆಸ್ಸ್ ಮತ್ತು ಜನಸಂಘಗಳು ಸಂವಿಧಾನದ ಮೇಲೆ ನಂಬಿಕೆಯಿಟ್ಟವರಲ್ಲ. ಅವರಿಗೆ ಮನುವಾದ, ಮನುಸ್ಮೃತಿ ಮೇಲಷ್ಟೇ ನಂಬಿಕೆ’ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

‘ಪಕ್ಷಕ್ಕೆ ಹಾಗೂ ಜನರ ನಂಬಿಕೆಗೆ ದ್ರೋಹ ಮಾಡಿ, ಬಿಜೆಪಿ ಸೇರಿ ಚುನಾವಣೆಯಲ್ಲಿ ಸೋತು, ಅತ್ತ ಸಚಿವ ಸ್ಥಾನವೂ ಸಿಗದೆ, ಇತ್ತ ಶಾಸಕರೂ ಅಲ್ಲದೆ ಅತಂತ್ರ ಸ್ಥಿತಿಯಲ್ಲಿರುವವರಿಗೆ ತಕ್ಕ ಶಿಕ್ಷೆಯಾಗುತ್ತಿದೆ. ಇದು ನ್ಯಾಯಕ್ಕೆ ಸಂದ ಜಯ’ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

‘ಇಂದಿನ ಸ್ವತಂತ್ರ ಭಾರತ ರಾಯಣ್ಣನಂಥ ಹೋರಾಟಗಾರರ ತ್ಯಾಗ ಬಲಿದಾನದ ಫಲ. ಗಲ್ಲಿಗೇರಿರುವ ಕಡೆ ಕ್ಷಣದಲ್ಲೂ ನಾಡನ್ನು ಬ್ರಿಟಿಷರ ಅಧೀನದಿಂದ ಮುಕ್ತಗೊಳಿಸಬೇಕೆಂದು ತುಡಿಯುತ್ತಿದ್ದ ಅವರ ಮನವೇ ಅವರೊಳಗಿದ್ದ ಅಪ್ರತಿಮ ದೇಶಪ್ರೇಮಕ್ಕೆ ಸಾಕ್ಷಿ. ರಾಯಣ್ಣನ ಸ್ವಾಭಿಮಾನ, ಹೋರಾಟದ ಕಿಚ್ಚು ನಮ್ಮೆಲ್ಲರಿಗೂ ಮಾದರಿ’

-ಸಿದ್ದರಾಮಯ್ಯ ವಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News