ರಾಜಪಥದಲ್ಲಿ ಅನಾವರಣಗೊಂಡ ಭಾರತದ ಮಿಲಿಟರಿ ಶಕ್ತಿ

Update: 2020-01-26 15:10 GMT

ಹೊಸದಿಲ್ಲಿ,ಜ.26: ತನ್ನ ಮಿಲಿಟರಿ ಶಕ್ತಿ,ಸಾಂಸ್ಕೃತಿಕ ವೈವಿಧ್ಯ ಮತ್ತು ಸಾಮಾಜಿಕ-ಆರ್ಥಿಕ ಪ್ರಗತಿಯ ಪ್ರದರ್ಶನಗಳೊಂದಿಗೆ ಭಾರತವು ರವಿವಾರ 71ನೇ ಗಣರಾಜ್ಯೋತ್ಸವ ಸಂಭ್ರಮವನ್ನಾಚರಿಸಿತು.

ರಾಜಪಥದಲ್ಲಿ ನಡೆದ ಪಥ ಸಂಚಲನದ ಕೇಂದ್ರಬಿಂದುವಾಗಿದ್ದ ಸಶಸ್ತ್ರ ಪಡೆಗಳು ವಿವಿಧ ಯುದ್ಧಾಸ್ತ್ರಗಳನ್ನು ಪ್ರದರ್ಶಿಸಿದರೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ಯು ಅತ್ಯಾಧುನಿಕ ತಂತ್ರಜ್ಞಾನಗಳನ್ನು ತೆರೆದಿಟ್ಟಿತ್ತು. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 16 ಮತ್ತು ವಿವಿಧ ಸಚಿವಾಲಯಗಳು ಹಾಗೂ ಇಲಾಖೆಗಳ ಆರು ಸ್ತಬ್ಧಚಿತ್ರಗಳು ಸೇರಿದಂತೆ ಸಾಲಾಗಿ ಸಾಗಿಬಂದ 22 ವರ್ಣರಂಜಿತ ಸ್ತಬ್ಧಚಿತ್ರಗಳು ವಿವಿಧ ಕಲೆ ಮತ್ತು ಜೀವನಶೈಲಿಗಳ ಚಿತ್ರಣಗಳೊಂದಿಗೆ ವೀಕ್ಷಕರನ್ನು ಮುದಗೊಳಿಸಿದವು. ಬ್ರೆಝಿಲ್ ಅಧ್ಯಕ್ಷ ಜೈರ್ ಬೊಲ್ಸಾನೆರೊ ಅವರು ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ದೇಶಕ್ಕಾಗಿ ಹೋರಾಡುತ್ತ ಬಲಿದಾನಗೈದ ವೀರಯೋಧರಿಗೆ ಗೌರವಾರ್ಪಣೆ ಮಾಡುವುದರೊಂದಿಗೆ ಸಮಾರಂಭಕ್ಕೆ ಚಾಲನೆ ದೊರೆಯಿತು. ಪ್ರಧಾನಿಯೋರ್ವರು ಗಣರಾಜ್ಯೋತ್ಸವ ದಿನದಂದು ಅಮರ ಜವಾನ ಜ್ಯೋತಿ ಬದಲು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದ್ದು ಇದು ಪ್ರಥಮವಾಗಿದೆ.

ಭವ್ಯ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಸೇನೆಯ ಸಮರ ಟ್ಯಾಂಕ್ ಭೀಷ್ಮ,ಪದಾತಿ ದಳದ ಯುದ್ಧವಾಹನ ಬಾಲ್‌ವೇ ಮಷಿನ್ ಪಿಕೇಟ್,ವಾಯುಪಡೆಗೆ ಹೊಸದಾಗಿ ಸೇರ್ಪಡೆಗೊಂಡಿರುವ ರಫೇಲ್ ಯುದ್ಧವಿಮಾನ, ಚಿನೂಕ್ ಮತ್ತು ಅಪಾಚೆ ಹೆಲಿಕಾಪ್ಟರ್‌ಗಳು ಪ್ರಮುಖ ಜನಾಕರ್ಷಣೆಗಳಾಗಿದ್ದವು. ಉಪಗ್ರಹ ನಿರೋಧಕ ಅಸ್ತ್ರ ಮಿಷನ್ ಶಕ್ತಿ ಮತ್ತು ಧನುಷ್ ಫಿರಂಗಿ ಕೂಡ ಪ್ರದರ್ಶನದಲ್ಲಿ ಭಾಗಿಯಾಗಿದ್ದವು. ಪಥ ಸಂಚಲನದಲ್ಲಿ ಒಟ್ಟು 16 ತುಕಡಿಗಳು ಭಾಗವಹಿಸಿದ್ದು,ಈ ಪೈಕಿ ಆರು ಭೂಸೇನೆಯದ್ದಾಗಿದ್ದರೆ ಉಳಿದ ತುಕಡಿಗಳು ನೌಕಾಪಡೆ,ವಾಯುಪಡೆ,ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳು,ದಿಲ್ಲಿ ಪೊಲೀಸ್,ಎನ್‌ಸಿಸಿ ಮತ್ತು ಎನ್‌ಎಸ್‌ಎಸ್‌ಗೆ ಸೇರಿದ್ದವು.

 ಸತತ ಎರಡನೇ ವರ್ಷ ಮಹಿಳಾ ಅಧಿಕಾರಿ ಕ್ಯಾ.ತಾನಿಯಾ ಶೇರ್ಗಿಲ್ ಅವರು ಎಲ್ಲ ಪುರುಷರೇ ಇದ್ದ ದಿ ಕಾರ್ಪ್ಸ್ ಆಫ್ ಸಿಗ್ನಲ್ಸ್‌ನ ನೇತೃತ್ವ ವಹಿಸಿದ್ದರು. ಕ್ಯಾ.ಶೇರ್ಗಿಲ್ ಇತ್ತೀಚಿಗೆ ಸೇನಾ ದಿನ ಸಮಾರಂಭದಲ್ಲಿ ಸರ್ವ ಪುರುಷ ತುಕಡಿಗಳ ನೇತೃತ್ವ ವಹಿಸಿದ ಮೊದಲ ಮಹಿಳಾ ಪರೇಡ್ ಅಡ್ಜುಟಂಟ್ ಆಗಿ ಹೊಸ ಇತಿಹಾಸವೊಂದನ್ನು ಸೃಷ್ಟಿಸಿದ್ದರು.

1953ರಲ್ಲಿ ಸ್ಥಾಪನೆಗೊಂಡು ವಿಶ್ವದಲ್ಲಿ ಸಕ್ರಿಯವಾಗಿರುವ ಏಕೈಕ ಅಶ್ವದಳ 61ನೇ ಕ್ಯಾವಲ್ರಿಯ ತುಕಡಿಯೂ ಹಿಂದಿನ ಗ್ವಾಲಿಯರ್ ಲ್ಯಾನ್ಸರ್‌ಗಳ ಸಮವಸ್ತ್ರದಲ್ಲಿ ಪಥಸಂಚಲನದಲ್ಲಿ ಭಾಗವಹಿಸಿತ್ತು.

ಭಾರತೀಯ ನೌಕಾಪಡೆಯು ತನ್ನ ಬೋಯಿಂಗ್ ಪಿ8ಎಲ್ ದೂರ ವ್ಯಾಪ್ತಿ ಸಮುದ್ರ ಗಸ್ತುವಿಮಾನ,ಕೋಲ್ಕತಾ ಕ್ಲಾಸ್ ವಿನಾಶಕ ನೌಕೆ ಮತ್ತು ಕಲವರಿ ಕ್ಲಾಸ್ ಜಲಾಂತರ್ಗಾಮಿಗಳನ್ನು ಪ್ರದರ್ಶಿಸುವುದರೊಂದಿಗೆ ತನ್ನ ಸಾಮರ್ಥ್ಯವನ್ನು ಮೆರೆಸಿತು. 144 ಯುವನಾವಿಕರನ್ನೊಳಗೊಂಡ ನೌಕಾಪಡೆಯ ತುಕಡಿಯ ನೇತೃತ್ವವನ್ನು ಲೆ.ಜಿತಿನ್ ಮಲ್ಕಾಟ್ ವಹಿಸಿದ್ದರು.

ಪಥಸಂಚಲನದಲ್ಲಿ ಭಾಗವಹಿಸಿದ್ದ ಡಿಆರ್‌ಡಿಒ ತುಕಡಿಯು ವೈರಿ ಉಪಗ್ರಹಗಳನ್ನು ಹೊಡೆದುರುಳಿಸುವ ಮಿಷನ್ ಶಕ್ತಿಯ ಪ್ರದರ್ಶನದೊಂದಿಗೆ ಇನ್ನೊಂದು ಜನಾಕರ್ಷಣೆಯಾಗಿತ್ತು. ಸಿಆರ್‌ಪಿಎಫ್‌ನ ಮಹಿಳಾ ಬೈಕ್ ಸವಾರರ ತಂಡವು ತನ್ನ ಮೈನವಿರೇಳಿಸುವ ಸಾಹಸಗಳೊಂದಿಗೆ ಇತಿಹಾಸವನ್ನು ಸೃಷ್ಟಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News