ಗಣರಾಜ್ಯೋತ್ಸವ ಆಚರಣೆ ಬೂಟಾಟಿಕೆ: ಕೇಂದ್ರಕ್ಕೆ ಮೆಹಬೂಬ ಪುತ್ರಿಯ ಕುಟುಕು

Update: 2020-01-26 15:22 GMT
Photo: twitter.com/MuftiIltija

ಹೊಸದಿಲ್ಲಿ,ಜ.26: ಹಿಂದಿನ ಜಮ್ಮು-ಕಾಶ್ಮೀರ ರಾಜ್ಯದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರ ಪುತ್ರಿ ಇಲ್ತಿಝಾ ಮುಫ್ತಿ ಅವರು ಭಾರತೀಯ ಸಂವಿಧಾನದ ಕುರಿತು ಇಬ್ಬಗೆಯ ನಿಲುವಿಗಾಗಿ ಕೇಂದ್ರವನ್ನು ಕಟುವಾಗಿ ಟೀಕಿಸಿದ್ದಾರೆ.

 ರವಿವಾರ ತನ್ನ ತಾಯಿಯ ಟ್ವಿಟರ್ ಹ್ಯಾಂಡಲ್‌ನಿಂದ ಟ್ವೀಟಿಸಿರುವ ಅವರು,ಪ್ರದೇಶದಲ್ಲಿ ಮೊಬೈಲ್ ಫೋನ್ ಸೇವೆಗಳು ಪುನರಾರಂಭಗೊಂಡ ಬೆನ್ನಿಗೇ ಮತ್ತೆ ಕಡಿತಗೊಂಡಿರುವುದನ್ನು ಬೆಟ್ಟು ಮಾಡಿದ್ದಾರೆ.

ಕಣಿವೆಯಲ್ಲಿ ಗಣರಾಜ್ಯೋತ್ಸವದ ಸುಗಮ ಆಚರಣೆಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಮೊಬೈಲ್ ಫೋನ್ ಮತ್ತು ಅಂತರ್ಜಾಲ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತೀಯ ಸಂವಿಧಾನವನ್ನು ಉದ್ದೇಶಪೂರ್ವಕವಾಗಿ ಅಪವಿತ್ರಗೊಳಿಸಿರುವ ಮತ್ತು ಉಲ್ಲಂಘಿಸಿರುವ ಬಿಜೆಪಿ ನೇತೃತ್ವದ ಸರಕಾರದಿಂದ ಗಣರಾಜ್ಯೋತ್ಸವ ಆಚರಣೆಯ ಬೂಟಾಟಿಕೆ ಯಾರನ್ನೂ ಬಿಟ್ಟಿಲ್ಲ. ತನ್ಮಧ್ಯೆ ಕಾಶ್ಮೀರ ಮತ್ತೊಂದು ಸುತ್ತಿನ ನಿರ್ಬಂಧಗಳು ಮತ್ತು ಮೊಬೈಲ್ ಫೋನ್ ಸೇವೆಗಳ ಸ್ಥಗಿತಕ್ಕೆ ಸಾಕ್ಷಿಯಾಗಿದೆ ಎಂದು ಇಲ್ತಿಝಾ ಟ್ವೀಟಿಸಿದ್ದಾರೆ.

 2015,ಆ.15ರಂದು ಶ್ರೀನಗರದಲ್ಲಿ ಸ್ವಾತಂತ್ರ್ಯೋತ್ಸವ ಸಮಾರಂಭದ ತಾಣದ ಬಳಿ ಸುಧಾರಿತ ಸ್ಫೋಟಕ ಸಾಧನವೊಂದನ್ನು ಸ್ಫೋಟಿಸಲು ಮೊಬೈಲ್ ಫೋನ್‌ನ್ನು ಉಗ್ರಗಾಮಿಗಳು ಬಳಸಿದ್ದಾಗಿನಿಂದ ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯೋತ್ಸವ ಸಂದರ್ಭಗಳಲ್ಲಿ ಮೊಬೈಲ್ ಫೋನ್ ಮತ್ತು ಅಂತರ್ಜಾಲ ಸೇವೆಗಳನ್ನು ಕಡಿತಗೊಳಿಸುವುದು ಕಣಿವೆಯಲ್ಲಿನ ಭದ್ರತಾ ವ್ಯವಸ್ಥೆಯ ಭಾಗವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News