ಅಧಿಕಾರದಲ್ಲಿರುವವರು ಸಂವಿಧಾನದ ಆತ್ಮಕ್ಕೇ ಕೈ ಹಾಕಿ ಕೊಲ್ಲುವ ಮಟ್ಟಕ್ಕಿಳಿದಿದ್ದಾರೆ: ಕುಮಾರಸ್ವಾಮಿ

Update: 2020-01-26 16:16 GMT

ಬೆಂಗಳೂರು, ಜ. 26: ‘ಭಾರತೀಯ ಪ್ರಜಾಪ್ರಭುತ್ವದ ಆತ್ಮ ಸಂವಿಧಾನ ಜಾರಿಗೆ ಬಂದ ದಿನವಿದು. ಎಲ್ಲರನ್ನೂ ಸಮಾನರೆಂದು ನೋಡುವ, ಸಮಾನ ಅವಕಾಶ ನೀಡುವ ಸಂವಿಧಾನದ ಆಶಯಗಳನ್ನೇ ಬಳಸಿಕೊಂಡು ಅಧಿಕಾರಕ್ಕೆ ಬಂದ ಶಕ್ತಿಗಳು ಇಂದು ಅದರ ಆತ್ಮಕ್ಕೇ ಕೈಹಾಕಿ ಕೊಲ್ಲುವ ಮಟ್ಟಕ್ಕಿಳಿದಿವೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಟೀಕಿಸಿದ್ದಾರೆ.

ರವಿವಾರ ಸರಣಿ ಟ್ವೀಟ್ ಮಾಡಿರುವ ಅವರು, ಆ ಮೂಲಕ ಶಾಶ್ವತ ಅಧಿಕಾರ ರಕ್ಷಣೆಗೆ ಮುಂದಾಗಿವೆ. ಇದರ ವಿರುದ್ಧ ಹೋರಾಡುವ ಪಣ ನಮ್ಮದಾಗಲಿ ಎಂದು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

‘ಪ್ರಮಾಣ ವಚನದಲ್ಲಿ ಹಸಿರು ಶಾಲು ಹೊದ್ದು ಹಲ್ಲು ಕಿರಿದರೆ ಸಾಲದು, ಕಿಸಾನ್ ಸಮ್ಮಾನ್ ಎಂಬ ಹೆಸರಲ್ಲಿ ಪ್ರಧಾನಿ ಬೂಟಾಟಿಕೆ ಮಾಡಿದರೆ ಆಗದು. ಕೇಂದ್ರ ಸರಕಾರ ಕೂಡಲೇ ರೈತರ ಬೆಳೆ-ಒಡವೆ ಸಾಲದ ಬಡ್ಡಿಯ ಮೇಲಿನ ಸಬ್ಸಿಡಿ ಬಿಡುಗಡೆ ಮಾಡಬೇಕು. ಇಲ್ಲವೇ ರಾಜ್ಯವೆ ಅದನ್ನು ಭರಿಸಬೇಕು. ಇಲ್ಲದಿದ್ದರೆ ಬಿಜೆಪಿ ರೈತ ವಿರೋಧಿ ಎಂಬುದನ್ನು ಒಪ್ಪಬೇಕು’ ಎಂದು ಆಗ್ರಹಿಸಿದ್ದಾರೆ.

‘ರೈತರ ಬೆಳೆ ಮತ್ತು ಒಡವೆ ಸಾಲಗಳ ಬಡ್ಡಿಗೆ ನೀಡಬೇಕಾದ ಸಬ್ಸಿಡಿಯನ್ನು ನಿಲ್ಲಿಸಿರುವ ಸರಕಾರ ರೈತರನ್ನು ಲೇವಾದೇವಿದಾರರಿಗೆ ಶರಣಾಗುವಂತೆ ಮಾಡಿದೆ. ಇನ್ನೊಂದೆಡೆ ಬ್ಯಾಂಕುಗಳಲ್ಲಿರುವ ಬಡವರ ಚಿನ್ನವನ್ನು ಹರಾಜಿನ ಮೂಲಕ ಕೇಂದ್ರ ಸರಕಾರ ಲಪಟಾಯಿಸುತ್ತಿದೆ’ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

‘ನಾನು ಸಿಎಂ ಆಗಿದ್ದಾಗ ರೈತರ ಸಾಲಮನ್ನಾ ಬಗ್ಗೆ ಬಿಜೆಪಿ ಅನುದಿನವೂ ಕಿತಾಪತಿ ಮಾಡಿತು. ಸಾಲಮನ್ನಾ ಆಗಿಲ್ಲ ಎಂದು ಭಾಷಣವೀರ ಮೋದಿ ಕೂಡ ಹೇಳಿದ್ದರು. ಆದರೆ ಇಂದು ಕೇಂದ್ರ ಬಿಜೆಪಿ ಸರಕಾರ ರೈತರ ಬೆಳೆ-ಒಡವೆ ಸಾಲದ ಬಡ್ಡಿ ಮೇಲಿನ ಸಬ್ಸಿಡಿಗೆ ಮಣ್ಣು ಹಾಕಿದೆ’ ಎಂದು ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News