ಪತ್ರಕರ್ತರು ಸೃಜನಶೀಲತೆ ಉಳಿಸಿಕೊಳ್ಳುವುದು ಸವಾಲಿನ ಕೆಲಸ: ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ

Update: 2020-01-26 16:38 GMT

ಬೆಂಗಳೂರು, ಜ. 26: ವೃತ್ತಿಯ ಒತ್ತಡದ ನಡುವೆ ಪತ್ರಕರ್ತರು ಸೃಜನಶೀಲತೆ ಉಳಿಸಿಕೊಳ್ಳುವುದು ಸವಾಲಿನ ಕೆಲಸ ಎಂದು ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಅಭಿಪ್ರಾಯಪಟ್ಟರು.

ರವಿವಾರ ವಾಡಿಯಾ ಸಭಾಂಗಣದಲ್ಲಿ ಸಮನ್ವಿತ ಪ್ರಕಾಶನ ಸಂಸ್ಥೆ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಪತ್ರಕರ್ತ ರಾಜಶೇಖರ ಜೋಗಿನ್ಮನೆ ವಿರಚಿತ ‘ಇಗ್ಗಪ್ಪಣ್ಣನ ವಿಗ್ರಹಾನ್ವೇಷಣೆ ಕಥಾ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದ ಅವರು, ದೃಶ್ಯ ಮತ್ತು ಸಮೂಹ ಮಾಧ್ಯಮ ಪ್ರಭಾವಿ ಮಾಧ್ಯಮ. ಆದರೆ ಪತ್ರಿಕೋದ್ಯಮಿಗಳು ಇತರರ ಧ್ವನಿ ಹೇಳಲು ಹೋಗಿ ತಮ್ಮ ಧ್ವನಿ, ಸೃಜನಶೀಲತೆ ಕಳೆದಕೊಂಡಿದ್ದಾರೆ. ಆದರೆ ಕೃತಿಯ ಲೇಖಕರು ಪ್ರತಕರ್ತರಾಗಿದ್ದರು ಸೃಜನಶೀಲತೆ ಉಳಿಸಿಕೊಂಡಿದ್ದಾರೆ. ಒತ್ತಡದ ಮಧ್ಯೆ ಕೃತಿ ರಚಿಸಿದ್ದಾರೆ ಎಂದು ಶ್ಲಾಘಿಸಿದರು.

 ಬೌದ್ಧಿಕ ಹಾಗೂ ವಾಣಿಜ್ಯ ಜಗತ್ತಿನಲ್ಲಿ ಒಗ್ಗಿಕೊಂಡ ನಾವು ಸಾಹಿತ್ಯ, ರಾಜಕೀಯ, ದೇಶ-ವಿದೇಶ ವಿಚಾರಗಳನ್ನು ಮಾತನಾಡುತ್ತೇವೆ. ಆದರೆ ಪ್ರೀತಿ, ವಾತ್ಸಲ್ಯ, ಸಂಬಂಧ, ಪರಂಪರೆಗಳೆಂಬ ಮನೆಮಾತು ಹಾಗೂ ಭಾವ ಜಗತ್ತನ್ನು ಮರೆತಿದ್ದೇವೆ. ಇಂದು ಆಧುನಿಕತೆ ಹಾಗೂ ಪರಂಪರೆಗೆ ಸಂಬಂಧವೇ ಇಲ್ಲದಂತಾಗಿದೆ. ವಿದ್ವತ್ ಪರಂಪರೆ ಕಾಣೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಒಬ್ಬ ಲೇಖಕ ತನ್ನ ಬಗ್ಗೆ ನಂಬಿಕೆ ಇಟ್ಟುಕೊಂಡು ಬರೆಯಬೇಕು. ಓದಗರಿದ್ದಾರೆ ಎಂಬ ವಿಶ್ವಾಸ ಹಾಗೂ ಬರೆಯುವಿಕೆ ನನ್ನ ಕರ್ತವ್ಯ ಎಂದುಕೊಂಡು ಬರೆಯಬೇಕು. ಅಂದಾಗ ಸಾಹಿತ್ಯವಲಯಕ್ಕೆ ಅನೇಕ ಕೃತಿಗಳು ಬರಲು ಸಾಧ್ಯ ಎಂದರು.

ಲೇಖಕರು ಉತ್ತರ ಕನ್ನಡದವರಾಗಿದ್ದು, ಆ ಭಾಗದ ಪ್ರವಾಸಿತಾಣ, ತಾಳ ಮದ್ದಲೆ ಕಲೆ, ಭಾಷೆಯ ಅಂಶಗಳನ್ನು ಕಥೆ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ಇದೊಂದು ಸಮಕಾಲೀನ ಪರಂಪರೆ ಉಳಿಸಿಕೊಳ್ಳುವ ಕೃತಿ. ಕೃತಿಯಲ್ಲಿ ಕಥೆ ಅಂಶವನ್ನು ರೂಪಕವಾಗಿ ಹೇಳಿರುವುದು ಓದುಗನ ವಿಚಾರಗಳಿಗೆ ಶಕ್ತಿ ತುಂಬುತ್ತದೆ. ಓದುವಾಗ ಜಾನಪದ ಕಥೆ, ಹಿರಿಯ ಕವಿಗಳ, ಲೇಖಕರ ಕಥೆಗಳನ್ನು ನೆನಪಿಗೆ ತರುತ್ತದೆ ಎಂದು ಹೇಳಿದರು.

ಹಿರಿಯ ಸಾಹಿತಿ ಡಾ. ಹಂ.ಪ. ನಾಗರಾಜಯ್ಯ ಮಾತನಾಡಿ, ಬರಹಗಾರರು ತಮ್ಮೂರಿನ ಭಾಷಾ ಸೊಗಡು, ಸಮುದಾಯಗಳ ವಿಶೇಷತೆ, ಪದ್ಧತಿಯನ್ನು ಕಾವ್ಯ, ಕೃತಿಯಲ್ಲಿ ತರಬೇಕು. ಸಾಹಿತ್ಯವನ್ನು ವೈವಿಧ್ಯಮಯವಾಗಿಸಬೇಕು. ಆಗ ಸಮುದಾಯದ ಹಸಿ ಹಸಿ ಸನ್ನಿವೇಶಗಳು, ವಿವಿಧ ಭಾಷೆಗಳು ಕೃತಿಯಲ್ಲಿ ಪ್ರಸ್ತಾಪಗೊಳ್ಳುತ್ತವೆ. ಆಯಾ ಭಾಷೆಯ ಬೇರುಗಳು ಸಾಹಿತ್ಯ ಲೋಕಕ್ಕೆ ಪರಿಚಿತವಾಗುತ್ತವೆ ಎಂದು ಸಲಹೆ ನೀಡಿದರು. ಮೊದಲ ಪ್ರಾಂತೀಯಾ ಭಾಷಾ ಸೊಗಡು ಇತ್ತು. ಇಂದು ಪತ್ರಿಕೆಗಳನ್ನು ನೋಡಿದರೆ ಎಲ್ಲವುಗಳಲ್ಲಿ ಒಂದೇ ರೀತಿಯ ಭಾಷೆ ಕಾಣಿಸುತ್ತದೆ. ಸಾಹಿತ್ಯ, ಪ್ರಪುಲತೆಯ ವಿಚಾರಗಳ ಸ್ಥಳವನ್ನು ರಾಜಕೀಯ ವಿಚಾರಗಳ ಆಕ್ರಮಿಸಿವೆ. ವೈವಿದ್ಯತೆ ನಾಶವಾಗಿದೆ. ಇಂದು ಅವಿಭಕ್ತ ಕುಟುಂಬಗಳು ಒಡೆದು, ಇಬ್ಬರು-ಮೂರು ಮಂದಿ ಕುಟುಂಬವಾಗಿವೆ. ಲೇಖಕರು ಈ ಇಂತಹ ಕೌಟುಂಬಿಕ ವಿಚಾರಗಳತ್ತ ಹೆಚ್ಚು ಗಮನ ಹರಿಸಿರುವುದು ಕೃತಿಯಲ್ಲಿ ಕಾಣುತ್ತದೆ. ಹೀಗಾಗಿ ಕೃತಿ ಓದುಗನನ್ನು ಬೇಗನೇ ಹತ್ತಿರವಾಗಿಸಿಕೊಳ್ಳುತ್ತದೆ ಎಂದು ಹೇಳಿದರು. ಈ ವೇಳೆ ಲೇಖಕ ರಾಜಶೇಖರ ಜೋಗಿನ್ಮನೆ ಅವರನ್ನು ಸನ್ಮಾನಿಸಲಾಯಿತು. ಕಥೆಗಾರ ಕೆ. ಸತ್ಯನಾರಾಯಣ, ಸಮನ್ವಿತ ಸಂಸ್ಥೆ ಮುಖ್ಯಸ್ಥ ಕೆ.ವಿ.ರಾಧಾಕೃಷ್ಣ, ಸಾಹಿತ್ಯಪ್ರೇಮಿಗಳು ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News