ಸಂವಿಧಾನ ಉಳಿಸುವುದು ನಮ್ಮ ಮುಂದಿರುವ ಸವಾಲು: ಮಲ್ಲಿಕಾರ್ಜುನ ಖರ್ಗೆ

Update: 2020-01-26 17:02 GMT

ಬೆಂಗಳೂರು, ಜ. 26: ಆರೆಸ್ಸೆಸ್ ಸಂವಿಧಾನ ಬದಲಿಸಲು ಕೈಗೊಂಡಿರುವ ಯೋಜನೆಗೆ ವಿರುದ್ಧವಾಗಿ, ನಾವು ಸಂವಿಧಾನ ಉಳಿಸಲು ಮುಂದಾಗಬೇಕಾದ ದೊಡ್ಡ ಸವಾಲು ನಮ್ಮ ಮುಂದಿದೆ ಎಂದು ಮಾಜಿ ಕೇಂದ್ರ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ರವಿವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ 71 ನೆ ಗಣರಾಜ್ಯೋತ್ಸವ ಸಮಾರಂಭದ ಬಳಿಕ ಮಾತನಾಡಿದ ಅವರು, ನಮ್ಮ ದೇಶದ ಬ್ರಾಹ್ಮಣೇತರರಿಗೆ ರಕ್ಷಣೆ ಸಿಗುತ್ತಿರುವ ಸಂವಿಧಾನವನ್ನು ಬದಲಾವಣೆಗೆ ಆರೆಸ್ಸೆಸ್ ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಅಂಬೇಡ್ಕರ್‌ರ ಸತತ ಪ್ರಯತ್ನ, ಶ್ರಮದ ಮೂಲಕ ಈ ಸಂವಿಧಾನ ರಚನೆಯಾದ ಪರಿಣಾಮವಿಂದು ಎಲ್ಲರೂ ಸುರಕ್ಷಿತರಾಗಿ ಬದುಕಲು ಸಾಧ್ಯವಾಗಿದೆ ಎಂದರು.

ಆರೆಸ್ಸೆಸ್ ಸಂವಿಧಾನವನ್ನು ಸಂಪೂರ್ಣವಾಗಿ ನಾಶ ಮಾಡಲು ಮುಂದಾಗಿದೆ. ಅದಕ್ಕಾಗಿ, ಅವರು ಬಲಿಷ್ಠವಾದ ಯೋಜನೆಯನ್ನೂ ರೂಪಿಸಿದ್ದಾರೆ. ಆದರೆ, ಅದಕ್ಕೆ ತದ್ವಿರುದ್ಧವಾಗಿ ನಾವು ಸಂವಿಧಾನ ರಕ್ಷಿಸಿಕೊಳ್ಳಲು ಸಂಘಟಿತ ಹೋರಾಟ ರೂಪಿಸಬೇಕಿದೆ. ಅಲ್ಲದೆ, ಎಲ್ಲರೂ ಜಾಗೃತರಾಗಬೇಕಿದೆ ಎಂದು ಅವರು ಸಲಹೆ ನೀಡಿದರು.

ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧದ ಹೋರಾಟಗಳನ್ನು ಬಿಜೆಪಿಯವರು ಹಿಂಸಾತ್ಮಕಗೊಳಿಸಿದ್ದಾರೆ. ಸಮಾಜವನ್ನು ವಿಭಜಿಸಲು ಮನೆ ಮನೆಗೆ ತೆರಳಿ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದ ಅವರು, ಗುಡ್ಡಗಾಡು ಜನರಿಗೆ ದಾಖಲೆಗಳಿರುವುದಿಲ್ಲ. ಅವರಿಗೆ ಜನ್ಮ, ಜಾತಕ ಬರೆಯಲು ಯಾರೂ ಇರುವುದಿಲ್ಲ. ದಾಖಲೆಗಳನ್ನು ಎಲ್ಲಿಂದ ತರುತ್ತಾರೆ ಎಂದು ಪ್ರಶ್ನಿಸಿದರು.

ಜನಸಾಮಾನ್ಯರಿಗೆ ತೊಂದರೆ ಕೊಡುವ ಸಲುವಾಗಿಯೇ ಕೇಂದ್ರ ಸರಕಾರ ಇಂತಹ ಕಾನೂನನ್ನು ತರುತ್ತಿದೆ. ಅಲ್ಪಸಂಖ್ಯಾತರು, ದಲಿತರು, ಹಿಂದುಳಿದವರ್ಗದವರ ಕಾಳಜಿಗಿಂತಲೂ ತೊಂದರೆ ಕೊಡುವ ಕಾನೂನುಗಳೇ ಹೆಚ್ಚಾಗಿ ಜಾರಿಯಾಗುತ್ತಿವೆ. ಇದರ ವಿರುದ್ಧ ಜನ ಸ್ವಪ್ರೇರಣೆಯಿಂದ ಬೀದಿಗಿಳಿದಿದ್ದಾರೆ. ಕಲಬುರಗಿಯಲ್ಲಿ ಲಕ್ಷಾಂತರ ಜನ ಸೇರಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ ಎಂದರು.

ಕಳೆದ ಬಾರಿ ಪ್ರಧಾನಿ ಮೋದಿ ಅಧಿಕಾರಕ್ಕೆ ಬರುವ ಮೊದಲು ಉದ್ಯೋಗ ಸೃಷ್ಟಿಸುತ್ತೇವೆ ಎಂದಿದ್ದರು. ಆದರೆ, ಅವರ ಅವಧಿಯಲ್ಲಿ ನಿರುದ್ಯೋಗದ ಸಮಸ್ಯೆ ಕಳೆದ 45 ವರ್ಷಗಳಿಗಿಂತಲೂ ಹೆಚ್ಚಾಗಿದೆ. ಜಿಡಿಪಿ ಕುಸಿದು ಹೋಗಿದೆ. ದೇಶ ಆರ್ಥಿಕವಾಗಿ ದುಸ್ಥಿತಿಯಲ್ಲಿದೆ ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ಆರ್ಥಿಕ ತಜ್ಞರು ಹೇಳುತ್ತಿದ್ದಾರೆ.

ಆದರೆ ಬಿಜೆಪಿಯವರು ಅದನ್ನು ತಳ್ಳಿ ಹಾಕುತ್ತಿದ್ದಾರೆ. ಅವರದೇ ಪಕ್ಷದ ಕೆಲವರು ಆರ್ಥಿಕ ಸ್ಥಿತಿ ಉತ್ತಮವಾಗಿದೆ ಎಂದು ಹೇಳಿ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ನೊಬೆಲ್ ಪ್ರಶಸ್ತಿ ಪುರಸ್ಕೃತಗಿಂತಲೂ ಇನ್ಯಾರು ಹೇಳಿದರೆ ನಂಬುತ್ತಾರೆ ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News