ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಸಾಂಸ್ಕೃತಿಕ ವೈಭವ

Update: 2020-01-26 17:22 GMT

 ಬೆಂಗಳೂರು, ಜ.26 : ನಗರದ ನಗರದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಚಿಕ್ಕಬಿದರಕಲ್ಲು ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಪ್ರದರ್ಶಿಸಿದ ‘ಭಾರತ ಭಾಗ್ಯವಿದಾತ’ ನೃತ್ಯರೂಪಕ ಮನಸೆಳೆಯಿತು. ಅಲ್ಲದೆ, ಎಲ್ಲರಿಂದಲೂ ಪ್ರಶಂಸೆಗೆ ಪಾತ್ರವಾಯಿತು.

ಭಾರತದ ತಳ ಸಮುದಾಯಗಳ ಆತ್ಮಸ್ಥೈರ್ಯವನ್ನು ಹೆಚ್ಚಿಸಿದ ಮಹಾಚೇತನದ ಜೀವನ ಚರಿತ್ರೆ, ನೊಂದವರ ನೋವಿಗೆ ದನಿಯಾಗಿ ನಿಂತ ಧೀಮಂತ ನಾಯಕನ ಡಾ.ಬಿ.ಆರ್.ಅಂಬೇಡ್ಕರ್ ಅವರ ಆತ್ಮಕತೆ.

ತನ್ನ ಪ್ರತಿಭೆ, ಪರಿಶ್ರಮಗಳಿಂದ ಜಗತ್ತಿನ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಪದವಿ ಪುರಸ್ಕಾರ ಗಳಿಸಿದ ಆರ್ಥಿಕ ತಜ್ಞನ ಯಶೋಗಾಥೆ. ಭಾರತ ಸಂವಿಧಾನ ಶಿಲ್ಪಿ, ಮಾನವತಾವಾದಿಯ ಜೀವಗಾಥೆಯನ್ನು 10 ನಿಮಿಷಗಳ ನೃತ್ಯದ ಮೂಲಕ ಚಿಕ್ಕಬಿದರಲ್ಲು ಪ್ರೌಢಶಾಲೆಯ 800ಮಕ್ಕಳು ಪ್ರದರ್ಶಿಸಿದ್ದು ರೋಮಾಂಚನ ಮೂಡಿಸಿತು.

ಚಾಮರಾಜಪೇಟೆ, ಪಾದನಪುರ ಮತ್ತು ಕಸ್ತೂರಿ ಬಾ ನಗರದ ಬಿಬಿಎಂಪಿ ಪ್ರೌಢಶಾಲೆಯ 600ಕ್ಕೂ ಅಧಿಕ ಮಕ್ಕಳು ಪ್ರದರ್ಶಿಸಿದ ಜಿಡ್ಡುಗಟ್ಟಿದ ಸಮಾಜದಲ್ಲಿನ ಅರ್ಥರಹಿತ ಆಚಾರ-ವಿಚಾರ, ಮೇಲು-ಕೀಳು, ಲಿಂಗಭೇದದ ತಾರತಮ್ಯ, ಶ್ರೀಮಂತ-ಬಡವದಂತಹ ಸಾಮಾಜಿಕ ಸಮಸ್ಯೆಗಳ ವಿರುದ್ಧ ಮಾನವೀಯ ವೌಲ್ಯಗಳ ಆಧಾರದ ಮೇಲೆ ನೈತಿಕ ಸೂತ್ರಗಳ ಹಿನ್ನೆಲೆಯಲ್ಲಿ ಹೋರಾಟ ನಡೆಸಿದ ಬಸವಣ್ಣರ ಕಲ್ಯಾಣ ಕ್ರಾಂತಿಯನ್ನು ದೃಶ್ಯ ರೂಪಕವು ಪ್ರೇಕ್ಷಕರ ಮನಸ್ಸು ಗೆದ್ದಿತು.

 ಸಾಮಾಜಿಕ ಕ್ರಾಂತಿ, 12ನೆ ಶತಮಾನದಲ್ಲಿ ನಡೆದ ಸಮಾಜ ಸುಧಾರಣೆ, ಇಡೀ ಜಗತ್ತಿಗೆ ಅನುಭವ ಮಂಟಪದ ಮೂಲಕ ಸಂಸತ್ತಿನ ಪರಿಕಲ್ಪನೆಯನ್ನು ನೀಡಿದ ಬಸವಣ್ಣರನ್ನು ಮಕ್ಕಳು ಅತ್ಯಂತ ಅಚ್ಚುಕಟ್ಟಾಗಿ ತೋರಿಸಿಕೊಟ್ಟರು. ಬೆಂಗಳೂರು ದಕ್ಷಿಣ ಜಿಲ್ಲೆ ತಾವರೆಕೆರೆ ಎಇಎಸ್ ಮಾಡಲ್ ಕಾನ್ವೆಂಟ್ ಶಾಲೆಯ 600 ಮಕ್ಕಳು ನಡೆಸಿಕೊಟ್ಟ ಹಮಾರ ಭಾರತ್ ಮಹಾನ್ ಎಂಬ ನೃತ್ಯವು ಭಾರತದ ಹೆಗ್ಗಳಿಕೆಯನ್ನು ಎತ್ತಿ ಹಿಡಿಯಿತು.

 ರಾಜ್ಯದ ಆಂತರಿಕ ಭದ್ರತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ರಾಜ್ಯ ಪೊಲೀಸ್ ಇಲಾಖೆಯ ಆಂತರಿಕ ಭದ್ರತಾ ವಿಭಾಗದ ಭಯೋತ್ಪಾದನಾ ನಿಗ್ರಹ ದಳ ಮತ್ತು ನಕ್ಸಲ್ ನಿಗ್ರಹ ಪಡೆಗಳ ಕಾರ್ಯಾಚರಣೆ ಹೆಚ್ಚಿನ ನೀಡಲು ಬಳಸುತ್ತಿರುವ ಬೆಲ್ಜಿಯಂ ಮಾಲಿನೋಯಿಸ್ ಶಫರ್ಡ್ ತಳಿಯ ಶ್ವಾನಗಳ ವಿಶೇಷ ಪ್ರದರ್ಶನ ನಡೆಯಿತು. ದಿ ಆರ್ಮಿ ಸರ್ವೀಸ್ ಕಾಕ್ಸ್ 20 ಸದಸ್ಯರ ತಂಡ ಪ್ರಸ್ತುತಪಡಿಸಿದ ದಿ ಟೊರ್ನಾಡಸ್(ಮೋಟರ್ ಸೈಕಲ್ ಪ್ರದರ್ಶನ)ನಲ್ಲಿ ಬೈಕ್ ಸವಾರರು ನೀಡಿದ ಅಮೋಘ ಪ್ರದರ್ಶನ ಬೆರಗುಗೊಳಿಸಿತು.

ಕರ್ನಾಟಕ ರಾಜ್ಯ ಪೊಲೀಸ್ ಆಂತರಿಕ ಭದ್ರತಾ ವಿಭಾಗ ಗರುಡ ಪಡೆಯ ಅಣುಕು ಪ್ರದರ್ಶನ 27 ಸದಸ್ಯರ ತಂಡದಿಂದ ಮೂಡಿಬಂತು. ಭಯೋತ್ಪಾದನಾ ದಾಳಿಯ ನಿಗ್ರಹ ಕಾರ್ಯಾಚರಣೆಯ ಆಂತರಿಕ ಭದ್ರತಾ ವಿಭಾಗದಲ್ಲಿ ಶಸ್ತ್ರ ಸಜ್ಜಿತ ತರಬೇತಿ ಹೊಂದಿದ ಗರುಡಾ ಪಡೆ ಅಣಕು ಪ್ರದರ್ಶನ ಭಾರಿ ಮೆಚ್ಚುಗೆಗೆ ಪಾತ್ರವಾಯಿತು.

ರಾಜ್ಯಪಾಲ ವಜುಭಾಯಿ ವಾಲ ಧ್ವಜಾರೋಹಣ ನೆರವೇರಿಸಿದ ಕೂಡಲೇ ಸೇನಾ ಹೆಲಿಕಾಪ್ಟರ್‌ನಿಂದ ಪುಷ್ಪವೃಷ್ಟಿ ಮಾಡಲಾಯಿತು. ಬಳಿಕ ಕಿಕ್ಕೇರಿ ಕೃಷ್ಣಮೂರ್ತಿ ಮತ್ತು ತಂಡದವರಿಂದ ನಾಡಗೀತೆ ಮತ್ತು ರೈತಗೀತೆ ನಡೆಸಿಕೊಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News