ಡೆತ್ ನೋಟ್ ನಲ್ಲಿ ಕಿರುಕುಳದ ಸ್ವರೂಪವನ್ನು ಸ್ಪಷ್ಟವಾಗಿ ತಿಳಿಸದಿದ್ದರೆ ಬಲವಾದ ಸಾಕ್ಷಿ ಆಗಲ್ಲ: ಹೈಕೋರ್ಟ್

Update: 2020-01-26 17:33 GMT

ಬೆಂಗಳೂರು, ಜ.26: ಆತ್ಮಹತ್ಯೆ ಮಾಡಿಕೊಂಡ ಬಳಿಕ ಸಿಕ್ಕ ಪತ್ರವೊಂದರಲ್ಲಿ(ಡೆತ್‌ನೋಟ್) ವ್ಯಕ್ತಿಯೊಬ್ಬನ ಹೆಸರು ನಮೂದಿಸಿದ್ದರೆ, ಕಿರುಕುಳದ ಸ್ವರೂಪವನ್ನು ಸ್ಪಷ್ಟವಾಗಿ ತಿಳಿಸದಿದ್ದರೆ, ಆತನನ್ನೆ ಅಪರಾಧಿ ಎಂದು ಪರಿಗಣಿಸಲು ಬರುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಆತ್ಮಹತ್ಯೆಗೂ ಮೊದಲು ಪತ್ನಿ ಬರೆದಿಟ್ಟ ಪತ್ರದ ಹಿನ್ನೆಲೆಯಲ್ಲಿ ಪತಿಯ ವಿರುದ್ಧ ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಕ್ರಿಮಿನಲ್ ಮರು ಪರಿಶೀಲನಾ ಅರ್ಜಿಯನ್ನು ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿದೆ. ಪತ್ನಿಯು ಸರಕಾರಿ ನೌಕರಿಯಲ್ಲಿದ್ದ ಪತಿಯ ವಿರುದ್ಧ ಹೊರಿಸಲಾಗಿದ್ದ ಆತ್ಮಹತ್ಯೆಗೆ ಪ್ರಚೋದನೆ ಆರೋಪವನ್ನು ರದ್ದುಗೊಳಿಸಿದೆ. ಮಾನಸಿಕ ಹಿಂಸೆಯ ಕುರಿತು ಪ್ರಾಸಿಕ್ಯೂಷನ್ ಕೇವಲ ಊಹಾತ್ಮಕವಾಗಿ ಪ್ರಕರಣವನ್ನು ಹೆಣೆಯಲು ಸಾಧ್ಯವಿಲ್ಲ. ಯಾವುದೇ ಕ್ರಿಮಿನಲ್ ಪ್ರಕರಣದಲ್ಲಿ ಆರೋಪಿಯ ವಿರುದ್ಧ ನಿರ್ದಿಷ್ಟ ಮತ್ತು ನಿಖರ ಆರೋಪಗಳು ಇರಬೇಕು. ವೈವಾಹಿಕ ಜೀವನದಲ್ಲಿ ಪತಿ ನೀಡುವ ಕಿರುಕುಳದ ಸ್ವರೂಪವನ್ನು ಸ್ಪಷ್ಟವಾಗಿ ತಿಳಿಸದೇ ಕೇವಲ ಮಾನಸಿಕ ಹಿಂಸೆ ನೀಡಿದ್ದಾನೆ ಎಂದು ಆತ್ಮಹತ್ಯೆಗೂ ಮೊದಲು ಪತ್ರ ಬರೆದಿಟ್ಟರೆ ಅದನ್ನೇ ಬಲವಾದ ಸಾಕ್ಷ ಎಂದು ತೀರ್ಮಾನಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.

ಪ್ರಕರಣವೇನು: ಆರೋಗ್ಯ ಇಲಾಖೆಯಲ್ಲಿ ದ್ವಿತೀಯ ದರ್ಜೆ ನೌಕರರರಾಗಿದ್ದ 28 ವರ್ಷದ ವ್ಯಕ್ತಿ 2014ರ ಫೆಬ್ರುವರಿ 2ರಂದು 24 ವರ್ಷದ ಯುವತಿಯನ್ನು ಮದುವೆಯಾಗಿದ್ದರು. ಮದುವೆಯಾದ ನಾಲ್ಕು ತಿಂಗಳಿಗೇ ಅಂದರೆ, 2014ರ ಜೂನ್ 26ರಂದು ಆಕೆ ತನ್ನ ತವರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ಆತ್ಮಹತ್ಯೆಗೆ ಶರಣಾಗುವ ಮೊದಲು ಡೆತ್ ನೋಟ್ ಬರೆದಿಟ್ಟಿದ್ದ ಮಹಿಳೆ, ನಾನು ಕ್ಯಾನ್ಸ್‌ರ್‌ನಿಂದ ಬಳಲುತ್ತಿದ್ದೇನೆ. ಈ ವಿಷಯ ಯಾರಿಗೂ ಗೊತ್ತಿಲ್ಲ. ಹೆಚ್ಚೆಂದರೆ ಇನ್ನೊಂದು ಮುರ್ನಾಲ್ಕು ತಿಂಗಳು ಬದುಕಬಹುದು. ಆದರೆ, ನನ್ನ ಸಾವಿಗೆ ನನ್ನ ಗಂಡನೇ ಕಾರಣ ಎಂದು ಪೊಲೀಸರಿಗೆ ತಿಳಿಸಬೇಕು ಎಂದು ಕಾಣಿಸಿದ್ದರು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಕೆ.ಬಿ.ಕೆ ಸ್ವಾಮಿ, ಆಕೆಯ ಸಾವಿಗೆ ಕ್ಯಾನ್ಸರ್ ಕಾರಣವಾಗಿರಬಹುದು. ಹೀಗಾಗಿ, ಎರಡು ವಿಚಾರಗಳ ಅಂಶಗಳಿದ್ದಾಗ, ಆರೋಪಿಗೆ ಸಹಕಾರಿಯೆನಿಸುವ ಅಂಶವನ್ನು ಪರಿಗಣಿಸಬೇಕಾಗುತ್ತದೆ ಎಂದು ವಾದ ಮಂಡಿಸಿದ್ದರು. ಈ ಅಂಶವನ್ನು ನ್ಯಾಯಪೀಠ ಪುರಸ್ಕರಿಸಿದೆ.

ಚಿತ್ರದುರ್ಗ ಕೋಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ವಿಚಾರಣೆಯನ್ನು ಅಲ್ಲಿನ ಸೆಷನ್ಸ್ ನ್ಯಾಯಾಲಯ ವಿಚಾರಣೆ ನಡೆಸಿತ್ತು. ಆರೋಪಿಯ ವಿರುದ್ಧ ದೋಷಾರೋಪ ಹೊರಿಸದಂತೆ ಪೊಲೀಸರಿಗೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಪ್ರಾಸಿಕ್ಯೂಷನ್ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಆರೋಪಿ ಪರ ವಕೀಲ ಕಿರಣ್ ಯಾದವ್ ವಕಾಲತ್ತು ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News