ಗಣರಾಜ್ಯೋತ್ಸವ ದಿನಾಚರಣೆಗೆ ಅಧಿಕಾರಿಗಳು ಗೈರು: ಒಂದು ದಿನದ ವೇತನ ಕಡಿತಕ್ಕೆ ಮೇಯರ್ ನಿರ್ಧಾರ

Update: 2020-01-26 17:43 GMT

ಬೆಂಗಳೂರು, ಜ. 26: ಬಿಬಿಎಂಪಿ ಕೇಂದ್ರ ಕಚೇರಿಯ ಆವರಣದಲ್ಲಿ ಆಯೋಜಿಸಲಾಗಿದ್ದ 71ನೆ ಗಣರಾಜ್ಯೋತ್ಸವ ದಿನಾಚರಣೆಗೆ ಗೈರು ಹಾಜರಾಗಿದ್ದ ಬಿಬಿಎಂಪಿ ಅಧಿಕಾರಿಗಳು ಮತ್ತು ನೌಕರರ ಒಂದು ದಿನ ವೇತನವನ್ನು ಕಡಿತಗೊಳಿಸಲು ಮೇಯರ್ ಗೌತಮ್ ಕುಮಾರ್ ನಿರ್ಧರಿಸಿದ್ದಾರೆ.

ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮೇಯರ್ ಗೌತಮ್ ಕುಮಾರ್, ಗಣರಾಜ್ಯೋತ್ಸವ ಸಮಾರಂಭಕ್ಕೆ ಬಿಬಿಎಂಪಿಯ ಅಧಿಕಾರಿ ಮತ್ತು ನೌಕರರು ಪ್ರತಿಯೊಬ್ಬರೂ ಹಾಜರಾಗಬೇಕು ಎಂದು ಸೂಚಿಸಿದ್ದೆ. ಆದರೆ, ಆ ಸೂಚನೆಯನ್ನು ಕಡೆಗಣಿಸಿ ಅಧಿಕಾರಿಗಳು ಮತ್ತು ನೌಕರರು ಸಮಾರಂಭಕ್ಕೆ ಗೈರು ಹಾಜರಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ಗೈರು ಹಾಜರಾದ ಪಾಲಿಕೆ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಮೇಯರ್, ಗೈರು ಹಾಜರಾದ ಎಲ್ಲ ಅಧಿಕಾರಿಗಳ ಒಂದು ದಿನದ ವೇತನವನ್ನು ಕಡಿತಗೊಳಿಸಲಾಗುವುದು ಎಂದು ತಿಳಿಸಿದರು.

ಬಿಬಿಎಂಪಿ ಆಯುಕ್ತ ಬಿ.ಎಚ್ ಅನಿಲ್ ಕುಮಾರ್ ಮಾತನಾಡಿ, ಇದೊಂದು ರೀತಿ ಪಾಲಿಕೆ ಅಧಿಕಾರಿಗಳ ನಿರಾಸಕ್ತಿ. ಎಲ್ಲರೂ ಹಾಜರಾಗುವಂತೆ ಸೂಚಿಸಿದ್ದರೂ ಸಹ ಹಾಜರಾಗಿಲ್ಲ. ಗೈರಾದವರ ಮೇಲೆ ಶಿಸ್ತು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News